ಸ್ಯಾಂಡಲ್ವುಡ್ ಉಪಾಧ್ಯಕ್ಷ ಚಿಕ್ಕಣ್ಣನ ಭವಿಷ್ಯ ನುಡಿದಿದ್ದಾರೆ ಕರುನಾಡ ಚಕ್ರವರ್ತಿ ಶಿವರಾಜ್ಕುಮಾರ್. ಮತ್ತೊಂದೆಡೆ ಲಕ್ಷ್ಮಿಪುತ್ರನಾಗಿರೋ ಚಿಕ್ಕಣ್ಣ.. ರಾಕಿಭಾಯ್ ಯಶ್ನ ನೆನೆದು ಹೇಳಿದ್ದೇನು..? ಹೇಗಿದೆ ಲಕ್ಷ್ಮೀಪುತ್ರ ಟ್ರೈಲರ್..? ಶಿವಣ್ಣ-ತಾರಾ ಜೋಗಿ ಮದರ್ ಸೆಂಟಿಮೆಂಟ್ ಸಾಂಗ್ಗೆ ಕುಣಿದಿದ್ದು ಹೇಗೆ ಅನ್ನೋದ್ರ ಕಂಪ್ಲೀಟ್ ಕಹಾನಿ ಇಲ್ಲಿದೆ..
- ‘ಲಕ್ಷ್ಮೀಪುತ್ರ’ನಿಗೆ ಶಿವ ಕೃಪಾಕಟಾಕ್ಷ.. ಚಿಕ್ಕಣ್ಣ-ತಾರಾ ರಂಗು
- ಚಿಕ್ಕಣ್ಣ ಹಾಸ್ಯಕ್ಕೆ ಮದರ್ ಸೆಂಟಿಮೆಂಟ್ ಎಲಿಮೆಂಟ್ ಸಾಥ್
- ಚಿಕ್ಕಣ್ಣಗೆ ಶಿವಣ್ಣ ಭವಿಷ್ಯ.. ಜೋಗಿ ಎವರ್ಗ್ರೀನ್ ಸ್ಟೆಪ್ಸ್..!!
- ರಾಕಿಭಾಯ್ ಯಶ್ ನೆನಪಲ್ಲಿ ಚಿಕ್ಕಣ್ಣನ ರೇಸ್ ಡೈಲಾಗ್
ಕಾಮಿಡಿ ಟೈಮಿಂಗ್ನಿಂದಲೇ ಕನ್ನಡಿಗರ ಮನಗೆದ್ದಿದ್ದ ಚಿಕ್ಕಣ್ಣ ನಾಯಕ ನಟನಾಗಿ ಅಭಿನಯಿಸಿರುವ ಎರಡನೇ ಸಿನಿಮಾ ಲಕ್ಷ್ಮಿ ಪುತ್ರ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಟ್ರೇಲರ್ ಲಾಂಚ್ ಮಾಡಿ ಮಾತನಾಡಿದ ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್ಕುಮಾರ್, ಚಿಕ್ಕಣ್ಣ ಅವರ ಡ್ಯಾನ್ಸ್ ಕಂಡು ಇವರು ನಮ್ಮ ಕನ್ನಡದ ಪ್ರಭುದೇವ ಎಂದು ಹಾಡಿಹೊಗಳಿದರು. ಚಿಕ್ಕಣ್ಣ ಇನ್ನು ಎರಡು ವರ್ಷ ಆದ್ಮೇಲೆ ಖಂಡಿತ ಸೂಪರ್ ಸ್ಟಾರ್ ಆಗಿರ್ತಾರೆ ಎಂದು ಶಿವಣ್ಣ ನುಡಿದ ಭವಿಷ್ಯ ಅಭಿಮಾನಿಗಳ ಶಿಳ್ಳೆ-ಚಪ್ಪಾಳೆ ಗಿಟ್ಟಿಸಿತು. ಇನ್ನು ಚಿತ್ರದ ಅಮ್ಮನ ಹಾಡನ್ನು ಕೇಳಿ ಭಾವುಕರಾದ ಶಿವಣ್ಣ ತಮ್ಮ ತಾಯಿ ಪಾರ್ವತಮ್ಮನನ್ನು ನೆನೆದು..ತಾಯಿ ಅಂದ್ರೆ ಉಸಿರು ಎಂದು ತಾಯಿ-ಮಗನ ಬಾಂಧವ್ಯದ ಮಹತ್ವವನ್ನು ಬಿಚ್ಚಿಟ್ಟರು.
ಇನ್ನು ನಾಯಕ ಚಿಕ್ಕಣ್ಣ ತಮ್ಮ ಎಂದಿನ ಹಾಸ್ಯ ಶೈಲಿಯಲ್ಲೇ ಖಡಕ್ ಆಗಿ ಮಾತನಾಡಿದರು. ಈ ತಿಂಗಳು ತುಂಬಾ ಸಿನಿಮಾಗಳು ರಿಲೀಸ್ ಆಗ್ತಿರೋದಕ್ಕೆ ಸ್ವಲ್ಪ ಗಾಬರಿ ಆಗ್ತಿದೆ, ಆದ್ರೆ ನನಗೆ ರಾಕಿಭಾಯ್ ಡೈಲಾಗ್ ನೆನಪಾಯ್ತು, ರೇಸ್ನಲ್ಲಿ ಒಂದೇ ಕುದುರೆ ಓಡಿದ್ರೆ ಅದನ್ನ ಜಟಕಗಾಡಿ ಅಂತಾರೆ, ಅಕ್ಕಪಕ್ಕ ಕುದುರೆ ಇದ್ರೇನೆ ಅದಕ್ಕೆ ರೇಸ್ ಅಂತಾರೆ ಎಂದು ಸಖತ್ ಪಂಚ್ ಕೊಟ್ಟರು. ಜೊತೆಗೆ ಶಿವಣ್ಣ ಅವರ ಭವಿಷ್ಯದ ಮಾತುಗಳಿಗೆ ಭಾವುಕರಾದ ಚಿಕ್ಕಣ್ಣ, ನಾನು ಮುಂದೆ ಬೆಳಿತೀನೋ ಇಲ್ವೋ ಗೊತ್ತಿಲ್ಲ, ಆದ್ರೆ ಅಣ್ಣಾವ್ರ ಮಗನ ಬಾಯಲ್ಲಿ ಆ ಮಾತು ಕೇಳಿದ್ದೇ ನನಗೆ ಸೂಪರ್ ಸ್ಟಾರ್ ಆದಷ್ಟೇ ಖುಷಿ ಕೊಟ್ಟಿದೆ ಎಂದು ಮನತುಂಬಿ ನುಡಿದರು.
ವೇದಿಕೆ ಮೇಲೆ ಲಕ್ಷ್ಮಿ ಪುತ್ರ ಚಿತ್ರದ ಎಮೋಷನಲ್ ಅಮ್ಮನ ಹಾಡಿಗೆ ಶಿವರಾಜ್ಕುಮಾರ್, ಹಿರಿಯ ನಟಿ ತಾರಾ ಅನುರಾಧ ಹಾಗೂ ಚಿಕ್ಕಣ್ಣ ಒಟ್ಟಾಗಿ ಜೋಗಿ ಸ್ಟೆಪ್ಸ್ ಹಾಕಿ ಇಡೀ ಸಭಾಂಗಣದಲ್ಲಿ ಹಬ್ಬದ ವಾತಾವರಣ ಸೃಷ್ಟಿಸಿದರು. ಇದೇ ವೇಳೆ ಮಾತನಾಡಿದ ನಟಿ ತಾರಾ ಅವರು, ಈ ಪಾತ್ರ ನೀವೇ ಮಾಡಬೇಕು, ಇಲ್ಲ ಅಂದ್ರೆ ಈ ಸಿನಿಮಾನೇ ಮಾಡಲ್ಲ ಅಂತ ಎ.ಪಿ. ಅರ್ಜುನ್ ಪಟ್ಟು ಹಿಡಿದಿದ್ದರು. ಚಿತ್ರರಂಗಕ್ಕೆ ಬಂದು 40 ವರ್ಷಗಳಾದರೂ ಇಂದಿಗೂ ಇಂತಹ ಪಾತ್ರಗಳು ನನ್ನನ್ನೇ ಹುಡುಕಿಕೊಂಡು ಬರುತ್ತಿರುವುದು ನನ್ನ ಪುಣ್ಯ ಎಂದು ಸಂತಸ ಹಂಚಿಕೊಂಡರು.
ಹೊಸ ಪ್ರತಿಭೆಗಳನ್ನು ಪರಿಚಯಿಸುವುದರಲ್ಲಿ ಎತ್ತಿದ ಕೈ ಎನಿಸಿಕೊಂಡಿರುವ ಎ.ಪಿ. ಅರ್ಜುನ್ ಈ ಚಿತ್ರಕ್ಕೆ ಕಥೆ ಹಾಗೂ ಸಾಹಿತ್ಯ ಬರೆದಿದ್ದು, ತಮ್ಮದೇ ಎ.ಪಿ. ಅರ್ಜುನ್ ಫಿಲ್ಮ್ಸ್ ಬ್ಯಾನರ್ನಡಿ ಅನ್ನಪೂರ್ಣ ಎ.ಪಿ. ಅರ್ಜುನ್ ನಿರ್ಮಾಣ ಮಾಡಿದ್ದಾರೆ. ವಿಜಯ್ ಎಸ್. ಸ್ವಾಮಿ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಸಿನಿಮಾದಲ್ಲಿ ಚಿಕ್ಕಣ್ಣ ಜೊತೆ ವಂದಿತಾ ಗೌಡ, ತಾರಾ ಅನುರಾಧ, ಮಿತ್ರ, ಧರ್ಮಣ್ಣ, ಶಿವರಾಜ್ ಕೆ ಆರ್ ಪೇಟೆ ತಾರಾಗಣವಿದ್ದು, ಹಾಸ್ಯದ ಜೊತೆಗೆ ಭಾವನಾತ್ಮಕ ತಾಯಿ-ಮಗನ ಬಾಂಧವ್ಯದ ಝಲಕ್ ಟ್ರೇಲರ್ನಲ್ಲಿ ಭರ್ಜರಿಯಾಗಿ ವರ್ಕೌಟ್ ಆಗಿದೆ.
ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಅವರ ಸಂಗೀತ ನಿರ್ದೇಶನದಲ್ಲಿ ಈಗಾಗಲೇ ಬಿಡುಗಡೆಯಾಗಿರುವ ಇನ್ಮೇಲೆ, ಐ ಲವ್ ಯು ಪರಿಮಳ, ಹಾಗೂ ಅಮ್ಮನ ಹಾಡು ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ನಲ್ಲಿವೆ. ಇಂದಿನ ಯುವಜನತೆಯ ಫೇಸ್ಬುಕ್-ಇನ್ಸ್ಟಾಗ್ರಾಮ್ ಪ್ರೇಮಕಥೆಗಳು, ಚಿಕ್ಕಣ್ಣ ಕಾಮಿಡಿ ಕಿಕ್ ಹಾಗೂ ತಾಯಿ ಸೆಂಟಿಮೆಂಟ್ನ ಪಕ್ಕಾ ಪ್ಯಾಕೇಜ್ ಆಗಿರುವ ಲಕ್ಷ್ಮಿ ಪುತ್ರ ಬಾಕ್ಸ್ ಆಫೀಸ್ನಲ್ಲಿ ಮನರಂಜನೆ ನೀಡಲು ನವೆಂಬರ್ 27ಕ್ಕೆ ಸಜ್ಜಾಗಿದೆ.
ಕೀರ್ತಿ ಪಾಟೀಲ್, ಫಿಲ್ಮ್ ಬ್ಯೂರೋ, ಗ್ಯಾರಂಟಿ ನ್ಯೂಸ್
