ದುನಿಯಾ ವಿಜಯ್ ಸಿನಿಮಾಗಳೆಲ್ಲಾ ಈ ಸಮಾಜದ ಕೈಗನ್ನಡಿ

Untitled design (9)

ಯಶಸ್ವಿ 2ನೇ ವಾರದತ್ತ ಮುನ್ನುಗ್ಗುತ್ತಿರೋ ಸಿಟಿಲೈಟ್ಸ್ ಸಿನಿಮಾ ಎಲ್ಲೆಡೆ ಹೌಸ್‌‌ಫುಲ್ ಪ್ರದರ್ಶನ ಕಾಣ್ತಿದೆ. ಒಳ್ಳೆಯ ಸಿನಿಮಾ ಇಲ್ಲದೆ ನೊಣ ಹೊಡೆಯುತ್ತಿದ್ದಂತಹ ಥಿಯೇಟರ್‌ಗಳು ಇದೀಗ ತುಂಬಿ ತುಳುಕುತ್ತಿವೆ. ವಿನಯ್ ಮಾಸ್ ಹೀರೋ ಆಗಿ ಮಿಂಚುತ್ತಿದ್ದಾರೆ. ಮೋನಿಷಾ ಇಂಡಸ್ಟ್ರಿಯ ಭವಿಷ್ಯದ ನಟಿಮಣಿಯಾಗೋ ಭರವಸೆ ಮೂಡಿಸಿದ್ದಾರೆ. ಇದೆಲ್ಲದರ ಹಿಂದೆ ಇರೋ ಮಾಸ್ಟರ್‌ಮೈಂಡ್ ಒನ್ & ಓನ್ಲಿ ದುನಿಯಾ ವಿಜಯ್. ಕಸದಿಂದ ರಸ ತೆಗೆಯಬಲ್ಲ ಮಹಾನ್ ಮಾಂತ್ರಿಕ.. ಲೋ ಬಜೆಟ್ ಚಿತ್ರಗಳಿಂದ ಬಾಕ್ಸ್ ಆಫೀಸ್‌‌ ಹಿಟ್ಸ್ ಕೊಡಬಲ್ಲ ತಾಂತ್ರಿಕನ ಕೈಚಳಕದ ಕಹಾನಿ ಇಲ್ಲಿದೆ.

ಸದ್ಯ ಎಲ್ಲೆಲ್ಲೂ ಗಣೇಶನ ಪೂಜೆ, ಪುನಸ್ಕಾರ, ಮೆರವಣಿಗೆ ಹಾಗೂ ವಿಸರ್ಜನೆ. ಕಲರ್‌‌ಫುಲ್ ಲೈಟ್ಸ್‌ನೊಂದಿಗೆ ಗಣಪನ ಆರಾಧನೆ ಜೋರಿದೆ. ಅದರ ಜೊತೆ ಜೊತೆಗೆ ಸಿಟಿಲೈಟ್ಸ್ ಸಿನಿಮಾದ ಅಬ್ಬರ, ಆರ್ಭಟ ಕೂಡ ನಿರೀಕ್ಷೆಗೆ ಮೀರಿದಂತಿದೆ. ಯೆಸ್.. ಕಳೆದ ವಾರ ತೆರೆಕಂಡ ದುನಿಯಾ ವಿಜಯ್ ನಿರ್ದೇಶಿಸಿ, ನಿರ್ಮಿಸಿದ ಹಾಗೂ ವಿನಯ್ ರಾಜ್‌‌ಕುಮಾರ್-ಮೋನಿಷಾ ನಟನೆಯ ಸಿಟಿಲೈಟ್ಸ್ ಯಶಸ್ವೀ 2ನೇ ವಾರದತ್ತ ಮುನ್ನುಗ್ಗುತ್ತಿದೆ. ಅದೂ ಹೌಸ್‌‌ಫುಲ್ ಪ್ರದರ್ಶನಗಳ ಮೂಲಕ ಅನ್ನೋದು ವಿಶೇಷ.

ಬುಕ್‌ ಮೈ ಶೋನಲ್ಲಿ 8.4 ರೇಟಿಂಗ್‌ನೊಂದಿಗೆ ಟ್ರೆಂಡಿಂಗ್‌ನಲ್ಲಿರೋ ಸಿಟಿಲೈಟ್ಸ್‌‌‌ಗೆ ಎಲ್ಲೆಡೆಯಿಂದ ಅಭೂತಪೂರ್ವ ಪ್ರಶಂಸೆ ಹಾಗೂ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಮೆಜೆಸ್ಟಿಕ್‌‌‌ನ ಅಣ್ಣಮ್ಮನ ಅಂಗಳದಲ್ಲಿ ಕತ್ತಲಾದ ಬಳಿಕ ಏನೆಲ್ಲಾ ನಡೆಯುತ್ತೆ ಅನ್ನೋದಕ್ಕೆ ಸಿಟಿಲೈಟ್ಸ್ ಮುನ್ನುಡಿ ಜೊತೆ ಬೆನ್ನುಡಿಯೂ ಬರೆದಿದೆ. ನೊಂದವರು, ಬೆಂದವರು, ಬಳಲಿ ಬೆಂಡಾದವರೇ ದುನಿಯಾ ವಿಜಯ್ ಅವ್ರ ಕಥಾವಸ್ತು ಆಗಿರೋದ್ರಿಂದ ಸಿಟಿಲೈಟ್ಸ್ ಚಿತ್ರದ ಕಥೆ ಮೆಜೆಸ್ಟಿಕ್‌‌‌ನಲ್ಲಿ ಮೈ ಮಾರಿ ಬದುಕುವವರು, ಕಮಿಷನ್ ದಂಧೆ ಮಾಡುವವರು, ಅದಕ್ಕೆ ಸಾಥ್ ಕೊಡುವ ಖಾಕಿ ಹೀಗೆ ಎಲ್ಲವನ್ನ ಸಮಗ್ರವಾಗಿ ತೋರಿಸಲಾಗಿದೆ.

ಸಲಗ, ಭೀಮ ಹಾಗೂ ಸಿಟಿಲೈಟ್ಸ್ ಸಿನಿಮಾಗಳಿಂದ ಹ್ಯಾಟ್ರಿಕ್ ಡೈರೆಕ್ಟರ್ ಅನ್ನೋ ಬಿರುದು ಪಡೆದಿರೋ ವಿಜಯ್ ಕುಮಾರ್, ನಿರ್ದೇಶನದಲ್ಲಿ ವಿಜಯಯಾತ್ರೆ ಮುಂದುವರೆಸಿದ್ದಾರೆ. ಬ್ಲ್ಯಾಕ್ ಕೋಬ್ರಾ ದುನಿಯಾ ವಿಜಯ್‌ರನ್ನ ಒಂದಷ್ಟು ಮಂದಿ ಗೊಬ್ರ ಅಂತಾರೆ. ಅಫ್‌ ಕೋರ್ಸ್ ನಿಜಾನೇ.. ಆತ ಒಂಥರಾ ಸಾವಯವ ಗೊಬ್ಬರ ಇದ್ದಂತೆ. ಅದ್ರಿಂದ ಎಂಥಾ ಫಸಲು ತೆಗೆಯಬಹುದು ಅನ್ನೋದನ್ನ ಹಂತ ಹಂತವಾಗಿ ತೋರಿಸಿಕೊಡ್ತಾನೇ ಬರ್ತಿದ್ದಾರೆ. ಉರ್ಕೊಳ್ಳೋರು ಉರ್ಕೊಳ್ಳಲಿ ಅಂತ ಸದಾ ತಾನಾಯ್ತು, ತನ್ನ ಕೆಲಸ ಆಯ್ತು ಅಂತ ಸಿನಿಮಾಗಾಗಿ ಜೀವಿಸ್ತಿದ್ದಾರೆ ಈ ಕಲಾಜೀವಿ.

ನೂರಾರು ಕೋಟಿ ಸುರಿದು, ಪ್ಯಾನ್ ಇಂಡಿಯಾ ಸಿನಿಮಾಗಳನ್ನ ಮಾಡಿ, ಕೈ ಸುಟ್ಟಿಕೊಳ್ತಿರೋರ ಮಧ್ಯೆ ನಟ ದುನಿಯಾ ವಿಜಯ್, ಒಂದ್ಕಡೆ ಅಭಿನಯ ಮಾಡಿಕೊಂಡೇ ಮತ್ತೊಂದ್ಕಡೆ ನಿರ್ದೇಶನದ ಅಸಲಿ ಗತ್ತು, ಗಮ್ಮತ್ತು ಏನು ಅನ್ನೋದನ್ನ ಪ್ರೂವ್ ಮಾಡಿ ತೋರಿಸ್ತಿದ್ದಾರೆ. ಕಸದಿಂದ ರಸ ತೆಗೆಯೋದ್ರಲ್ಲಿ ಈತ ಮಾಸ್ಟರ್. ಹಾಗಾಗಿಯೇ ಇವ್ರ ಸಿನಿಮಾಗಳೆಲ್ಲಾ ಭಾವನಾತ್ಮಕ ವಿಷಯಗಳಿರುತ್ತೆ. ಬಡವ, ಬಲ್ಲಿದರ ಅಂದ್ರೆ ನೀವೆಲ್ಲಾ ಸ್ಲಮ್‌‌ಗಳು ಅಂತ ಕರೆಯುವವರ ಬದುಕು, ಬವಣೆಯನ್ನ ಆಧರಿಸಿಯೇ ಕಥೆಗಳು ರೂಪುಗೊಂಡಿವೆ. ಅವುಗಳಿಗೆ ಒಂಚೂರು ಮಾಸ್ ಟಚ್ ಕೊಟ್ಟು ಉಣಬಡಿಸೋ ಕಾರ್ಯ ಮಾಡ್ತಿದ್ದಾರೆ ದುನಿಯಾ ವಿಜಯ್.

ಲೋ ಬಜೆಟ್ ಸಿನಿಮಾಗಳಿಂದ ಪ್ರಾಫಿಟ್ ಮಾಡೋದು ಹೇಗೆ ಅನ್ನೋದನ್ನ ಸಲಗ, ಭೀಮ ಹಾಗೂ ಸಿಟಿಲೈಟ್ಸ್‌ ಚಿತ್ರಗಳಿಂದ ಮನದಟ್ಟು ಮಾಡಿದ್ದಾರೆ. ಸಕ್ಸಸ್‌ಗೆ ಕೇರ್ ಆಫ್ ಅಡ್ರೆಸ್ ಆಗಿರೋ ವಿಜಯ್.. ನಿರ್ದೇಶನವನ್ನ ಎಷ್ಟು ಶ್ರದ್ಧೆಯಿಂದ ಮಾಡ್ತಾರೆ ಅನ್ನೋದಕ್ಕೆ ಈ ಹ್ಯಾಟ್ರಿಕ್ ಸಕ್ಸಸ್ ನಿದರ್ಶನ. ಕಥೆ, ಚಿತ್ರಕಥೆಯ ಬರವಣಿಗೆ, ಪಾತ್ರಗಳ ಆಯ್ಕೆ, ಡೈಲಾಗ್ಸ್, ಮೇಕಿಂಗ್, ಕ್ಯಾಮೆರಾ ಆ್ಯಂಗಲ್ಸ್, ಮ್ಯೂಸಿಕ್ ಟೇಸ್ಟ್, ಕಲಾವಿದರಿಂದ ಅಭಿನಯ ತೆಗೆಸುವುದು.. ಹೀಗೆ ಎಲ್ಲದರಲ್ಲೂ ವಿಜಯ್ ಪಂಟರ್.

ಬಣ್ಣದಲೋಕದಲ್ಲಿ ತಾನೊಬ್ಬ ಫೈಟ್ ಬಾಯ್ ಆಗಿ ವೃತ್ತಿ ಆರಂಭಿಸಿದವರು ವಿಜಯ್. ಆದ್ರೆ ಇಂದು ಮೋಸ್ಟ್ ಡಿಮ್ಯಾಂಡಿಂಗ್ ಬಹುಭಾಷಾ ನಟ. ಸ್ಟಂಟ್ಸ್‌ ಬಗ್ಗೆ ಅಷ್ಟೇ ಅಲ್ಲದೆ, ಬರಹಗಾರರ ಬಗ್ಗೆ, ಬರವಣಿಗೆಗೆ ಇರೋ ತಾಕತ್ತಿನ ಬಗ್ಗೆ ಚೆನ್ನಾಗಿ ಅರಿತಿದ್ದಾರೆ. ಅದೇ ಕಾರಣದಿಂದ ಗನ್‌ನಂತಹ ಮಾಸ್ತಿ ಪೆನ್‌ನ ಜೊತೆಗಿರಿಸಿಕೊಂಡಿದ್ದಾರೆ. ಶಿವಸೇನಾ ಅಂತಹ ಕ್ಯಾಮೆರಾ ಕಟ್ಟು ಸದಾ ಜೊತೆಗೇ ಇದೆ. ಇನ್ನೂ ಮ್ಯೂಸಿಕ್ ಬಗ್ಗೆ ಸಿಕ್ಕಾಪಟ್ಟೆ ತಲೆ ಕೆಡಿಸಿಕೊಳ್ಳೋ ವಿಜಯ್.. ಚರಣ್ ರಾಜ್ ಜೊತೆ ಒಂದಷ್ಟು ಜಾನಪದ ಹಾಗೂ ಱಪ್ ಸಿಂಗರ್ಸ್‌‌ ಒಡನಾಟದಲ್ಲಿದ್ದಾರೆ.

ಒಟ್ಟಾರೆ ದುನಿಯಾ ವಿಜಯ್ ಸಿನಿಮಾ ಕನಸು ಕಾಣೋ ಅದೆಷ್ಟೋ ಮಂದಿಗೆ ರೋಲ್ ಮಾಡೆಲ್. ನಟನೆಗೆ ಕಲರ್‌‌ಗಿಂತ ಖದರ್ ಮುಖ್ಯ ಅನ್ನೋದನ್ನ ತೋರಿಸಿದವರು. ನಿರ್ದೇಶನಕ್ಕೆ ಪ್ರೊಡ್ಯೂಸರ್‌‌ಗಿಂತ ಒಳ್ಳೆಯ ಕಥೆ ಇಂಪಾರ್ಟೆಂಟ್ ಅಂತ ಸಾರಿದವರು. ಸದ್ಯ ತಮಿಳಲ್ಲಿ ಲೇಡಿ ಸೂಪರ್ ಸ್ಟಾರ್ ನಯನತಾರಾ ಜೊತೆ ಮೂಕುತಿ ಅಮ್ಮನ್-2 ಹಾಗೂ ತೆಲುಗಿನಲ್ಲಿ ಪೂರಿ ಜಗನ್ನಾಥ್-ವಿಜಯ್ ಸೇತುಪತಿ ಕಾಂಬೋನ ಸ್ಲಂ ಡಾಗ್ ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಅವುಗಳ ನಂತ್ರ ನಿರ್ದೇಶನದಲ್ಲಿ ಮತ್ತೆ ಯಾವ ರೀತಿಯ ಪ್ರಯೋಗ ಮಾಡ್ತಾರೆ ಅನ್ನೋದನ್ನ ಕಾದುನೋಡಬೇಕಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version