ಡಿಬಾಸ್ ಕೇಸ್ ಜೊತೆ..ಆಡಿಯೆನ್ಸ್ ಮನಸ್ಸು ಗೆದ್ದ ‘ಬಾಸ್’

ಬಾಸ್ ಚಿತ್ರದಲ್ಲಿ ಕಿರಾತಕ ಡಿ ಗ್ಯಾಂಗ್‌‌ನ ಕರಾಳ ಸತ್ಯ ಬಯಲು

ದೇ (17)

ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ನಟ ದರ್ಶನ್ ಹಾಗೂ ರೇಣುಕಾಸ್ವಾಮಿ ಕೊಲೆ ಪ್ರಕರಣ.. ಸದ್ಯ ಬೆಳ್ಳಿಪರದೆ ಮೇಲೆ ರಾರಾಜಿಸ್ತಿದೆ. ಹೌದು.. ಬಾಸ್ ಟೈಟಲ್‌‌ನಲ್ಲಿ ಬಿಡುಗಡೆಯಾಗಿರೋ ಈ ಸಸ್ಪೆನ್ಸ್ ಕ್ರೈಮ್ ಥ್ರಿಲ್ಲರ್ ಸಿನಿಮಾ ಕಾಲ್ಪನಿಕ ಅಲ್ಲವೇ ಅಲ್ಲ. ಫ್ರೇಮ್ ಟು ಫ್ರೇಮ್.. ಸೀನ್ ಟು ಸೀನ್ ಎಲ್ಲಾ ರಿಯಲ್. ಅಂದಹಾಗೆ ಡಿಬಾಸ್ ದರ್ಶನ್ ಜೊತೆ ಬರೀ ಕೇಸ್ ಅಷ್ಟೇ ಗೆದ್ದಿಲ್ಲ ಚಿತ್ರತಂಡ. ಚಿತ್ರಪ್ರೇಮಿಗಳ ಮನಸ್ಸು ಕೂಡ ಗೆದ್ದಿದೆ ಬಾಸ್. ಇದರ ಇಂಟ್ರೆಸ್ಟಿಂಗ್‌ ಸ್ಟೋರಿ ಇಲ್ಲಿದೆ…

ಬಾಸ್ ಹೆಸರೇ ಹೇಳುವಂತೆ ಇದು ಜಸ್ಟ್ ಸಿನಿಮಾ ಅಲ್ಲ, ಸ್ಯಾಂಡಲ್‌ವುಡ್‌ನ ಅತಿದೊಡ್ಡ ವಿವಾದಾತ್ಮಕ ಅಧ್ಯಾಯಕ್ಕೆ ಹಿಡಿದ ಕೈಗನ್ನಡಿ. ಟೀಸರ್ ನೋಡಿ ಇದು ಸೀನ್ ಟು ಸೀನ್, ಫ್ರೇಮ್ ಟು ಫ್ರೇಮ್ ಡಿ-ಗ್ಯಾಂಗ್ ಕಥೆ ಅಂತ ಗಾಂಧಿನಗರದಲ್ಲಿ ಶುರುವಾಗಿದ್ದ ಟಾಕ್, ಈಗ ಥಿಯೇಟರ್‌ಗಳಲ್ಲಿ ಸತ್ಯವಾಗಿ ಬ್ರೇಕ್ ಆಗಿ ಧೂಳೆಬ್ಬಿಸುತ್ತಿದೆ. ನಟ ದರ್ಶನ್ ಆಪ್ತ ಗೆಳತಿ ಪವಿತ್ರಾ ಗೌಡಗಾಗಿ ಚಿತ್ರದುರ್ಗದ ರೇಣುಕಾಸ್ವಾಮಿಯನ್ನ ಕಿಡ್ನ್ಯಾಪ್ ಮಾಡಿಸಿ, ಬೆಂಗಳೂರಿಗೆ ಎಳೆತಂದು, ಪಟ್ಟಣಗೆರೆ ಶೆಡ್ನಲ್ಲಿ ರಕ್ತಸಿಕ್ರವಾಗಿ ಚಿತ್ರಹಿಂಸೆ ನೀಡಿ ಸಾಯಿಸಿದ ಆ ಭೀಕರ ಕಥೆಯನ್ನ ಕಣ್ಣಿಗೆ ಕಟ್ಟಿದಂತೆ ತೆರೆಗೆ ತಂದಿದೆ ಬಾಸ್ ಚಿತ್ರತಂಡ.

ರಿಯಲ್ ಲೈಫ್ ಘಟನೆಗೆ ಬಣ್ಣ ಹಚ್ಚಿರೋ ನಿರ್ದೇಶಕ ಲವ, ಪತ್ರಗಳನ್ನು ಹೆಸರುಗಳನ್ನು ಮಾತ್ರ ಸೈಲೆಂಟ್ ಆಗಿ ಚೇಂಜ್ ಮಾಡಿದ್ದಾರೆ. ಚಿತ್ರದುರ್ಗದ ಬದಲಿಗೆ ಹಾಸನ, ರೇಣುಕಾಸ್ವಾಮಿ ಬದಲು ಶಿವಸ್ವಾಮಿ, ಪವಿತ್ರಾ ಗೌಡ ಜಾಗದಲ್ಲಿ ಶೀಲಾ ಗೌಡ, ಹಾಗೂ ಸ್ವತಃ ಡಿಬಾಸ್‌ಗೆ ಬಾಸ್ ಅಂತ ನಾಮಕರಣ ಮಾಡಲಾಗಿದೆ. ನಟ ದರ್ಶನ್ ಜೈಲಿಗೆ ಹೋದ ಮೇಲಷ್ಟೇ ರೋಚಕ ಕಥೆ ಶುರುವಾಗಲಿದ್ದು, ನಂತ್ರ ಜೈಲಿನೊಳಗೆ ಮತ್ತು ಆಚೆಗೆ ಏನೆಲ್ಲಾ ರಂಪಾಟ ನಡೆಯುತ್ತೆ ಅನ್ನೋದನ್ನ ಬಿಗ್‌ಸ್ಕ್ರೀನ್ ಮೇಲೆಯೇ ನೋಡಬೇಕು.

ಇನ್ನು ಸಿನಿಮಾ ವೀಕ್ಷಿಸಿದ ಮುಂಗಾರು ಮಳೆ ಖ್ಯಾತಿಯ ಹಿರಿಯ ನಿರ್ಮಾಪಕ ಇ. ಕೃಷ್ಣಪ್ಪ, ಸಿನಿಮಾದ ಕಾನ್ಸೆಪ್ಟ್ ಹಾಗೂ ಕಲಾವಿದರ ಅಭಿನಯ ಅದ್ಭುತವಾಗಿದೆ. ದರ್ಶನ್ ಯಾವುದೇ ತಪ್ಪು ಮಾಡಿಲ್ಲ ಅನ್ನೋದನ್ನ ಹೈಲೈಟ್ ಮಾಡಿರೋದು ವಿಶೇಷ ಎಂದು ತಾರಿಫ್ ಮಾಡಿದ್ದಾರೆ.

ಆಗಸ್ಟ್ 7ರಂದು ಅದ್ಧೂರಿಯಾಗಿ ಗ್ರ್ಯಾಂಡ್ ರಿಲೀಸ್ ಆಗಿರುವ ಈ ಕ್ರೈಮ್ ಥ್ರಿಲ್ಲರ್ ಧಮಾಕಾ, ಸದ್ಯ ಬೆಂಗಳೂರು, ಮೈಸೂರು, ಮಂಡ್ಯ, ಹಾಸನ, ಧಾರವಾಡ, ಬೆಳಗಾವಿ, ಗುಲ್ಬರ್ಗ, ರಾಯಚೂರು, ದಾವಣಗೆರೆ ಹಾಗೂ ಶಿವಮೊಗ್ಗ ಸೇರಿದಂತೆ ಕರ್ನಾಟಕದಾದ್ಯಂತ ಕಲೆಕ್ಷನ್ ರಿಂಗ್ ಟೋನ್ ಬಾರಿಸುತ್ತಿದೆ. ಸಿರಿ ಪ್ರೊಡಕ್ಷನ್ ಬ್ಯಾನರ್‌ನಲ್ಲಿ ಮೂಡಿಬಂದಿರೋ ಈ ಸಿನಿಮಾದಲ್ಲಿ ನಟ ತನುಷ್ ಶಿವಣ್ಣ ನಾಯಕನಾಗಿ ಅಬ್ಬರಿಸಿದ್ದು, ನಟಿ ವಂದಿತಾ ಗೌಡ ಮತ್ತು ಪಾಯಲ್ ಚೆಂಗಪ್ಪ ಸಾಥ್ ನೀಡಿದ್ದಾರೆ. ಡೇವಿ ಸುರೇಶ್ ಅವರ ಮಾಸ್ ಬ್ಯಾಕ್‌ಗ್ರೌಂಡ್ ಮ್ಯೂಸಿಕ್ ಸಸ್ಪೆನ್ಸ್ ರೇಂಜ್ ಅನ್ನ ಬೇರೆ ಹಂತಕ್ಕೆ ಕೊಂಡೊಯ್ದಿದೆ.

​ಡಿಬಾಸ್ ಅಭಿಮಾನಿಗಳಿಗೂ ಇಷ್ಟವಾಗುವಂತಹ ಮಾಸ್ ಎಲಿಮೆಂಟ್ಸ್ ಈ ಚಿತ್ರದಲ್ಲಿದ್ದು ಥಿಯೇಟರ್‌ಗಳಲ್ಲಿ ಶಿಳ್ಳೆ, ಚಪ್ಪಾಳೆ, ಜೈಕಾರಗಳ ಜೊತೆ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಒಟ್ಟಿನಲ್ಲಿ, ವಿವಾದಗಳ ನಡುವೆಯೂ ಬಾಕ್ಸ್ ಆಫೀಸ್‌ನಲ್ಲಿ ಗಟ್ಟಿಯಾಗಿ ನಿಂತಿರೋ ಬಾಸ್, ಒಂದೊಳ್ಳೆ ಮೈನವಿರೇಳಿಸುವ ಸಸ್ಪೆನ್ಸ್ ಕ್ರೈಮ್ ಥ್ರಿಲ್ಲರ್ ಆಗಿ ಪ್ರೇಕ್ಷಕರ ಮನಸ್ಸು ಗೆಲ್ಲುವಲ್ಲಿ ನೂರಕ್ಕೆ ನೂರು ಯಶಸ್ವಿಯಾಗಿದೆ.

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್

Exit mobile version