ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ನಟ ದರ್ಶನ್ ತೂಗುದೀಪ ಸೇರಿದಂತೆ ಏಳು ಆರೋಪಿಗಳ ಜಾಮೀನು ಅರ್ಜಿಯ ವಿಚಾರಣೆ ಇಂದು ಸುಪ್ರೀಂ ಕೋರ್ಟ್‌ನಲ್ಲಿ ನಡೆಯಲಿದೆ. ಈ ವಿಚಾರಣೆಯಲ್ಲಿ ನಟ ದರ್ಶನ್ ಮತ್ತು ಇತರ ಆರೋಪಿಗಳ ಪರವಾಗಿ ವಾದ ಮಂಡನೆಯಾಗಲಿದ್ದು, ಇದರ ಬೆನ್ನಲ್ಲೇ ನ್ಯಾಯಾಲಯವು ಆದೇಶ ಪ್ರಕಟಿಸುವ ಸಾಧ್ಯತೆಯಿದೆ.
2024ರ ಡಿಸೆಂಬರ್ 13ರಂದು ಕರ್ನಾಟಕ ಹೈಕೋರ್ಟ್ ದರ್ಶನ್, ಪವಿತ್ರಾ ಗೌಡ ಮತ್ತು ಇತರ ಐವರಿಗೆ ಜಾಮೀನು ಮಂಜೂರು ಮಾಡಿತ್ತು. ಈ ಆದೇಶವನ್ನು ಪ್ರಶ್ನಿಸಿ ಬೆಂಗಳೂರು ಪೊಲೀಸರು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ದರ್ಶನ್ ಪರವಾಗಿ ಹಿರಿಯ ವಕೀಲ ಸಿದ್ಧಾರ್ಥ ದವೆ ವಾದ ಮಂಡಿಸಲಿದ್ದಾರೆ.
ಮಂಗಳವಾರ (ಜುಲೈ 22) ನಡೆಯಬೇಕಿದ್ದ ವಿಚಾರಣೆಯಲ್ಲಿ, ಸಿದ್ಧಾರ್ಥ ದವೆ ಅವರು ಪ್ರಕರಣದ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲದಿರುವುದರಿಂದ ಹೆಚ್ಚಿನ ಸಮಯ ಕೋರಿದ್ದರು. ಇದಕ್ಕೆ ಸ್ಪಂದಿಸಿದ ನ್ಯಾಯಮೂರ್ತಿ ಜೆ.ಬಿ. ಪಾರ್ದಿವಾಲ ನೇತೃತ್ವದ ದ್ವಿಸದಸ್ಯ ಪೀಠವು ಜುಲೈ 24ಕ್ಕೆ ವಿಚಾರಣೆಯನ್ನು ಮುಂದೂಡಿತು. ಈ ಸಂದರ್ಭದಲ್ಲಿ, ಕೋರ್ಟ್ ಆರೋಪಿಗಳಿಗೆ ಲಿಖಿತ ದಾಖಲೆ ಸಿದ್ಧಪಡಿಸಲು ಮತ್ತು 75% ವಾದವನ್ನು ಲಿಖಿತ ರೂಪದಲ್ಲಿ ಮಂಡಿಸಲು ಸೂಚಿಸಿತು.
ರಾಜ್ಯ ಸರ್ಕಾರದ ಪರವಾಗಿ ವಕೀಲ ಸಿದ್ಧಾರ್ಥ ಲೂಥ್ರಾ ಈಗಾಗಲೇ ವಾದ ಮಂಡಿಸಿದ್ದು, ಆರೋಪಿಗಳು ಅಮಾನವೀಯ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ವಾದಿಸಿದ್ದಾರೆ. ಸುಪ್ರೀಂ ಕೋರ್ಟ್‌ನ ತೀರ್ಪಿನ ಮೇಲೆ ದರ್ಶನ್ ಮತ್ತು ಇತರ ಆರೋಪಿಗಳ ಭವಿಷ್ಯ ನಿಂತಿದೆ. ಒಂದು ವೇಳೆ ಜಾಮೀನು ರದ್ದಾದರೆ, ಆರೋಪಿಗಳು ಮತ್ತೆ ಜೈಲು ಸೇರಬೇಕಾಗುತ್ತದೆ.