ಬಾಲಿವುಡ್ ಮಹಾನಟ ಅಮಿತಾಭ್ ಬಚ್ಚನ್ ಅಳಿಯ ಮತ್ತು ಎಸ್ಕಾರ್ಟ್ಸ್ ಕುಬೋಟಾ ಕಂಪನಿಯ ಸಿಇಒ ನಿಖಿಲ್ ನಂದಾ ವಿರುದ್ಧ ಉತ್ತರ ಪ್ರದೇಶದ ಬದೌನ್ ಜಿಲ್ಲೆಯ ದಾತಾಗಂಜ್ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದೊಂದಿಗೆ ಎಫ್ಐಆರ್ ದಾಖಲಾಗಿದೆ . ನಿಖಿಲ್ ನಂದಾ ಸೇರಿದಂತೆ 8 ಜನರ ವಿರುದ್ಧ ನ್ಯಾಯಾಲಯದ ಆದೇಶದ ಮೇರೆಗೆ ಈ ಪ್ರಕರಣ ದಾಖಲಾಗಿದೆ. ಈ ಕೇಸಿನ ಹಿನ್ನೆಲೆಯಲ್ಲಿ, ಟ್ರ್ಯಾಕ್ಟರ್ ಏಜೆನ್ಸಿ ಮಾಲೀಕ ಜಿತೇಂದ್ರ ಸಿಂಗ್ ನವೆಂಬರ್ 22, 2024ರಂದು ಆತ್ಮಹತ್ಯೆ ಮಾಡಿಕೊಂಡಿದ್ದು, ಅವರ ಸೋದರ ಜ್ಞಾನೇಂದ್ರ ಸಿಂಗ್ ಪೊಲೀಸರಿಗೆ ದೂರು ನೀಡಿದ್ದಾರೆ.
ಜಿತೇಂದ್ರ ಸಿಂಗ್ ದಾತಾ ಗಂಜ್ ನಲ್ಲಿ ಜೈ ಕಿಸಾನ್ ಟ್ರೇಡರ್ಸ್ ಟ್ರ್ಯಾಕ್ಟರ್ ಏಜೆನ್ಸಿಯನ್ನು ನಡೆಸುತ್ತಿದ್ದರು. ಅವರ ಸಹಭಾಗಿ ಲಲ್ಲಾ ಬಾಬು ಕುಟುಂಬ ವಿವಾದದಿಂದ ಜೈಲಿಗೆ ಹೋಗಿದ್ದ ನಂತರ, ಜಿತೇಂದ್ರ ಒಬ್ಬರೇ ಏಜೆನ್ಸಿಯ ಜವಾಬ್ದಾರಿ ಹೊತ್ತಿದ್ದರು.ಎಸ್ಕಾರ್ಟ್ಸ್ ಕುಬೋಟಾ ಕಂಪನಿಯ ಸ್ಥಳೀಯ ಅಧಿಕಾರಿಗಳಾದ ಆಶಿಷ್ ಬಲಿಯಾನ್ (ಏರಿಯಾ ಮ್ಯಾನೇಜರ್), ಸುಮಿತ್ ರಾಘವ್ (ಸೇಲ್ಸ್ ಮ್ಯಾನೇಜರ್), ದಿನೇಶ್ ಪಂತ್ (ಯುಪಿ ಹೆಡ್), ಮತ್ತು ಇತರರು ಜಿತೇಂದ್ರರ ಮೇಲೆ ಮಾರಾಟ ಹೆಚ್ಚಿಸಲು ಒತ್ತಡ ಹೇರಿದ್ದರಂತೆ. ಅವರು ಏಜೆನ್ಸಿ ಲೈಸೆನ್ಸ್ ರದ್ದು ಮಾಡುವುದು ಮತ್ತು ಆಸ್ತಿಯನ್ನು ಮುಟ್ಟುಗೋಲು ಹಾಕುವ ಬೆದರಿಕೆ ನೀಡಿದ್ದರು . ಈ ಮಾನಸಿಕ ಹಿಂಸೆ ತಾಳಲಾರದೆ ಜಿತೇಂದ್ರ ನವೆಂಬರ್ 21ರಂದು ಕೊನೆಯ ಬಾರಿಗೆ ಒತ್ತಡಕ್ಕೊಳಗಾದ ನಂತರ, ಮರುದಿನ ಆತ್ಮಹತ್ಯೆ ಮಾಡಿಕೊಂಡರು.
ಜಿತೇಂದ್ರ ಕುಟುಂಬವು ಆರಂಭದಲ್ಲಿ ಪೊಲೀಸರಿಗೆ ದೂರು ನೀಡಿದರೂ, ನ್ಯಾಯಾಲಯದ ಹಸ್ತಕ್ಷೇಪದ ನಂತರ ಮಾತ್ರ ಪೊಲೀಸರು ಕ್ರಮ ತೆಗೆದುಕೊಂಡಿದ್ದಾರೆ . ಜಿತೇಂದ್ರರ ತಂದೆ ಶಿವ್ ಸಿಂಗ್, ನಿಖಿಲ್ ನಂದಾ ಯಾರೆಂದು ನನಗೆ ಗೊತ್ತಿಲ್ಲ, ಆದರೆ ಕಂಪನಿಯವರೇ ನನ್ನ ಮಗನ ಮರಣಕ್ಕೆ ಕಾರಣ ಎಂದು ಹೇಳಿದ್ದಾರೆ . ಪ್ರಸ್ತುತ ದಾತಾಗಂಜ್ ಪೊಲೀಸ್ ಠಾಣೆಯ ಇನ್ಚಾರ್ಜ್ ಗೌರವ್ ವಿಷ್ಣೋಯ್ ತನಿಖೆ ಪ್ರಗತಿಯಲ್ಲಿದೆ ಎಂದು ದೃಢಪಡಿಸಿದ್ದಾರೆ . ನಿಖಿಲ್ ನಂದಾ, ರಾಜ್ ಕಪೂರ್ ಮೊಮ್ಮಗಳು ರಿತು ನಂದಾ ಮಗ ಮತ್ತು ಶ್ವೇತಾ ಬಚ್ಚನ್ ಪತಿ, ಇದುವರೆಗೆ ಈ ಪ್ರಕರಣದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ .