ಕಾವೇರಿ ಕಿಚ್ಚಿಗೆ ಕರ್ನಾಟಕದಲ್ಲಿ ವಿಜಯ್ ಸಿನಿಮಾಗೆ ಬ್ರೇಕ್

ಅನೈತಿಕ (7)

ತಮಿಳುನಾಡು-ಕರ್ನಾಟಕದ ನಡುವಿನ ಕಾವೇರಿ ಜಟಾಪಟಿ ಈಗ ಬಾಕ್ಸಾಫೀಸ್‌ಗೆ ಬಿಸಿ ತುಪ್ಪ ಸುರಿದಿದೆ. ಕಾಲಿವುಡ್ ವಿಜಯ್ ಸಿನಿಮಾಗೆ ಕರ್ನಾಟಕದಲ್ಲಿ ಬ್ರೇಕ್ ಬಿದ್ದಿದ್ದರೆ, ಮತ್ತೊಂದೆಡೆ ಕನ್ನಡಿಗರ ರೋಷಕ್ಕೆ ಬೆದರಿ ಚಿತ್ರಮಂದಿರಗಳೇ ಖಾಲಿಯಾಗುತ್ತಿವೆ. ಈ ಮಹಾ ವಿವಾದದ ಲಾಭ ಯಾರಿಗೆ ಆಯ್ತು? ದಳಪತಿ ಸಿನಿಮಾಗೆ ಬೈ-ಬೈ ಹೇಳಿ ಚಿತ್ರಮಂದಿರಗಳು ಮಾಡಿದ ಆ ಮಾಸ್ ಪ್ಲಾನ್ ಏನು? ಇಲ್ಲಿದೆ ನೋಡಿ ಕಾವೇರಿ ಕಿಚ್ಚು ಮತ್ತು ಗಾಂಧಿನಗರದ ಕಂಪ್ಲೀಟ್ ಸ್ಪೈಸಿ ರಿಪೋರ್ಟ್.

ಕರ್ನಾಟಕ ಮತ್ತು ತಮಿಳುನಾಡು ನಡುವಿನ ಕಾವೇರಿ ನೀರಿನ ರಣರಂಗ ಈಗ  ನದಿ ದಾಟಿ ಸಿನಿರಂಗಕ್ಕೂ ಬೆಂಕಿ ಹೊತ್ತಿಸಿದೆ. ಕಾವೇರಿ ನೀರು ನಿರ್ವಹಣಾ ಸಮಿತಿ  ತಮಿಳುನಾಡಿಗೆ ನೀರು ಹರಿಸಲು ಆದೇಶಿಸುತ್ತಿದ್ದಂತೆ ರಾಜ್ಯಾದ್ಯಂತ ಕನ್ನಡ ಪರ ಸಂಘಟನೆಗಳ ಆಕ್ರೋಶ ಭುಗಿಲೆದ್ದಿದೆ. ಈ ನದಿ ವಿವಾದದ ಕಾವು ಈಗ ಚಿತ್ರರಂಗಕ್ಕೂ ತಟ್ಟಿದ್ದು, ತಮಿಳುನಾಡು ರಾಜಕೀಯ ರಂಗಕ್ಕೆ ಕಾಲಿಟ್ಟಿರುವ ನಟ ವಿಜಯ್ ಅಭಿನಯದ ಜನ ನಾಯಗನ್ ಸಿನಿಮಾಗೆ ಕರ್ನಾಟಕದಲ್ಲಿ ಅಘೋಷಿತ ನಿಷೇಧ ಬಿದ್ದಿದೆ. ಬೆಂಗಳೂರಿನ ಅಂಜನ್, ಊರ್ವಶಿ, ವಿಕ್ಟರಿ, ಸಂಪಿಗೆ, ಪೂರ್ಣಿಮಾ, ಗುರುಶ್ರೀ ಥಿಯೇಟರ್ ಗಳು ಸೇರಿದಂತೆ ಹಲವು ಚಿತ್ರಮಂದಿರಗಳಿಂದ ಪೋಸ್ಟರ್‌ಗಳನ್ನು ತೆರವುಗೊಳಿಸಿ, ಶೋಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ. ನಿನ್ನೆವರೆಗೂ 500ಕ್ಕೂ ಹೆಚ್ಚು ಪ್ರದರ್ಶನ ಕಾಣುತ್ತಿದ್ದ ಈ ಚಿತ್ರದ ಶೋಗಳು ಕೇವಲ 100ಕ್ಕೆ ಕುಸಿದುಬಿದ್ದಿವೆ.

ಆದರೆ ಈ ಕಾವೇರಿ ಕಿಚ್ಚಿನ ನಡುವೆಯೇ ಕನ್ನಡಿಗರಿಗೆ ಮತ್ತು ಕನ್ನಡ ಚಿತ್ರರಂಗಕ್ಕೆ ಭರ್ಜರಿ ಧಮಾಕ ಸಿಕ್ಕಿದೆ. ಜನ ನಾಯಗನ್ ಸಿನಿಮಾವನ್ನು ಸದ್ದಿಲ್ಲದೆ ಎತ್ತಂಗಡಿ ಮಾಡಿದ ಚಿತ್ರಮಂದಿರಗಳ ಮಾಲೀಕರು, ಖಾಲಿ ಬಿದ್ದ ಪರದೆಗಳ ಮೇಲೆ ಕರಾವಳಿಯ ಕಥೆಯನ್ನು ಹರಡಿದ್ದಾರೆ. ಹೌದು, ಕಾವೇರಿ ವಿವಾದದ ಲಾಭ ನೇರವಾಗಿ ಕನ್ನಡದ ಕರಾವಳಿ ಸಿನಿಮಾಗೆ ಸಿಕ್ಕಿದ್ದು, ಶೇ 80%ಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ ವಿಜಯ್ ಸಿನಿಮಾವನ್ನು ತೆಗೆದುಹಾಕಿ, ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಮತ್ತು ರಾಜ್ ಬಿ. ಶೆಟ್ಟಿ ಜುಗಲ್ಬಂದಿಯ ‘ಕರಾವಳಿ’ ಪ್ರದರ್ಶನವನ್ನು ಆರಂಭಿಸಲಾಗಿದೆ. ತಮಿಳು ಚಿತ್ರಗಳ ದಬ್ಬಾಳಿಕೆಗೆ ಬ್ರೇಕ್ ಬಿದ್ದ ತಕ್ಷಣವೇ ಕನ್ನಡ ಸಿನಿಮಾಗೆ ಹೌಸ್‌ಫುಲ್ ಬೋರ್ಡ್‌ಗಳು ಬೀಳುತ್ತಿದ್ದು, ಕರಾವಳಿಯ ಮಾಸ್ ಮ್ಯಾನಿಯಾ ಬಾಕ್ಸಾಫೀಸ್‌ನಲ್ಲಿ ಹೊಸ ಇತಿಹಾಸ ಸೃಷ್ಟಿಸುತ್ತಿದೆ.

ಒಟ್ಟಿನಲ್ಲಿ, ಕರ್ನಾಟಕದಲ್ಲಿ ತಮಿಳು ಸಿನಿಮಾಗಳನ್ನ ಪೂರ್ತಿಯಾಗಿ ಬಾಯ್‌ಕಾಟ್ ಮಾಡಿರುವ ಕನ್ನಡ ಅಭಿಮಾನಿಗಳು ತಮ್ಮ ನೆಲ-ಜಲ ಮತ್ತು ಭಾಷೆಯ ಹಕ್ಕನ್ನು ಎತ್ತಿಹಿಡಿದಿದ್ದಾರೆ. ಜನ ನಾಯಗನ್ ಜಾಗದಲ್ಲಿ ಈಗ ಕರಾವಳಿ ಅಲೆ ಜೋರಾಗಿದ್ದು, ಪ್ರಜ್ವಲ್ ದೇವರಾಜ್ ಹಾಗೂ ರಾಜ್ ಶೆಟ್ಟಿ ಕಾಂಬಿನೇಷನ್‌ಗೆ ಡಿಮ್ಯಾಂಡ್ ನೆಕ್ಸ್ಟ್ ಲೆವೆಲ್‌ಗೆ ಹೋಗಿದೆ. ರಾಜಕೀಯದ ಕಿಚ್ಚಿನಲ್ಲಿ ತಮಿಳು ಚಿತ್ರರಂಗಕ್ಕೆ ತತ್ತರ ಉಂಟಾಗಿದ್ದರೆ, ಕನ್ನಡದ ‘ಕರಾವಳಿ’ ಮಾತ್ರ ಥಿಯೇಟರ್‌ಗಳಲ್ಲಿ ಅಬ್ಬರಿಸುತ್ತಾ ಕನ್ನಡಿಗರ ರೋಷಕ್ಕೆ ಸಾಕ್ಷಿಯಾಗಿದೆ.

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್

Exit mobile version