ನಟ ದರ್ಶನ್ ಕುಟುಂಬಕ್ಕೆ ಸಂಬಂಧಿಸಿದ ಮಿನಿ ಕೂಪರ್ ಕಾರೊಂದು ಬೆಂಗಳೂರಿನ ಕತ್ರಿಗುಪ್ಪೆ ಜಂಕ್ಷನ್ ಬಳಿ ತಡರಾತ್ರಿ ಹಿಟ್ ಅಂಡ್ ರನ್ ಅಪಘಾತ ಮಾಡಿ ಪರಾರಿಯಾಗಿದೆ ಎಂಬ ಆರೋಪಗಳು ಎದ್ದಿವೆ. ಈ ಘಟನೆಯ ನಂತರ ಆಕ್ರಮಣಕಾರಿ ವರ್ತನೆ ಮತ್ತು ಧಮಕಿಗಳು ನಡೆದಿವೆ ಎಂದು ದೂರು ನೀಡಿರುವವರು ಹೇಳಿದ್ದಾರೆ.
ಸ್ಥಳೀಯ ಮಾಹಿತಿಯ ಪ್ರಕಾರ, ರಾತ್ರಿ ವೇಳೆ ನಿಂತಿದ್ದ ವೈಟ್ ಕಲರ್‌ನ ವರ್ಣ ಕಾರಿಗೆ ಬ್ಲೂ ಕಲರ್‌ನ ಮಿನಿ ಕೂಪರ್ ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ಚಾಲಕ ಕಾರನ್ನು ನಿಲ್ಲಿಸದೇ ತಕ್ಷಣ ರ್ಯಾಷ್ ಡ್ರೈವಿಂಗ್ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಅಪಘಾತಕ್ಕೆ ಒಳಗಾದ ವರ್ಣ ಕಾರಿನ ಮಾಲೀಕರು ಮತ್ತು ಸಹಯಾತ್ರಿಗಳು ತಕ್ಷಣ ಆ ಮಿನಿ ಕೂಪರ್ ಕಾರನ್ನು ಹಿಂಬಾಲಿಸಿಕೊಂಡು ಹೋಗಿದ್ದರು. ಆ ಕಾರು ಪ್ರೆಸ್ಟೀಜ್ ಅಪಾರ್ಟ್‌ಮೆಂಟ್‌ಗೆ ಒಳಗೆ ಹೋಗಿದ್ದು, ಈ ಅಪಾರ್ಟ್‌ಮೆಂಟ್‌ನಲ್ಲಿ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ದರ್ಶನ್ ವಾಸಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಅಪಾರ್ಟ್‌ಮೆಂಟ್ ಒಳಗೆ ಪ್ರವೇಶಿಸಿದ ನಂತರ ಮಿನಿ ಕೂಪರ್ ಕಾರು ಎರಡು ರೌಂಡ್ ಸುತ್ತಿ ಪತ್ತೆಯಾಗದಂತೆ ಮಾಡಲಾಗಿದೆ ಎನ್ನಲಾಗಿದೆ. ನಂತರ ಕಾರಿನಿಂದ ಇಳಿದ ಒಬ್ಬ ಯುವಕ “ನಾನೇ ಕಾರನ್ನ ಓಡಿಸಿದ್ದು, ಟಚ್ ಮಾಡಿದ್ದು ನಾನೇ… ಏನಿವಾಗ?” ಎಂದು ಜೋರಾಗಿ ಹೇಳಿದ್ದಾನೆ ಎಂದು ಆರೋಪವಿದೆ. ಇದಲ್ಲದೆ “ನಮ್ಮ ಮೇಲೆ ಅಟ್ಯಾಕ್ ಮಾಡಲು ಬಂದಿದ್ದೀರಾ?” ಎಂದು ಧಮಕಿ ನೀಡಿದ್ದಾನೆ ಎಂದು ದೂರುದಾರರು ಆರೋಪಿಸಿದ್ದಾರೆ.
ಈ ಮಿನಿ ಕೂಪರ್ ಕಾರು ವಿಜಯಲಕ್ಷ್ಮಿ ದರ್ಶನ್ ಹೆಸರಿನಲ್ಲಿ ರಿಜಿಸ್ಟರ್ ಆಗಿದ್ದು, ಮೊದಲ ಮಾಲೀಕ ದರ್ಶನ್ ಎಂದು ದಾಖಲೆಗಳಿವೆ. ಕಾರು ಬೆಂಗಳೂರು ಸೌತ್ ಆರ್‌ಟಿಒನಲ್ಲಿ ರಿಜಿಸ್ಟರ್ ಆಗಿದ್ದು, ಇನ್ಶೂರೆನ್ಸ್ ಲ್ಯಾಪ್ಸ್ ಆಗಿರುವುದು ಗಮನಾರ್ಹ. ಅಪಘಾತದಿಂದ ಆಗಿರುವ ಹಾನಿಗೆ ಪರಿಹಾರ ನೀಡುವಂತೆ ವರ್ಣ ಕಾರಿನ ಮಾಲೀಕರು ಆಗ್ರಹಿಸಿದ್ದಾರೆ.
ಹಿಟ್ ಅಂಡ್ ರನ್ ಮಾಡಿದ್ದು ಯಾರು? ಧಮಕಿ ನೀಡಿದ ಯುವಕನೇ ಕಾರು ಓಡಿಸುತ್ತಿದ್ದನಾ? ಎಂಬ ಪ್ರಶ್ನೆಗಳು ಈಗ ಎದ್ದಿವೆ. ಪೊಲೀಸರು ಈ ಘಟನೆಯ ತನಿಖೆ ಆರಂಭಿಸಿದ್ದು, ಸಿಸಿಟಿವಿ ದೃಶ್ಯಗಳ ಪರಿಶೀಲನೆ ನಡೆಯುತ್ತಿದೆ ಎಂದು ತಿಳಿದುಬಂದಿದೆ.




