ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್
ಚಕ್ರವರ್ತಿ ಚಂದ್ರಚೂಡ್ ಕಮೋಡ್ ಟು ಕಾಂಡೋಮ್ ವಿವಾದಾತ್ಮಕ ಹೇಳಿಕೆ ಚಿತ್ರರಂಗದಲ್ಲಿ ತಾರಕಕ್ಕೇರಿತ್ತು. ಕೆ ಮಂಜು ಹಾಗೂ ಚಂದ್ರಚೂಡ್ ನಡುವೆ ಟಾಕ್ ವಾರ್ ಆಗಿತ್ತು. ಆದ್ರೀಗ ಫಿಲ್ಮ್ ಚೇಂಬರ್ ಅಧ್ಯಕ್ಷೆ ಜಯಮಾಲಾ ಮುಂದಾಳತ್ವದಲ್ಲಿ ಸಂಧಾನ ಸಫಲವಾಗಿದೆ. ಅಷ್ಟೇ ಅಲ್ಲ.. ರಾಕಿಂಗ್ ಟಾಕ್ಸಿಕ್‌ಗೆ ಚಿತ್ರರಂಗ ಸಾಥ್ ನೀಡಿದೆ.
ಕ್ಷಮೆಯಾಚಿಸಿದ ಚಂದ್ರಚೂಡ್.. ವಿವಾದ ಸುಖಾಂತ್ಯ
ತಾಯಿ ಸಮಾನ ಜಯಮಾಲಾ ನಿರ್ಧಾರಕ್ಕೆ ಚಕ್ರಿ ಬದ್ಧ
ಕನ್ನಡ ಚಿತ್ರರಂಗದಲ್ಲಿ ಭಾರಿ ಚರ್ಚೆಗೆ ಕಾರಣವಾದ ಚಕ್ರವರ್ತಿ ಚಂದ್ರಚೂಡ್ ಅವರ ಹೇಳಿಕೆ ಕೊನೆಗೂ ಸುಖಾಂತ್ಯ ಕಂಡಂತಾಗಿದೆ. ನಿರ್ಮಾಪಕರೇ ಹೀರೋಗಳಿಗೆ ಕಾಂಡಂ ಸಪ್ಲೈ ಮಾಡ್ತಾರೆ ಎಂಬ ವಿವಾದಾತ್ಮಕ ಹೇಳಿಕೆ ಹೊರಬಂದ ಕ್ಷಣದಿಂದಲೇ ನಿರ್ಮಾಪಕರ ವಲಯದಲ್ಲಿ ಆಕ್ರೋಶ ಜ್ವಾಲೆ ಹೊತ್ತಿಕೊಂಡಿತ್ತು. ನಿರ್ಮಾಪಕರ ಸಂಘ ತೀವ್ರ ಆಕ್ಷೇಪ ವ್ಯಕ್ತಪಡಿಸಿದರೆ, ಕೆ. ಮಂಜು ಸೇರಿದಂತೆ ಹಲವರು ಕಿಡಿಕಾರಿದ್ದರು.
ಇದೇ ಹಿನ್ನೆಲೆಯಲ್ಲಿ ಇಂದು ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲಾ ಅವರ ನೇತೃತ್ವದಲ್ಲಿ ಸಂಧಾನ ಸಭೆ ನಡೆಯಿತು. ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಭಾಗಿಯಾದ ಚಕ್ರವರ್ತಿ ಚಂದ್ರಚೂಡ್, ಈ ಹಿಂದೆ ಹೇಳಿಕೆಗೆ ಕ್ಷಮೆ ಕೇಳಿದ್ದೇನೆ, ಈಗಲೂ ಕೇಳುತ್ತೇನೆ. ಜಯಮಾಲಾ ಅವರು ನನ್ನ ತಾಯಿ ಸಮಾನರು. ಅವರ ಮಾತಿಗೆ ಬದ್ಧನಾಗಿ ನಿಲ್ಲುತ್ತೇನೆ. ಚಿತ್ರೋದ್ಯಮದ ನಿರ್ಮಾಪಕರಿಗೆ ನೋವು ಉಂಟುಮಾಡುವ ಉದ್ದೇಶ ನನಗಿಲ್ಲ ಎಂದು ಸ್ಪಷ್ಟಪಡಿಸಿದರು.
ಇದೇ ವೇಳೆ ಮಾತನಾಡಿದ ಜಯಮಾಲಾ, ಬಾಯಿ ತಪ್ಪಿ ಹೇಳಿದ ಮಾತಿಗೆ ಚಂದ್ರಚೂಡ್ ಅವರು ಕ್ಷಮೆ ಕೇಳಿದ್ದಾರೆ. ಇಲ್ಲಿಗೇ ವಿಷಯವನ್ನು ನಿಲ್ಲಿಸೋಣ, ಸುಖಾಂತ್ಯವಾಗಲಿ ಎಂದು ಸಮಾಧಾನಕರ ಧ್ವನಿಯಲ್ಲಿ ಹೇಳಿದರು. ಆದರೆ ಮತ್ತೊಂದೆಡೆ ಟಾಕ್ಸಿಕ್ ಸಿನಿಮಾ ಬಿಡುಗಡೆಗೂ ಮುನ್ನವೇ ಮತ್ತೊಂದು ದೊಡ್ಡ ವಿವಾದದ ಸುಳಿಗೆ ಸಿಲುಕಿದೆ. ಸಿನಿಮಾದ ಕೆಲ ದೃಶ್ಯಗಳು ಕ್ರೈಸ್ತ ಧರ್ಮದ ಭಾವನೆಗಳಿಗೆ ಧಕ್ಕೆ ತರುತ್ತವೆ ಎಂಬ ಆರೋಪದೊಂದಿಗೆ ‘ರಾಷ್ಟ್ರೀಯ ಕ್ರೈಸ್ತ ಒಕ್ಕೂಟ’ ಚಿತ್ರತಂಡದ ವಿರುದ್ಧ ಕಾನೂನು ಹೋರಾಟದ ಎಚ್ಚರಿಕೆ ನೀಡಿದೆ. ಫಿಲಂ ಚೇಂಬರ್‌ಗೆ ಕೂಡ ದೂರು ಸಲ್ಲಿಸಲಾಗಿದೆ. ಈ ಬೆಳವಣಿಗೆಯ ಬಗ್ಗೆ ಜಯಮಾಲಾ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ.
ಟೀಸರ್ ನೋಡಿ ಹೇಳೋಕೆ ಆಗಲ್ಲ- ಫಿಲ್ಮ್ ಚೇಂಬರ್
ರಾಕಿಭಾಯ್ ಟಾಕ್ಸಿಕ್ ಪರ ಚಿತ್ರರಂಗ ಬ್ಯಾಟಿಂಗ್..!!
ಐದು ದಶಕಗಳಿಂದ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಜಯಮಾಲಾ, ಟಾಕ್ಸಿಕ್ ಸಿನಿಮಾ ಪರವಾಗಿ ಸ್ಪಷ್ಟ ನಿಲುವು ವ್ಯಕ್ತಪಡಿಸಿದ್ದಾರೆ. ನಿರ್ಮಾಪಕರ ಜೊತೆ ಮಾತನಾಡಿ ಹೇಳುತ್ತಿದ್ದೇನೆ ಧರ್ಮಕ್ಕೆ ಧಕ್ಕೆ ತರುವ ಕೆಲಸ ಟಾಕ್ಸಿಕ್ ತಂಡ ಮಾಡುವುದಿಲ್ಲ. ಯಶ್ ವಿಚಾರವಂತರಾಗಿ ಹೀಗೆ ಮಾಡೋವರಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕೇವಲ ಟೀಸರ್ ನೋಡಿ ಸಿನಿಮಾವನ್ನು ಟಾರ್ಗೆಟ್ ಮಾಡುವುದು ಸರಿಯಲ್ಲ, ಪೂರ್ತಿ ಸಿನಿಮಾ ನೋಡಿ ಮಾತಾಡಬೇಕು ಎಂದು ಕನ್ನಡ ಸಿನಿಮಾ ಪರ ನಿಂತಿದ್ದಾರೆ ಜಯಮಾಲಾ. ವಿವಾದಗಳ ನಡುವೆ ಟಾಕ್ಸಿಕ್ ಸಿನಿಮಾದ ಬಗ್ಗೆ ಕುತೂಹಲ ಮತ್ತಷ್ಟು ಗಟ್ಟಿಯಾಗಿದ್ದು, ಮುಂದಿನ ಬೆಳವಣಿಗೆಗಳತ್ತ ಎಲ್ಲರ ದೃಷ್ಟಿ ನೆಟ್ಟಿದೆ.





