ನಟ ದರ್ಶನ್‌ಗೆ ಬಗೆಹರಿಯದ ಬಾತುಕೋಳಿ ಕೇಸ್.. ಮತ್ತೊಂದು ನೋಟಿಸ್..?!

ಅರಣ್ಯ ಇಲಾಖೆ ರಾಯಭಾರಿಯಾದವರಿಗೇನೆ ಕಾನೂನು ಅರಿವಿಲ್ಲವಾ..?

Untitled design 2025 05 30t200611.884

ಅರಣ್ಯ ಇಲಾಖೆ, Zoo ಅಥಾರಿಟಿಯ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದ ದರ್ಶನ್‌ಗೆ ಕಾನೂನಿನ ಅರಿವಿಲ್ಲವೇ..? ಅಧಿಕಾರಿಗಳು, ಸಚಿವರುಗಳು ತಿಳಿಸಿ ಹೇಳಿಲ್ಲವೇ..? ಈಗಾಗ್ಲೇ ಬಾತುಕೋಳಿ ಕೇಸ್ ಕೋರ್ಟ್‌‌ನಲ್ಲಿ ಇರುವಂತೆ ಮತ್ತೊಂದು ಆರೋಪ ಯಾಕೆ..? ಹೀಗೆ ಹತ್ತು ಹಲವು ಪ್ರಶ್ನೆಗಳು ಸಹಜವಾಗಿಯೇ ಮೂಡುತ್ತವೆ. ಅವುಗಳಿಗೆ ಉತ್ತರ ಇಲ್ಲಿದೆ.

ಪಕ್ಷಿ ಹಾಗೂ ಪ್ರಾಣಿಪ್ರಿಯ ಡಿ ಬಾಸ್ ದರ್ಶನ್‌‌ಗೆ ಒಂದಲ್ಲ ಎರಡೆರಡು ಫಾರ್ಮ್ ಹೌಸ್‌‌ಗಳಿವೆ. ಒಂದು ಮೈಸೂರಿನ ತೂಗುದೀಪ ಫಾರ್ಮ್ ಹೌಸ್. ಮತ್ತೊಂದು ಟಿ ನರಸೀಪುರದ ಕೆಂಪಯ್ಯನ ಹುಂಡಿಯಲ್ಲಿರೋ ಫಾರ್ಮ್ ಹೌಸ್. ಎರಡೂ ಕಡೆ ಕುರಿ, ಮೇಕೆ, ಕೋಳಿ, ಹಸು, ಎತ್ತು.. ಅಷ್ಟೇ ಯಾಕೆ ಕುದುರೆಗಳನ್ನ ಕೂಡ ಸಾಕಿದ್ದಾರೆ ನಟ ದರ್ಶನ್.

ಇನ್ನು ರಾಜರಾಜೇಶ್ವರಿ ನಗರದ ದಾಸನ ನಿವಾಸದಲ್ಲಿ ವಿವಿಧ ಪ್ರಭೇದದ ಶ್ವಾನಗಳ ದಂಡು ಇದೆ. ವಿದೇಶಿ ಗಿಳಿಗಳು ಕೂಡ ಇವೆ. ಹೀಗೆ ಒಂದಾ ಎರಡಾ ದರ್ಶನ್ ಇರೋ ಕಡೆ ಈ ಪ್ರಾಣಿ-ಪಕ್ಷಿಗಳ ಕಲರವ ಜೋರಿದೆ. ಅದರಲ್ಲೂ ಫ್ರೀ ಟೈಂನಲ್ಲಿ ದರ್ಶನ್ ಹೆಚ್ಚಿನ ಸಮಯ ಕಳೆಯೋದೇ ಈ ಪ್ರಾಣಿ ಪಕ್ಷಿಗಳ ಜೊತೆ. ಇನ್ನು ಸಂಕ್ರಾಂತಿ ಹಬ್ಬ ಬಂದ್ರೆ ಸಾಕು ಫಾರ್ಮ್‌ ಹೌಸ್‌‌ನಲ್ಲಿರೋ ರಾಸುಗಳನ್ನ ಸಿಂಗರಿಸಿ, ಕಿಚ್ಚಾಯಿಸಿ ಸಖತ್ ಸಂಭ್ರಮಿಸ್ತಾರೆ.

ಅಂದಹಾಗೆ ಕೆಂಪಯ್ಯನ ಹುಂಡಿಯಲ್ಲಿರೋ ಫಾರ್ಮ್‌ ಹೌಸ್‌‌ನಲ್ಲಿ ನಾಲ್ಕು ಮಿಡಲ್ ಏಷ್ಯಾ ಮೂಲದ ವಿದೇಶಿ ಬಾತುಕೋಳಿಗಳನ್ನ ಸಾಕಿದ್ರು ದರ್ಶನ್. ಅದನ್ನ 2023ರಲ್ಲಿ ಖಾಸಗಿ ಸಂದರ್ಶನವೊಂದರಲ್ಲಿ ಬಹಿರಂಗವಾಗಿ ಹೇಳಿಕೊಂಡಿದ್ರು ಡಿಬಾಸ್. ಕೂಡಲೇ ಅದು ಅರಣ್ಯಾಧಿಕಾರಿಗಳ ಕಿವಿಗೆ ಬಿದ್ದು, ಅವ್ರ ಫಾರ್ಮ್‌ ಹೌಸ್ ಮೇಲೆ ರೇಡ್ ಕೂಡ ನಡೆದಿತ್ತು. ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ನಿಷೇಧಿತ ವನ್ಯ ಪಕ್ಷಿಗಳ ಸಾಕಣೆ ವಿಚಾರ ಪ್ರಕರಣ ದಾಖಲಾಗಿ, ನಾಲ್ಕೂ ಬಾರ್ ಹೆಡೆಡ್ ಬಾತುಕೋಳಿಗಳನ್ನ ಅರಣ್ಯಾಧಿಕಾರಿಗಳು ವಶಕ್ಕೆ ಪಡೆದಿದ್ದರು.

ಟಿ ನರಸೀಪುರ ಕೋರ್ಟ್‌ನಿಂದ ಮೇ 4ರಂದು ನಟ ದರ್ಶನ್ ಹಾಗೂ ವಿಜಯಲಕ್ಷ್ಮೀಗೆ ಸಮನ್ಸ್ ಕೂಡ ನೀಡಲಾಗಿತ್ತು. ಆದ್ರೆ ದರ್ಶನ್ ಅವುಗಳನ್ನ ಸ್ನೇಹಿತರೊಬ್ಬರು ಗಿಫ್ಟ್ ಆಗಿ ನೀಡಿದ್ರು ಅಂತ ವಿವರಣೆ ನೀಡಿದ್ದಾರಂತೆ. ಏನೇ ವಿವರಣೆ ನೀಡಿದ್ರೂ ಕಾನೂನು ಉಲ್ಲಂಘನೆ ಆದ್ರೆ ತಪ್ಪು ತಪ್ಪೇ. ಆ ಪ್ರಕರಣದಿಂದ ದಚ್ಚು ದಂಪತಿ ಹೇಗೆ ಹೊರಗೆ ಬರ್ತಾರೆ ಅನ್ನೋದೇ ಯಕ್ಷ ಪ್ರಶ್ನೆ. ಇನ್ನು ಆ ಕೇಸ್ ಇತ್ಯರ್ಥ ಆಗೋಕೆ ಮೊದಲೇ ದಾಸನ ಪತ್ನಿಯಿಂದ ಈ ಸ್ನೇಕ್ ಸಾಕಣೆ ಪ್ರಕರಣ ಬಯಲಿಗೆ ಬಂದಿದೆ.

2018ರಲ್ಲೇ ಕರ್ನಾಟಕ ಅರಣ್ಯ ಇಲಾಖೆಯ ರಾಯಭಾರಿಯಾಗಿ ಆಯ್ಕೆಯಾಗಿದ್ದ ನಟ ದರ್ಶನ್‌, ನಂತರದ ದಿನಗಳಲ್ಲಿ ಕರ್ನಾಟಕ Zoo ಅಥಾರಿಟಿಯ ಬ್ರ್ಯಾಂಡ್ ಅಂಬಾಸಿಡರ್ ಹಾಗೂ ಕೃಷಿ ಇಲಾಖೆಗೂ ರಾಯಭಾರಿಯಾಗಿದ್ದರು. ಇಷ್ಟೆಲ್ಲಾ ಆಗಿದ್ದಂತಹ ಚಾಲೆಂಜಿಂಗ್ ಸ್ಟಾರ್‌ಗೆ ಅದರದ್ದೇ ಇಲಾಖೆಗಳಲ್ಲಿನ ರೂಲ್ಸ್ ಅಂಡ್ ರೆಗ್ಯುಲೇಷನ್ಸ್ ಗೊತ್ತಿರಲಿಲ್ಲವಾ ಅನ್ನೋದು ಇಲ್ಲಿ ಪ್ರಶ್ನೆಯಾಗಿ ಕಾಡುತ್ತೆ.

ನಟ ದರ್ಶನ್‌ಗೆ ಅದರ ಅರವಿಲ್ಲದಿದ್ದರೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಾಗಲಿ ಅಥ್ವಾ ಸಚಿವರುಗಳಾಗಲಿ ತಿಳಿ ಹೇಳಬೇಕಿತ್ತು. ಆಗಲಾದ್ರೂ ಇಂತಹ ಎಡವಟ್‌‌ಗಳು ತಪ್ಪುತ್ತಿತ್ತು ಅನ್ನೋದು ಜನರ ಅಭಿಪ್ರಾಯ. ಅಂದಹಾಗೆ ಯಾವ್ಯಾವು ಎಲ್ಲೆ ಇರಬೇಕೋ ಅಲ್ಲಿದ್ದರೇನೇ ಚೆಂದ. ನೋಡೋಕೆ ಚೆಂದವಾಗಿ ಕಾಣುವುದೆಲ್ಲಾ ಕಣ್ಮುಂದೆ ಇರಬೇಕು ಅಂದುಕೊಳ್ಳೋದು ಮಹಾ ತಪ್ಪು. ಅಲ್ಲದೆ ಮನೆಯಲ್ಲಿ ಇಟ್ಕೊಳ್ಳೋ ಚಾಳಿ ಕೂಡ ಬಿಡಬೇಕು. ಅದಕ್ಕೆ ಹುಲಿ ಉಗುರು ಪ್ರಕರಣ ಸೇರಿದಂತೆ ಸಾಕಷ್ಟು ಜ್ವಲಂತ ಸಾಕ್ಷಿಗಳಿವೆ.

ಶೂಟಿಂಗ್, ಡಬ್ಬಿಂಗ್ ಇಲ್ಲದಿದ್ದಾಗ ಬಿಡುವು ಸಿಕ್ರೆ ಸಾಕು ಕಾಡುಗಳಿಗೆ ದೊಡ್ಡ ದೊಡ್ಡ ಕ್ಯಾಮೆರಾ ಹಿಡಿದು, ಗಜಪಡೆಯೊಂದಿಗೆ ಹೊರಡುತ್ತಿದ್ದರು ದರ್ಶನ್. ಸ್ವತಃ ಅವರೇ ತಮ್ಮ ಕ್ಯಾಮೆರಾ ಕಣ್ಣಲ್ಲಿ ವೈಲ್ಡ್ ಲೈಫ್ ಫೋಟೋಗ್ರಫಿ ಮಾಡ್ತಿದ್ರು. ಅದನ್ನ ಅರಣ್ಯ ಇಲಾಖೆ ದೊಡ್ಡ ಪ್ರಿಂಟ್‌ ಹಾಕಿಸಿ, ಮಾರಾಟ ಕೂಡ ಮಾಡಿದೆ. ಆ ಮೂಲಕ ಅರಣ್ಯ ಇಲಾಖೆಗೆ ಫಂಡ್ ರೈಸ್ ಸಹ ಮಾಡಿತ್ತು. ಅಂತಹ ದರ್ಶನ್‌ಗೆ ಯಾವುದು ಕಾಡಲ್ಲಿಬೇಕು, ಯಾವುದು ಮನೆಯಲ್ಲಿರಬೇಕು ಅನ್ನೋದರ ಅರಿವಿದ್ದಿದ್ರೆ ಚೆನ್ನಾಗಿರ್ತಿತ್ತು.

ಇನ್ನು ತಿಳಿದೋ ತಿಳಿಯದೆಯೋ ಆಗಿರೋ ಎಡವಟ್ಟುಗಳು ಹಾಗೂ ತಪ್ಪುಗಳಿಗೆ ಟೆಂಪಲ್ ರನ್ ಮಾಡುವ ಮೂಲಕ ಪಾಪ ಪ್ರಾಯಶ್ಚಿತ್ತ ಮಾಡ್ಕೊಳ್ತಿದ್ದಾರಾ ದರ್ಶನ್ ಅನ್ನೋದು ಕೂಡ ಇಲ್ಲಿ ಯೋಚಿಸಬೇಕಾಗುತ್ತೆ. ಹೌದು.. ಕೇರಳದ ಕಣ್ಣೂರಿನ ಮಡಾಯಿಕಾವು ಭಗವತಿ ಆಲಯದಲ್ಲಿ ಶತ್ರು ಸಂಹಾರ ಪೂಜೆ ಮಾಡಿಸಿದ ದರ್ಶನ್, ಮಂಡ್ಯದ ಉಕ್ಕುಡು ಮಾರಮ್ಮನಿಗೂ ಮೊರೆ ಹೋಗಿದ್ರು. ಅಲ್ಲದೆ ವಿಜಯಲಕ್ಷ್ಮೀ ಅಣ್ಣಮ್ಮ, ಬಂಡೆ ಮಹಾಂಕಾಳಿ, ಚಾಮುಂಡೇಶ್ವರಿ ಸೇರಿದಂತೆ ಅಸ್ಸಾಂನ ಕಾಮಾಕ್ಯ ದೇವಾಲಯಕ್ಕೂ ಹರಕೆ ತೀರಿಸಿದ್ದಾರೆ.

ಎಷ್ಟೇ ದೇವಾಲಯಗಳು ಸುತ್ತಿದ್ರೂ, ಎಷ್ಟೇ ಹರಕೆಗಳನ್ನ ತೀರಿಸಿದ್ರೂ ಸಹ ಇವರಿಗಿರುವ ಕಷ್ಟಗಳು ಮಾತ್ರ ದೂರ ಆಗ್ತಿಲ್ಲ. ದಿನಕ್ಕೊಂದು ಸಮಸ್ಯೆ, ಸವಾಲು ಎದುರಾಗ್ತಿವೆ. ಅದ್ಯಾವಾಗ ಯಾವ ದೇವರು ಕಣ್ತೆರೆಯುತ್ತಾರೋ ಏನೋ ಕಾದು ನೋಡಬೇಕು. ಸದ್ಯ ಇಷ್ಟೆಲ್ಲಾ ಸಂಕಷ್ಟಗಳ ನಡುವೆ, ಬೆನ್ನು ನೋವು ಕೂಡ ಇಟ್ಕೊಂಡು ದರ್ಶನ್ ಸಿನಿಮಾದ ಶೂಟಿಂಗ್‌ನಲ್ಲಿ ಭಾಗಿ ಆಗಿದ್ದಾರೆ. ಆಪ್ತರ ಸಿನಿಮಾಗಳ ಪ್ರಮೋಷನ್ಸ್‌ನಲ್ಲೂ ತೊಡಗಿಕೊಳ್ತಿದ್ದಾರೆ.

ಉಪಾಧ್ಯಕ್ಷ, ರಾಯಲ್, ವಾಮನ ಸಿನಿಮಾಗಳನ್ನ ನೋಡಿದ ದರ್ಶನ್ ಪ್ರಮೋಷನ್ಸ್ ಮಾಡಿದ್ರು. ಇದೀಗ ಡೆವಿಲ್ ಸಿನಿಮಾದ ಶೂಟಿಂಗ್ ಭರದಿಂದ ಸಾಗುತ್ತಿದ್ದು, ದೇಶದ ವಿವಿದೆಡೆ ಚಿತ್ರೀಕರಣ ನಡೆಸ್ತಿದ್ದ ಟೀಂ, ಈಗ ವಿದೇಶಕ್ಕೆ ಹಾರುವ ಕನಸು ಕಂಡಿದೆ. ಏನೇ ಆಗಲಿ, ಆದಷ್ಟು ಬೇಗ ದರ್ಶನ್‌ ಬಾಳಲ್ಲಿ ಒಳ್ಳೆಯ ದಿನಗಳು ಬರಲಿ. ಆತನಿಂದ ಸಾವಿರಾರು ಸಿನಿಮಾ ಕುಟುಂಬಗಳು ಅನ್ನ ತಿಂತಿವೆ. ಚಿತ್ರೋದ್ಯಮದ ಏಳಿಗೆಗೂ ದರ್ಶನ್‌ನ ಅವಶ್ಯಕತೆಯಿದೆ. ಸೋ.. ಬೌನ್ಸ್ ಬ್ಯಾಕ್ ಆಗ್ತಾರೆ ಅನ್ನೋ ವಿಶ್ವಾಸದಲ್ಲಿ ಇಡೀ ದಚ್ಚು ಅಭಿಮಾನಿ ಬಳಗ ಹಾಗೂ ಚಿತ್ರರಂಗ ಕಾಯ್ತಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version