ಬಾಲಿವುಡ್‌ನ ಪವರ್ ಕಪಲ್ ಎಂದೇ ಖ್ಯಾತಿ ಪಡೆದಿರುವ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಅವರ ವೈಯಕ್ತಿಕ ಜೀವನದ ಬಗ್ಗೆ ಆಗಾಗ ಒಂದಿಲ್ಲೊಂದು ಸುಳ್ಳು ಸುದ್ದಿಗಳು ಹರಿದಾಡುತ್ತಲೇ ಇರುತ್ತವೆ. ಕಳೆದ ಕೆಲವು ವಾರಗಳಿಂದ ಈ ಜೋಡಿ ಬೇರೆಯಾಗುತ್ತಿದೆ ಎಂಬ ಚರ್ಚೆಗಳು ಸೋಷಿಯಲ್ ಮೀಡಿಯಾದಲ್ಲಿ ಜೋರಾಗಿದ್ದವು. ಇದಕ್ಕೆ ಕಾರಣವಾಗಿದ್ದು ದಂಪತಿಗಳು ಸಾರ್ವಜನಿಕವಾಗಿ ಕಾಣಿಸಿಕೊಂಡಾಗ ತೆಗೆದ ಕೆಲವು ಪುಟ್ಟ ವಿಡಿಯೋ ತುಣುಕುಗಳು. ಆದರೆ ಈ ಎಲ್ಲಾ ಊಹಾಪೋಹಗಳಿಗೆ ಆಲಿಯಾ ಭಟ್ ಈಗ ಪೂರ್ಣವಿರಾಮ ಇಟ್ಟಿದ್ದಾರೆ.
ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಆಲಿಯಾ ಮನಬಿಚ್ಚಿ ಮಾತನಾಡಿದ್ದಾರೆ. ಇಂಟರ್ನೆಟ್‌ನಲ್ಲಿ ನಮ್ಮ ಬಗ್ಗೆ ಬರುವ ಮಾತುಗಳನ್ನು ನಾನು ಕೇವಲ ಒಂದು ರೀತಿಯ ಶಬ್ದ ಎಂದು ಪರಿಗಣಿಸುತ್ತೇನೆ. ಜನರು ಬರೀ ಮೂರ್ನಾಲ್ಕು ಸೆಕೆಂಡುಗಳ ಕ್ಲಿಪ್ಪಿಂಗ್ ನೋಡಿ ಒಬ್ಬರ ವೈಯಕ್ತಿಕ ಜೀವನ ಅಥವಾ ಸಂಬಂಧದ ಬಗ್ಗೆ ತೀರ್ಮಾನಕ್ಕೆ ಬರುವುದು ನಿಜಕ್ಕೂ ಆಶ್ಚರ್ಯಕರ. ಆದರೆ ವಾಸ್ತವ ಅವರಿಗೆ ತಿಳಿದಿರುವುದಿಲ್ಲ ಎಂದು ಅವರು ನೇರವಾಗಿ ಹೇಳಿದ್ದಾರೆ.
ತಮ್ಮ ಮತ್ತು ರಣಬೀರ್ ನಡುವಿನ ಬಾಂಧವ್ಯದ ಬಗ್ಗೆ ಮಾತನಾಡುತ್ತಾ ಆಲಿಯಾ, ನಾವು ಕಳೆದ ಏಳು ವರ್ಷಗಳಿಂದ ಜೊತೆಯಾಗಿದ್ದೇವೆ. ಜನರು ಕಾಮೆಂಟ್ ಮಾಡುವ ಆ ಕೆಲವು ಕ್ಷಣಗಳಿಗಿಂತ ನಮ್ಮ ಈ ಏಳು ವರ್ಷಗಳ ಸುದೀರ್ಘ ಪಯಣ ಮತ್ತು ಪರಸ್ಪರ ಇರುವ ವಿಶ್ವಾಸ ತುಂಬಾ ದೊಡ್ಡದು. ಇಂತಹ ವದಂತಿಗಳು ನಮ್ಮ ವೈಯಕ್ತಿಕ ಜೀವನದ ಮೇಲೆ ಅಥವಾ ನಮ್ಮಿಬ್ಬರ ನಡುವಿನ ಪ್ರೀತಿಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ನಾವು ಈ ಮೀಮ್‌ಗಳನ್ನು ನೋಡಿ ಒಟ್ಟಿಗೆ ನಗುತ್ತೇವೆ ಎಂದು ಹೇಳುವ ಮೂಲಕ ಟ್ರೋಲರ್‌ಗಳ ಬಾಯಿ ಮುಚ್ಚಿಸಿದ್ದಾರೆ. ಬಳಿಕ ನನ್ನ ವಾಸ್ತವ ಬದಲಾಗುತ್ತಿಲ್ಲ ಮತ್ತು ನನ್ನ ಕುಟುಂಬದ ಶಾಂತಿ ಕೆಡುತ್ತಿಲ್ಲ. ನಾನು ಪ್ರತಿ ರಾತ್ರಿ ನೆಮ್ಮದಿಯಿಂದ ಮಲಗುತ್ತಿದ್ದೇನೆ ಎಂದು ಹೇಳಿದ್ದಾರೆ.
2018ರಲ್ಲಿ ‘ಬ್ರಹ್ಮಾಸ್ತ್ರ’ ಚಿತ್ರದ ಸೆಟ್‌ನಲ್ಲಿ ಶುರುವಾದ ಇವರ ಪ್ರೇಮ ಕಥೆ, 2022ರ ಏಪ್ರಿಲ್‌ನಲ್ಲಿ ಮದುವೆಯಾಗಿ ಸುಖಿ ಸಂಸಾರಕ್ಕೆ ನಾಂದಿ ಹಾಡಿತ್ತು. ಅದೇ ವರ್ಷ ನವೆಂಬರ್‌ನಲ್ಲಿ ಮಗಳು ರಾಹಾ ಜನಿಸಿದ ನಂತರ ಈ ಜೋಡಿಯ ಜೀವನ ಮತ್ತಷ್ಟು ಸುಂದರವಾಗಿದೆ. ಸದಾ ಮಗಳ ಆರೈಕೆ ಮತ್ತು ವೃತ್ತಿಜೀವನದಲ್ಲಿ ಬ್ಯುಸಿಯಾಗಿರುವ ಇವರು, ವದಂತಿಗಳಿಗೆ ಕಿವಿಗೊಡದೆ ತಮ್ಮ ಜೀವನವನ್ನು ಎಂಜಾಯ್ ಮಾಡುತ್ತಿದ್ದಾರೆ.
ವೃತ್ತಿಜೀವನದ ವಿಚಾರಕ್ಕೆ ಬಂದರೆ, ಸಂಜಯ್ ಲೀಲಾ ಬನ್ಸಾಲಿ ಅವರ ಬಹುನಿರೀಕ್ಷಿತ ಚಿತ್ರ ಲವ್ ಅಂಡ್ ವಾರ್ ನಲ್ಲಿ ಆಲಿಯಾ ಮತ್ತು ರಣಬೀರ್ ಮತ್ತೆ ಒಟ್ಟಾಗಿ ನಟಿಸಲಿದ್ದಾರೆ. ಇದಲ್ಲದೆ ಆಲಿಯಾ ಅವರು ಆಕ್ಷನ್ ಸಿನಿಮಾ ಆಲ್ಪಾ ದಲ್ಲಿ ಕಾಣಿಸಿಕೊಂಡರೆ, ರಣಬೀರ್ ಅವರು ನಿತೇಶ್ ತಿವಾರಿ ನಿರ್ದೇಶನದ ಬೃಹತ್ ಸಿನಿಮಾ ರಾಮಾಯಣದಲ್ಲಿ ಶ್ರೀರಾಮನ ಪಾತ್ರಕ್ಕಾಗಿ ಸಜ್ಜಾಗುತ್ತಿದ್ದಾರೆ.





