ಮೈಸೂರು: ಎರಡನೇ ಆಷಾಢ ಶುಕ್ರವಾರದ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟದಲ್ಲಿ ನಾಡಿನ ಅದಿದೇವತೆ ಶ್ರೀ ಚಾಮುಂಡೇಶ್ವರಿಯ ದರ್ಶನಕ್ಕೆ ಭಕ್ತರ ಸಾಗರವೇ ಹರಿದುಬಂದಿತು. ಈ ಸಂದರ್ಭದಲ್ಲಿ ಸ್ಯಾಂಡಲ್‌ವುಡ್‌ನ ಖ್ಯಾತ ನಟ ದರ್ಶನ್ ತೂಗುದೀಪ, ತಮ್ಮ ಪತ್ನಿಯೊಂದಿಗೆ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ, ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದರು.
ನಟ ದರ್ಶನ್ ಮತ್ತು ಅವರ ಕುಟುಂಬವು ಚಾಮುಂಡೇಶ್ವರಿ ದೇವಿಯ ಮೇಲೆ ಅಗಾಧ ಭಕ್ತಿ ಹೊಂದಿದ್ದಾರೆ. ಪ್ರತಿ ವರ್ಷ ಆಷಾಢ ಮಾಸದಲ್ಲಿ ದೇಗುಲಕ್ಕೆ ಭೇಟಿ ನೀಡುವುದು ಅವರ ಸಂಪ್ರದಾಯವಾಗಿದೆ. ಕಳೆದ ವರ್ಷ ಕೊಲೆ ಪ್ರಕರಣದಲ್ಲಿ ಜೈಲುವಾಸದ ಹಿನ್ನೆಲೆಯಲ್ಲಿ ದರ್ಶನ್‌ಗೆ ಆಷಾಢದಲ್ಲಿ ದೇವಾಲಯಕ್ಕೆ ಭೇಟಿ ನೀಡಲು ಸಾಧ್ಯವಾಗಿರಲಿಲ್ಲ. ಆದರೆ ಈ ಬಾರಿ, ಪತ್ನಿಯೊಂದಿಗೆ ಆಗಮಿಸಿ ತಾಯಿಯ ದರ್ಶನ ಪಡೆದು, ವಿಶೇಷ ಪೂಜೆ ನೆರವೇರಿಸಿದ್ದಾರೆ.
ದರ್ಶನ್‌ರ ಕಾರು ಚಾಮುಂಡಿ ಬೆಟ್ಟಕ್ಕೆ ಆಗಮಿಸಿದ ತಕ್ಷಣ, ಅಭಿಮಾನಿಗಳ ಗುಂಪು ಕಾರಿನ ಸುತ್ತ ಸುತ್ತಿಕೊಂಡಿತು. “ಡಿಬಾಸ್, ಡಿಬಾಸ್” ಎಂದು ಕೂಗಾಡಿದ ಅಭಿಮಾನಿಗಳು, ಮೊಬೈಲ್‌ನಲ್ಲಿ ವಿಡಿಯೋ ಮತ್ತು ಫೋಟೋ ತೆಗೆಯಲು ಉತ್ಸಾಹ ತೋರಿದರು. ದರ್ಶನ್ ಅಭಿಮಾನಿಗಳಿಗೆ ಕೈಮುಗಿದು, ದೇವಾಲಯದ ಒಳಗೆ ತೆರಳಿ ಪೂಜೆಯಲ್ಲಿ ಭಾಗವಹಿಸಿದರು.
ಚಾಮುಂಡೇಶ್ವರಿಯ ವಿಶೇಷ ಅಲಂಕಾರ:
ಎರಡನೇ ಆಷಾಢ ಶುಕ್ರವಾರದ ಸಂದರ್ಭದಲ್ಲಿ ಚಾಮುಂಡೇಶ್ವರಿಯನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಮುಂಜಾನೆ 3:30 ರಿಂದ ವಿವಿಧ ಅಭಿಷೇಕಗಳು ನಡೆದವು, ಮತ್ತು ಬೆಳಿಗ್ಗೆ 6 ಗಂಟೆಯಿಂದ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ದೇವಾಲಯದ ಒಳಗೆ ವಿವಿಧ ಹಣ್ಣುಗಳಿಂದ ಅಲಂಕಾರ ಮಾಡಲಾಗಿತ್ತು. ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆಯುತ್ತಿದ್ದಾರೆ.
ರಾಜ್ಯದ ವಿವಿಧ ಭಾಗಗಳಿಂದ ಚಾಮುಂಡಿ ಬೆಟ್ಟಕ್ಕೆ ಭಕ್ತರ ದಂಡೇ ಆಗಮಿಸಿತು. ಜನದಟ್ಟಣೆಯಿಂದಾಗಿ ನೂಕುನುಗ್ಗಲು ತಡೆಯಲು ಬ್ಯಾರಿಕೇಡ್‌ಗಳನ್ನು ಒಡ್ಡಲಾಗಿತ್ತು. ಅಹಿತಕರ ಘಟನೆಗಳು ಸಂಭವಿಸದಂತೆ ಪೊಲೀಸ್ ಭದ್ರತೆಯನ್ನು ಕಲ್ಪಿಸಲಾಗಿದೆ. 2000 ಮತ್ತು 300 ರೂ. ಟಿಕೆಟ್ ಖರೀದಿಸುವವರಿಗೆ ಪ್ರತ್ಯೇಕ ದರ್ಶನದ ವ್ಯವಸ್ಥೆ ಇದ್ದು, ಧರ್ಮ ದರ್ಶನ ಮತ್ತು ಮೆಟ್ಟಿಲುಗಳ ಮೂಲಕವೂ ಭಕ್ತರು ಬೆಟ್ಟಕ್ಕೆ ಆಗಮಿಸುತ್ತಿದ್ದಾರೆ.
ಚಾಮುಂಡಿ ಬೆಟ್ಟಕ್ಕೆ ಖಾಸಗಿ ವಾಹನಗಳ ಪ್ರವೇಶವನ್ನು ನಿಷೇಧಿಸಲಾಗಿದ್ದು, ಲಲಿತ್ ಮಹಲ್ ಮೈದಾನದಿಂದ ಉಚಿತ ಬಸ್ ಸೌಲಭ್ಯವನ್ನು ಒದಗಿಸಲಾಗಿದೆ. ಜೊತೆಗೆ, ಭಕ್ತರಿಗೆ ಕುಡಿಯುವ ನೀರು, ಶೌಚಾಲಯ, ಮತ್ತು ಇತರ ಮೂಲಭೂತ ಸೌಕರ್ಯಗಳನ್ನು ಸಹ ಒದಗಿಸಲಾಗಿದೆ.





