ಸ್ಯಾಂಡಲ್‌ವುಡ್‌ನಲ್ಲಿ ಬಿರುಗಾಳಿ ಎಬ್ಬಿಸಿದ್ದ ‘ಬಾಸ್’ ಸಿನಿಮಾದ ಹೈವೋಲ್ಟೇಜ್ ಕಂಟ್ರವರ್ಸಿಗೆ ಈಗ ಸಿಕ್ಕಿದೆ ಬಿಗ್ ಟ್ವಿಸ್ಟ್. ಸೆನ್ಸಾರ್ ಅಂಗಳಕ್ಕೆ ಹೋಗುವ ಮುನ್ನವೇ ಬಾಸ್’ ತಂಡಕ್ಕೆ ಈಗ ಕೋರ್ಟ್‌ನಿಂದ ಬಿಗ್ ರಿಲೀಫ್ ಸಿಕ್ಕಿದೆ. ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಹಾಕಿದ್ದ ತಡೆಯಾಜ್ಞೆ ತಂತ್ರ ಉಲ್ಟಾ ಹೊಡೆದಿದ್ದು, ಸಿನಿಮಾ ರಿಲೀಸ್‌ಗೆ ಕೋರ್ಟ್ ಗ್ರೀನ್ ಸಿಗ್ನಲ್ ಕೊಟ್ಟಿದೆ. ಅಷ್ಟಕ್ಕೂ ವಿಜಯಲಕ್ಷ್ಮಿ ಅವರು ಈ ಚಿತ್ರದ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದಾದ್ರೂ ಯಾಕೆ? ಚಿತ್ರದ ಟೀಸರ್ ನೋಡಿ ಗಾಂಧಿನಗರದ ಮಂದಿ ಬೆಚ್ಚಿಬಿದ್ದಿರೋದು ಯಾಕೆ..? ಕಂಪ್ಲೀಟ್ ಇನ್‌ಸೈಡ್ ಸ್ಟೋರಿ ಇಲ್ಲಿದೆ ನೋಡಿ.
- ಬಾಸ್ ಸಿನಿಮಾಗೆ ಕೋರ್ಟ್ ಗ್ರೀನ್ ಸಿಗ್ನಲ್..ತಡೆಯಾಜ್ಞೆ ರದ್ದು..!
- ದರ್ಶನ್-ವಿಜಯಲಕ್ಷ್ಮಿ ಸಲ್ಲಿಸಿದ್ದ ಅರ್ಜಿಗೆ ಹಿನ್ನಡೆ..!
- ದರ್ಶನ್ ರಿಯಲ್ ಲೈಫ್ ಕೇಸ್ ತೆರೆ ಮೇಲೆನಾ..?
- ಶೆಡ್, ಲಾರಿ, ರಕ್ತದ ಕಲೆ..ಬಾಸ್ ಚಿತ್ರದಲ್ಲಿ ಡಿಬಾಸ್ ಕೇಸ್ ನೆರಳು..?
ರಿಯಲ್ ಲೈಫ್ ಕಾಂಟ್ರವರ್ಸಿಗಳ ನಡುವೆಯೇ ಸ್ಯಾಂಡಲ್‌ವುಡ್‌ನ ಬಾಸ್ ಚಿತ್ರತಂಡಕ್ಕೆ ಈಗ ದೊಡ್ಡ ಜಯ ಸಿಕ್ಕಿದೆ. ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣ ಹಾಗೂ ನಟ ದರ್ಶನ್ ವೈಯಕ್ತಿಕ ಜೀವನದ ಪಾತ್ರಗಳನ್ನು ಈ ಚಿತ್ರ ಹೋಲುತ್ತಿದೆ, ಇದರಿಂದ ವ್ಯಕ್ತಿಗಳ ಮಾನಹಾನಿಯಾಗುತ್ತಿದೆ ಎಂದು ಆರೋಪಿಸಿ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಚಿತ್ರದ ಬಿಡುಗಡೆಗೆ ತಡೆಯಾಜ್ಞೆ ತಂದಿದ್ದರು. ಆದರೆ, ಈ ವಾದ-ಪ್ರತಿವಾದಗಳನ್ನು ಆಲಿಸಿದ ನಗರ ಸಿವಿಲ್ ನ್ಯಾಯಾಲಯ, ಈಗ ಚಿತ್ರದ ಮೇಲಿದ್ದ ತಾತ್ಕಾಲಿಕ ತಡೆಯಾಜ್ಞೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಿದೆ. ಹಿರಿಯ ವಕೀಲ ವಿವೇಕ್ ಸುಬ್ಬಾರೆಡ್ಡಿ ಅವರ ಬಲವಾದ ಹಾಗೂ ತಾರ್ಕಿಕ ವಾದದ ಹಿನ್ನೆಲೆಯಲ್ಲಿ ಕೋರ್ಟ್ ಚಿತ್ರದ ಬಿಡುಗಡೆಗೆ ಸಮ್ಮತಿ ನೀಡಿದ್ದು, ಕೋಟ್ಯಂತರ ರೂಪಾಯಿ ಬಂಡವಾಳ ಹೂಡಿ ಆತಂಕದಲ್ಲಿದ್ದ ನಟ ತನುಶ್ ಶಿವಣ್ಣ ಹಾಗೂ ನಿರ್ದೇಶಕ ಲವ ಟೀಮ್ ಕೊನೆಗೂ ನಿಟ್ಟುಸಿರು ಬಿಡುವಂತಾಗಿದೆ.
ಇದಕ್ಕೂ ಮುನ್ನ ಸುದ್ದಿಗೋಷ್ಠಿಯಲ್ಲಿ ತೀವ್ರ ಆಕ್ರೋಶ ಹೊರಹಾಕಿದ್ದ ತನುಶ್ ಶಿವಣ್ಣ, “ಯಾರೋ ಏನೋ ಹೇಳಿದ್ರು ಅಂತ ಸಿನಿಮಾ ನೋಡದೆಯೇ ಬ್ಲೈಂಡ್ ಆಗಿ ಕೋರ್ಟ್‌ನಿಂದ ಸ್ಟೇ ತರೋ ಕೆಲಸ ಮಾಡಬೇಡಿ, ನಾವು ಚಿತ್ರ ತೋರಿಸಲು ಸಿದ್ಧ” ಎಂದು ಸವಾಲ್ ಹಾಕಿದ್ದರು. ಅಲ್ಲದೆ “ದರ್ಶನ್ ಅವರ ಮೇಲೆ ನಮಗೆ ಅಪಾರ ಗೌರವ ಇದೆ, ಇದು ಸಂಪೂರ್ಣ ಕಾಲ್ಪನಿಕ ಕಥೆ” ಎಂದು ಸ್ಪಷ್ಟಪಡಿಸಿದ್ದರು. ಕೋರ್ಟ್‌ನಲ್ಲಿ ತಡೆಯಾಜ್ಞೆ ನುಚ್ಚುನೂರಾಗುತ್ತಿದ್ದಂತೆ ಚಿತ್ರತಂಡದ ವಾದಕ್ಕೆ ಬಲ ಬಂದಂತಾಗಿದೆ. ಕೋಟಿ ಕೋಟಿ ಬಂಡವಾಳ ಹಾಕಿ, ಸೆನ್ಸಾರ್ ಮಂಡಳಿಯ ಮುನ್ನವೇ ಲೀಗಲ್ ನೋಟಿಸ್‌ಗಳ ಸುರಿಮಳೆಯನ್ನೇ ಎದುರಿಸಿದ್ದ ಚಿತ್ರತಂಡ, ಕೇವಿಯಟ್ ಅರ್ಜಿಯ ಮೂಲಕ ಮೊದಲೇ ಸಜ್ಜಾಗಿದ್ದರಿಂದ ಕಾನೂನು ಅಡೆತಡೆಗಳನ್ನೆಲ್ಲಾ ಧೂಳೀಪಟ ಮಾಡಿ ವಿಜಯಶಾಲಿಯಾಗಿ ಹೊರಹೊಮ್ಮಿದೆ.
ಕೋರ್ಟ್‌ನಲ್ಲಿ ಸಿನಿಮಾ ರಿಲೀಸ್ ಗೆ ರಿಲೀಫ್ ಸಿಗ್ತಿದ್ದಂತೆ ಚಿತ್ರದ ಟೀಸರ್ ಮತ್ತೊಮ್ಮೆ ಸೋಷಿಯಲ್ ಮೀಡಿಯಾದಲ್ಲಿ ಬೆಂಕಿ ಹಚ್ಚಿದೆ. ಟೀಸರ್‌ನಲ್ಲಿ ತೋರಿಸಲಾಗಿರುವ ಶೆಡ್, ಲಾರಿ, ರಕ್ತದ ಕಲೆಗಳು ಹಾಗೂ ಅನಾಥ ಶವದ ದೃಶ್ಯಗಳು ಡಿಬಾಸ್ ಪ್ರಕರಣವನ್ನೇ ಕಣ್ಣಿಗೆ ಕಟ್ಟುವಂತೆ ಬಿಂಬಿಸುತ್ತಿವೆ ಎಂಬ ಚರ್ಚೆ ಗಾಂಧಿನಗರದಲ್ಲಿ ಜೋರಾಗಿದೆ. ಅಷ್ಟೇ ಅಲ್ಲದೆ, ಚಿತ್ರದಲ್ಲಿ ಪವಿತ್ರಾ ಗೌಡ ಪಾತ್ರಕ್ಕೆ ಶೀಲಾ ಗೌಡ, ವಿಜಯಲಕ್ಷ್ಮಿ ಪಾತ್ರಕ್ಕೆ ಲಕ್ಷ್ಮಿ ಮತ್ತು ರೇಣುಕಾಸ್ವಾಮಿ ಪಾತ್ರಕ್ಕೆ ಶಿವಸ್ವಾಮಿ ಎಂದು ಮರುನಾಮಕರಣ ಮಾಡಿ ನೈಜ ಘಟನೆಯನ್ನೇ ತೆರೆಮೇಲೆ ತರಲಾಗುತ್ತಿದೆ ಎಂಬ ಗಾಸಿಪ್‌ಗಳು ಗಾಂಧಿನಗರದ ಗಲ್ಲಿ ಗಲ್ಲಿಯಲ್ಲೂ ಹಬ್ಬಿವೆ. ಸದ್ಯಕ್ಕೆ ಕಾನೂನು ಕಂಟಕದಿಂದ ಪಾರಾಗಿ ಬೆಳ್ಳಿತೆರೆಗೆ ಅಪ್ಪಳಿಸಲು ರೆಡಿಯಾಗುತ್ತಿರುವ ಬಾಸ್, ಬಾಕ್ಸ್ ಆಫೀಸ್‌ನಲ್ಲಿ ಹೊಸ ಸಂಚಲನ ಸೃಷ್ಟಿಸುವುದು ಗ್ಯಾರಂಟಿ ಎನ್ನಲಾಗ್ತಿದೆ.
