ಬೆಂಗಳೂರು, ಜೂನ್ 8: ಕರ್ನಾಟಕದಲ್ಲಿ ನೈಋತ್ಯ ಮುಂಗಾರು (Monsoon 2026) ಚುರುಕುಗೊಂಡಿದೆ. ಮುಂದಿನ ಆರು ದಿನಗಳ ಕಾಲ ರಾಜ್ಯದಾದ್ಯಂತ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ಕರಾವಳಿ ಜಿಲ್ಲೆಗಳು ಮತ್ತು ದಕ್ಷಿಣ ಒಳನಾಡಿನ ಕೆಲವು ಭಾಗಗಳಲ್ಲಿ ‘ ಭಾರೀ ಮಳೆ’ ಯಾಗುವ ಸಾಧ್ಯತೆಯಿದ್ದು, ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.
ಎಷ್ಟು ದಿನಗಳ ಕಾಲ ಮಳೆ?
ಇಂದಿನಿಂದ ಅಂದರೆ ಜೂನ್ 08 ರಿಂದ ಜೂನ್ 13 ರವರೆಗೆ ರಾಜ್ಯದ ಹಲವೆಡೆ ಮಳೆಯಾಗುವ ಸಾಧ್ಯತೆಯಿದೆ. ಕರಾವಳಿ ಜಿಲ್ಲೆಗಳಲ್ಲಿ 8 ರಿಂದ 11 ರವರೆಗೆ, ದಕ್ಷಿಣ ಒಳನಾಡಿನಲ್ಲಿ 8 ರಿಂದ 10 ರವರೆಗೆ ಹಾಗೂ ಉತ್ತರ ಒಳನಾಡು ಜಿಲ್ಲೆಗಳಲ್ಲಿ ಜೂನ್ 8 ರಿಂದ 11 ರವರೆಗೆ ಭಾರೀ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಲಾಗಿದೆ.
#ಕರ್ನಾಟಕ ರಾಜ್ಯದ ಮುಂದಿನ 5 ದಿನಗಳ #ಮುಂಗಾರು ಮಳೆ #ಮುನ್ಸೂಚನೆ ನಕ್ಷೆಗಳು, ಜಿಲ್ಲಾವಾರು ಎಚ್ಚರಿಕೆಗಳೊಂದಿಗೆ. #KSNDMC #ಎಚ್ಚರಿಕೆವಹಿಸಿ
Next 5 days #SouthwestMonsoon #Rainfall #forecast maps for #Karnataka state with district-wise warnings. Source: @Indiametdept @KarnatakaVarthe #KarnataKaRains pic.twitter.com/ezYihwMMBi— Karnataka State Natural Disaster Monitoring Centre (@KarnatakaSNDMC) June 8, 2026
ಕರಾವಳಿಗೆ ರೆಡ್ ಅಲರ್ಟ್
ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಜೂನ್ 8 ಮತ್ತು 9 ರಂದು ಅತ್ಯಂತ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಗಂಟೆಗೆ 30-40 ಕಿ.ಮೀ ವೇಗದಲ್ಲಿ ಬಲವಾದ ಗಾಳಿ ಬೀಸುವ ಸಾಧ್ಯತೆಯಿದೆ. ಈ ಜಿಲ್ಲೆಗಳಲ್ಲಿ ಒಂದು ಅಥವಾ ಎರಡು ಸ್ಥಳಗಳಲ್ಲಿ 204.5 ಮಿ.ಮೀ ಗಿಂತ ಹೆಚ್ಚು ಮಳೆಯಾಗುವ ಸಾಧ್ಯತೆಯಿದ್ದು, IMD ಯಿಂದ ರೆಡ್ ಅಲರ್ಟ್ ನೀಡಲಾಗಿದೆ. ಮೀನುಗಾರರು ಮತ್ತು ಸಮುದ್ರ ತೀರದ ನಿವಾಸಿಗಳು ಜಾಗರೂಕರಾಗಿರಲು ಸೂಚಿಸಲಾಗಿದೆ.
ದಕ್ಷಿಣ ಒಳನಾಡಿನಲ್ಲಿ ಆರೆಂಜ್ ಅಲರ್ಟ್
ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಅತಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಹಾಸನ, ಕೊಡಗು, ಮೈಸೂರು ಮತ್ತು ಬಳ್ಳಾರಿ ಜಿಲ್ಲೆಗಳಲ್ಲೂ ಜೂನ್ 14 ರವರೆಗೆ ಉತ್ತಮ ಮಳೆಯಾಗಲಿದೆ. ಜೂನ್ 8 ರಿಂದ 10 ರವರೆಗೆ ದಕ್ಷಿಣ ಒಳನಾಡಿನ ಒಂದು ಅಥವಾ ಎರಡು ಸ್ಥಳಗಳಲ್ಲಿ 64.5 ಮಿ.ಮೀ ನಿಂದ 204.4 ಮಿ.ಮೀ ಮಳೆಯಾಗುವ ಸಾಧ್ಯತೆಯಿದ್ದು, ಆರೆಂಜ್ ಅಲರ್ಟ್ ನೀಡಲಾಗಿದೆ.
ಉತ್ತರ ಒಳನಾಡಿನಲ್ಲಿ ಮುನ್ಸೂಚನೆ
ಬೆಳಗಾವಿ, ಧಾರವಾಡ ಮತ್ತು ಗದಗ ಜಿಲ್ಲೆಗಳಲ್ಲಿ ಜೂನ್ 8 ಮತ್ತು 9 ರಂದು ಬಿರುಗಾಳಿ ಸಹಿತ ಭಾರೀ ಮಳೆಯಾಗಲಿದೆ. ಹಾವೇರಿ, ಬಾಗಲಕೋಟೆ, ವಿಜಯಪುರ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ. ಉತ್ತರ ಒಳನಾಡಿನಲ್ಲಿ ಜೂನ್ 8 ರಿಂದ 11 ರವರೆಗೆ ಒಂದು ಅಥವಾ ಎರಡು ಸ್ಥಳಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ.
ಬೆಂಗಳೂರು ಹವಾಮಾನ ವರದಿ
ರಾಜಧಾನಿ ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 48 ಗಂಟೆಗಳ ಕಾಲ ಸಾಮಾನ್ಯವಾಗಿ ಮೋಡಕವಿದ ವಾತಾವರಣವಿರಲಿದೆ. ನಗರದ ಕೆಲವು ಭಾಗಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ನಿರೀಕ್ಷೆಯಿದೆ. ಗಂಟೆಗೆ 30-40 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸಲಿದೆ.
ಸಾರ್ವಜನಿಕರಿಗೆ ಸಲಹೆ
ಹವಾಮಾನ ಇಲಾಖೆಯು ಪ್ರವಾಹ ಸಾಧ್ಯತೆ ಇರುವ ತಗ್ಗು ಪ್ರದೇಶಗಳ ನಿವಾಸಿಗಳು, ರೈತರು ಮತ್ತು ಮೀನುಗಾರರು ತುರ್ತು ಮುನ್ನೆಚ್ಚರಿಕೆ ವಹಿಸಬೇಕೆಂದು ಸಲಹೆ ನೀಡಿದೆ.
