ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಚಿತ್ರನಟ ದರ್ಶನ್ ತೂಗುದೀಪ ಸೇರಿದಂತೆ ಏಳು ಆರೋಪಿಗಳ ಜಾಮೀನು ರದ್ದತಿಗೆ ಕೋರಿ ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಯುತ್ತಿದೆ. ಈ ಪ್ರಕರಣದಲ್ಲಿ ದರ್ಶನ್‌ರ ಸಿಗರೇಟ್ ಸೇದಿರುವ ವಿವಾದವನ್ನು ಸರ್ಕಾರದ ಪರ ವಕೀಲ ಸಿದ್ದಾರ್ಥ್ ಲೂತ್ರಾ ನ್ಯಾಯಾಲಯದ ಮುಂದೆ ಮತ್ತೆ ಎತ್ತಿದ್ದಾರೆ.
ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲ ಮತ್ತು ಆರ್. ಮಹದೇವನ್ ಅವರ ಪೀಠದಲ್ಲಿ ಈ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಕರ್ನಾಟಕ ಸರ್ಕಾರವು ದರ್ಶನ್, ಪವಿತ್ರಾ ಗೌಡ ಸೇರಿದಂತೆ ಏಳು ಆರೋಪಿಗಳಿಗೆ ಕರ್ನಾಟಕ ಹೈಕೋರ್ಟ್‌ನಿಂದ ಡಿಸೆಂಬರ್ 13, 2024ರಂದು ಮಂಜೂರಾದ ಜಾಮೀನು ಆದೇಶವನ್ನು ಪ್ರಶ್ನಿಸಿದೆ. ಸರ್ಕಾರದ ಪರವಾಗಿ ಹಿರಿಯ ವಕೀಲ ಸಿದ್ದಾರ್ಥ್ ಲೂತ್ರಾ ವಾದ ಮಂಡಿಸಿದ್ದು, ದರ್ಶನ್‌ರ ಕ್ರಿಮಿನಲ್ ಹಿನ್ನೆಲೆ ಮತ್ತು ಜಾಮೀನಿನ ನಂತರದ ವರ್ತನೆಯನ್ನು ಎತ್ತಿ ತೋರಿಸಿದ್ದಾರೆ.
ಲೂತ್ರಾ ಅವರು, ದರ್ಶನ್ ಜಾಮೀನಿನಲ್ಲಿದ್ದಾಗ ಸಾರ್ವಜನಿಕ ಕಾರ್ಯಕ್ರಮದಲ್ಲಿ ಪ್ರಮುಖ ಸಾಕ್ಷಿಯೊಂದಿಗೆ ವೇದಿಕೆ ಹಂಚಿಕೊಂಡಿದ್ದು ತನಿಖೆಗೆ ತೊಡಕಾಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ದರ್ಶನ್ ಜೈಲಿನಲ್ಲಿದ್ದಾಗ ಇತರ ಅಪರಾಧಿಗಳ ಜೊತೆ ಸಿಗರೇಟ್ ಸೇದಿದ್ದ ಘಟನೆಯನ್ನು ಉಲ್ಲೇಖಿಸಿದ್ದಾರೆ, ಇದು ಆರೋಪಿಯ ವರ್ತನೆಯ ಗಂಭೀರತೆಯನ್ನು ತೋರಿಸುತ್ತದೆ ಎಂದು ವಾದಿಸಿದ್ದಾರೆ.
ಡೆವಿಲ್ ಸಿನಿಮಾ
ದರ್ಶನ್‌ರ ಇತ್ತೀಚಿನ ಚಿತ್ರ ‘ಡೆವಿಲ್’ನ ಮೋಷನ್ ಪೋಸ್ಟರ್ ಈಗಾಗಲೇ ಬಿಡುಗಡೆಯಾಗಿದ್ದು, ಅದರಲ್ಲಿ ದರ್ಶನ್ ಸಿಗರೇಟ್ ಹಿಡಿದು ಖಡಕ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಪೋಸ್ಟರ್ ಅವರ ಅಭಿಮಾನಿಗಳಿಂದ ಸಾಕಷ್ಟು ಗಮನ ಸೆಳೆದಿದೆ.