ನಾಣ್ಯ ಚಿಮ್ಮಿಸಿ ಜೀವನದ ನಿರ್ಧಾರ ಮಾಡ್ತಿದ್ದ ಹುಡುಗನ ಬದುಕಲ್ಲಿ ಎರಡು ಕೊಲೆಗಳು ನಡೆದ್ರೆ ಏನಾಗುತ್ತೆ..? ಅಲ್ಲಿಂದ ಶುರುವಾಗುತ್ತೆ ಟಾಸ್ ಆಟ. ತುಳುನಾಡ ಚಕ್ರವರ್ತಿ ಅರ್ಜುನ್ ಕಾಪಿಕಾಡ್ ಅಲಿಯಾಸ್ ಅರ್ಜುನ್ ದೇವ್ ನಿರ್ದೇಶಿಸಿ, ನಾಯಕನಾಗಿ ನಟಿಸಿರುವ ಟಾಸ್ ಇಂದು ಕನ್ನಡ ಮತ್ತು ತುಳುವಿನಲ್ಲಿ ತೆರೆಗೆ ಬಂದಿದೆ. ಪ್ರೀತಿ, ಕಾಮಿಡಿ, ಆ್ಯಕ್ಷನ್ ಜೊತೆಗೆ ಕೊಲೆಗಳ ಹಿಂದಿನ ಸತ್ಯ ಹುಡುಕುವ ಥ್ರಿಲ್ಲಿಂಗ್ ಜರ್ನಿಗೆ ಪ್ರೇಕ್ಷಕರು ಕೊಟ್ಟ ಮಾರ್ಕ್ಸ್ ಎಷ್ಟು ಅಂತೀರಾ..? ಈ ರಿವ್ಯೂ ರಿಪೋರ್ಟ್ ನೋಡಿ.
- ಕನ್ನಡ-ತುಳುನಲ್ಲಿ ಅರ್ಜುನ್ ದೇವ್ ಟಾಸ್ ಗೇಮ್
- ಎರಡು ಕೊಲೆಗಳು.. ಅಸಲಿ ಆಟ ಈಗ ಶುರು ಗುರು
- ಕೊಲೆಗಳ ಹಿಂದಿನ ರಹಸ್ಯ ಭೇದಿಸೋ ಜರ್ನಿ ಟಾಸ್
- 2 ಗಂಟೆ 22 ನಿಮಿಷದ ಆ್ಯಕ್ಷನ್ ಡ್ರಾಮಾಗೆ ಜೈಕಾರ..!
ಟಾಸ್ ಹಾಕಿದ್ರೆ ಹೆಡ್ ಬಂದ್ರೆ ಒಂದು ನಿರ್ಧಾರ.. ಟೇಲ್ ಬಂದ್ರೆ ಇನ್ನೊಂದು ನಿರ್ಧಾರ.. ಹೀಗೆ ಪ್ರತಿಯೊಂದು ವಿಚಾರಕ್ಕೂ ಟಾಸ್‌ನನ್ನೇ ನಂಬುವ ಶಿವನ ಬದುಕು ಮಾತ್ರ ಒಂದು ಹಂತದಲ್ಲಿ ಉಲ್ಟಾ ಟರ್ನ್ ಹೊಡೆಯುತ್ತೆ. ತಂದೆಯ ಡ್ರಾಮಾ ತಂಡದಲ್ಲಿನ ಇಬ್ಬರು ಸದಸ್ಯರು ನಿಗೂಢವಾಗಿ ಹತ್ಯೆಯಾಗ್ತಾರೆ. ಈ ಎರಡು ಕೊಲೆಗಳ ಹಿಂದಿನ ಸತ್ಯ ಏನು ಅನ್ನೋ ಹುಡುಕಾಟಕ್ಕೆ ಶಿವ ಇಳಿದಾಗ, ಕಥೆ ಬರೀ ಪ್ರೀತಿ-ಕಾಮಿಡಿಯಿಂದ ಕ್ರೈಂ ಮತ್ತು ಸಸ್ಪೆನ್ಸ್ ಕಡೆಗೆ ತಿರುಗುತ್ತೆ.
ತುಳುನಾಡಿನ ಫೇವರಿಟ್ ನಟ ಅರ್ಜುನ್ ದೇವ್.. ಈ ಬಾರಿ ಕನ್ನಡಿಗರ ಮುಂದೆ ಕೂಡ ಮಾಸ್ ಎಂಟ್ರಿ ಕೊಟ್ಟಿದ್ದಾರೆ. ನಾಯಕನಾಗಿರುವುದರ ಜೊತೆಗೆ ಸಿನಿಮಾಗೆ ನಿರ್ದೇಶನದ ಜವಾಬ್ದಾರಿಯನ್ನೂ ಅರ್ಜುನ್ ದೇವ್ ಹೊತ್ತಿದ್ದಾರೆ. ಅವರ ತಂದೆ, ಹಿರಿಯ ನಟ-ನಿರ್ದೇಶಕ ದೇವದಾಸ್ ಕಾಪಿಕಾಡ್ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಡ್ರಾಮಾ ತಂಡದ ಹಿನ್ನೆಲೆ, ಕುಟುಂಬ, ಪ್ರೀತಿ, ಭಾವನೆ ಮತ್ತು ಕ್ರೈಂ ಎಲ್ಲವನ್ನೂ ಒಂದೇ ಕಥೆಯಲ್ಲಿ ಬೆರೆಸಿರೋದು ಟಾಸ್ನ ಸ್ಪೆಷಲ್.
ಹೀರೋಗೆ ಸಾಥ್ ಕೊಡೋ ನಾಯಕಿಯಾಗಿ ಸುತೇಜ್ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ತುಳು ಚಿತ್ರರಂಗದ ನವೀನ್ ಡಿ. ಪಡೀಲ್, ಅರವಿಂದ್ ಬೋಳಾರ್, ಭೋಜರಾಜ್ ವಾಮಂಜೂರು, ಪ್ರಕಾಶ್ ತುಂಬಿನಾಡ್ ಹಾಗು ಕನ್ನಡದ ಗರುಡ ರಾಮ್ ಮತ್ತು ಬಾಲಾಜಿ ಮನೋಹರ್ ಸೇರಿದಂತೆ ದೊಡ್ಡ ತಾರಾಬಳಗ ಸಿನಿಮಾದಲ್ಲಿದೆ. ಹೀಗಾಗಿ ತುಳು ಪ್ರೇಕ್ಷಕರಿಗೆ ಪರಿಚಿತವಾದ ಕಲಾವಿದರ ಜೊತೆ ಕನ್ನಡ ಪ್ರೇಕ್ಷಕರನ್ನೂ ಸೆಳೆಯುವ ಪ್ರಯತ್ನ ಟಾಸ್ ನಲ್ಲಿದೆ.
ಸದ್ಯ ಬೆಂಗಳೂರಿನ ತ್ರಿವೇಣಿ ಚಿತ್ರಮಂದಿರದಲ್ಲಿ ಟಾಸ್ ಚಿತ್ರಕ್ಕೆ ಗ್ರ್ಯಾಂಡ್ ಓಪನಿಂಗ್ ಸಿಕ್ಕಿದ್ದು, ಚಿತ್ರಕ್ಕೆ ಪ್ರೇಕ್ಷಕರಿಂದ ಜೈಕಾರ ಸಿಗ್ತಿದೆ. ರಿಲೀಸ್‌ಗೂ ಮುನ್ನವೇ ಟಾಸ್ ಹಾಡುಗಳು ಗಮನ ಸೆಳೆದಿದ್ದವು. ಹೆಲೋ ಹೆಲೋ ನೀಲಾಂಬರಿ ಹಾಡಿಗೆ ಯೋಗರಾಜ್ ಭಟ್ ಸಾಹಿತ್ಯ ಬರೆದಿದ್ದು, ಅರ್ಜುನ್ ದೇವ್ ಮತ್ತು ಸುತೇಜ್ ಶೆಟ್ಟಿ ಜೋಡಿ ಕಾಣಿಸಿಕೊಂಡಿದೆ. ಮಣಿಕಾಂತ್ ಕದ್ರಿ ಸಂಗೀತ, ಅರ್ಮಾನ್ ಮಲಿಕ್ ಸೇರಿದಂತೆ ಗಾಯಕರ ಧ್ವನಿ ಸಿನಿಮಾದ ಮ್ಯೂಸಿಕ್‌ಗೆ ಮತ್ತಷ್ಟು ಬಜ್ ತಂದಿದೆ. ಇನ್ನು ಸಿನಿಮಾದ ಕ್ಯಾಮೆರಾ ಕೆಲಸವನ್ನು ಜೋಯೆಲ್ ಶಮನ್ ಡಿಸೋಜಾ, ಎಡಿಟಿಂಗ್ ಅನ್ನು ಯಶ್ವಿನ್ ಕೆ. ಶೆಟ್ಟಿಗಾರ್ ನಿರ್ವಹಿಸಿದ್ದಾರೆ.
ಇದು ಅರ್ಜುನ್ ದೇವ್ ಅವರ ಮತ್ತೊಂದು ತುಳು ಸಿನಿಮಾ ಮಾತ್ರ ಅಲ್ಲ.. ಕನ್ನಡ-ತುಳು ಎರಡೂ ಭಾಷೆಯ ಪ್ರೇಕ್ಷಕರನ್ನು ಒಂದೇ ಕಥೆಯ ಮೂಲಕ ತಲುಪೋ ಪ್ರಯತ್ನ. ಸುಮಾರು 2 ಗಂಟೆ 22 ನಿಮಿಷಗಳ ಈ ಆಕ್ಷನ್-ಡ್ರಾಮಾ ಇಂದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ಇನ್ನು ಶಿವನ ಟಾಸ್ ಯಾವ ಕಡೆ ಬೀಳುತ್ತೆ..? ಎರಡು ಕೊಲೆಗಳ ಸತ್ಯ ಹೊರಬರುತ್ತಾ..? ಅಂತ ತಿಳಿದುಕೊಳ್ಳೋಕೆ ಥಿಯೇಟರ್ ನಲ್ಲೆ ಈ ಸಿನಿಮಾ ನೋಡಬೇಕು. ಒಟ್ಟಾರೆ ಅರ್ಜುನ್ ಸ್ಯಾಂಡಲ್‌ವುಡ್‌ಗೆ ಸಿಕ್ಕ ಒಬ್ಬ ಅದ್ಭುತ ಹೀರೋ ಆಗಿದ್ದು, ಸ್ಟಾರ್ ಆಗುವ ಭರವಸೆ ಕೂಡ ನೀಡಿದ್ದಾರೆ.
ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್
