ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಕನ್ನಡ ಚಿತ್ರನಟ ದರ್ಶನ್ ತೂಗುದೀಪ ಸೇರಿದಂತೆ ಏಳು ಆರೋಪಿಗಳ ಜಾಮೀನು ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಇಂದು ಕೈಗೆತ್ತಿಕೊಂಡಿತು. ವಾದ ಆಲಿಸಿದ ನ್ಯಾಯಾಲಯವು 3 ಪುಟಗಳ ಲಿಖಿತ ವಾದ ಸಲ್ಲಿಸುವಂತೆ ಸೂಚಿಸಿ, ಜಾಮೀನು ಆದೇಶವನ್ನು 10 ದಿನಗಳ ಕಾಲ ಕಾಯ್ದಿರಿಸಿ ಆದೇಶಿಸಿದೆ. ಹತ್ತು ದಿನಗಳ ನಂತರ ದರ್ಶನ್ ಸೇರಿ ಏಳು ಜನರಿಗೆ ಜೈಲು ಶಿಕ್ಷೆಯಾಗುತ್ತದೆಯೇ ಅಥವಾ ಜಾಮೀನು ದೊರೆಯುತ್ತದೆಯೇ ಎಂಬುದು ಸ್ಪಷ್ಟವಾಗಲಿದೆ.
ಹೌದು, ಕರ್ನಾಟಕ ಸರ್ಕಾರವು ದರ್ಶನ್ ಮತ್ತು ಇತರ ಆರೋಪಿಗಳಿಗೆ ಕರ್ನಾಟಕ ಹೈಕೋರ್ಟ್ ಡಿಸೆಂಬರ್ 13, 2024ರಂದು ಮಂಜೂರು ಮಾಡಿದ ಜಾಮೀನು ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಈ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲ ಮತ್ತು ಆರ್. ಮಹದೇವನ್ ಅವರ ಪೀಠದ ಮುಂದೆ ನಡೆಸಲಾಯಿತು. ಸರ್ಕಾರದ ಪರವಾಗಿ ಹಿರಿಯ ವಕೀಲ ಸಿದ್ದಾರ್ಥ್ ಲೂತ್ರಾ ವಾದ ಮಂಡಿಸಿದರು.
ಸುಪ್ರೀಂ ಕೋರ್ಟ್ ಈ ಪ್ರಕರಣದ ಗಂಭೀರತೆಯನ್ನು ಗಮನಿಸಿ, ಜಾಮೀನು ಆದೇಶದ ಕುರಿತು ತೀರ್ಪನ್ನು 10 ದಿನಗಳವರೆಗೆ ಕಾಯ್ದಿರಿಸಿತು. ಈ ಅವಧಿಯಲ್ಲಿ ನ್ಯಾಯಾಲಯವು ಎಲ್ಲಾ ಆರೋಪಿಗಳ ವಿರುದ್ಧದ ಆರೋಪಗಳು, ಸಾಕ್ಷ್ಯಾಧಾರಗಳು ಮತ್ತು ತನಿಖೆಯ ವಿವರಗಳನ್ನು ಪರಿಶೀಲಿಸಲಿದೆ.