ಬಾಲಿವುಡ್ ಹೀ-ಮ್ಯಾನ್ ಧರ್ಮೇಂದ್ರ ವಿಧಿವಶ: ಹಲವು ಗಣ್ಯರಿಂದ ಸಂತಾಪ

Untitled design (89)

ಬಾಲಿವುಡ್‌ ಚಿತ್ರರಂಗದ ಒಬ್ಬ ದಿಗ್ಗಜ, ‘ಹೀ-ಮ್ಯಾನ್’ ಎಂದೇ ಪ್ರಸಿದ್ಧಿ ಪಡೆದಿದ್ದ ನಟ ಧರ್ಮೇಂದ್ರ ವಯೋಸಹಜ ಖಾಯಿಲೆಯಿಂದ  ವಿಧಿವಶರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ತಮ್ಮ 89ರ ವರ್ಷದಲ್ಲಿ ಅಸುನೀಗಿದ್ದಾರೆ. ಇದಕ್ಕೆ ಚಿತ್ರರಂಗದ ಹಲವಾರು ನಟ ನಟಿಯರು ಹಾಗೂ ಇತರೆ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಧರ್ಮೇಂದ್ರ ಅವರು 1960ರಲ್ಲಿ ‘ದಿಲ್ ಭಿ ತೇರಾ ಹಮ್ ಭಿ ತೇರೆ’ ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದರು. ಅನಂತರ ಅವರು ‘ಅನ್ಪದ್’, ‘ಬಂದಿನಿ’, ‘ಅನುಪಮಾ’ ಮತ್ತು ‘ಆಯಾ ಸಾವನ್ ಝೂಮ್ ಕೆ’ ನಂತಹ ಚಿತ್ರಗಳಲ್ಲಿ ಅಭಿನಯಿಸಿ ಪ್ರೇಕ್ಷಕರ ಹೃದಯಗಳಲ್ಲಿ ಸ್ಥಾನ ಪಡೆದುಕೊಂಡರು.

ಆದರೆ, ‘ಶೋಲೆ’, ‘ಧರಮ್ ವೀರ್’, ‘ಚುಪ್ಕೆ ಚುಪ್ಕೆ’, ‘ಮೇರಾ ಗಾಂವ್ ಮೇರಾ ದೇಶ್’ ಮತ್ತು ‘ಡ್ರೀಮ್ ಗರ್ಲ್’ ನಂತಹ ಅನೇಕ ಸೂಪರ್‌ಹಿಟ್ ಚಿತ್ರಗಳ ಮೂಲಕ ಅವರು ಬಾಲಿವುಡ್‌ನ ಅತ್ಯಂತ ನೆಚ್ಚಿನ ನಟರಲ್ಲಿ ಒಬ್ಬರಾದರು. ‘ಶೋಲೆ’ ಚಿತ್ರದಲ್ಲಿ ವೀರನಾಥನ ಪಾತ್ರವು ಭಾರತೀಯ ಸಿನಿಮಾ ಇತಿಹಾಸದಲ್ಲೇ ಅತ್ಯುತ್ತಮ ಪಾತ್ರಗಳಲ್ಲಿ ಒಂದಾಗಿ ನಿಲ್ಲುವುದರ ಜೊತೆಗೆ, ಅಮಿತಾಭ್ ಬಚ್ಚನ್ ಅವರೊಂದಿಗಿನ ಅವರ ಜೋಡಿಯನ್ನು ಚಿತ್ರ ಪ್ರೇಮಿಗಲು ಹೆಚ್ಚು ಇಷ್ಟ ಪಟ್ಟರು.

ತಮ್ಮ ವೃತ್ತಿಜೀವನದುದ್ದಕ್ಕೂ ಸಕ್ರಿಯರಾಗಿದ್ದ ಧರ್ಮೇಂದ್ರ ಅವರು ಇತ್ತೀಚೆಗೆ ‘ತೇರಿ ಬಾತೋನ್ ಮೇ ಐಸಾ ಉಲ್ಜಾ ಜಿಯಾ’ ಚಿತ್ರದಲ್ಲಿ ಶಾಹಿದ್ ಕಪೂರ್ ಮತ್ತು ಕೃತಿ ಸನೋನ್ ಅವರೊಂದಿಗೆ ಅಭಿನಯಿಸಿದ್ದರು. ಈ ಚಿತ್ರವು ಅವರ ಕೊನೆಯ ಚಿತ್ರವಾಗಿ ಉಳಿಯಿತು. 300 ಕ್ಕೂ ಹೆಚ್ಚು ಚಿತ್ರಗಳಲ್ಲಿ ಕಾಣಿಸಿಕೊಂಡು, ಐದು ದಶಕಗಳಿಗೂ ಹೆಚ್ಚು ಕಾಲ ಪ್ರೇಕ್ಷಕರನ್ನು ರಂಜಿಸಿದ ಧರ್ಮೇಂದ್ರ ಅವರ ಪಾತ್ರ ಅಪಾರ.

ಅವರ ಅಪಾರ ಕೊಡುಗೆಯನ್ನ ಗುರುತಿಸಿ, ಭಾರತ ಸರಕಾರವು 2012ರಲ್ಲಿ ಅವರಿಗೆ ಪದ್ಮಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಿತು. ವೈಯಕ್ತಿಕ ಜೀವನದಲ್ಲಿ, ಅವರು ತಮ್ಮ ಮೊದಲ ಪತ್ನಿ ಪ್ರಕಾಶ್ ಕೌರ್ ಅವರ ನಂತರ, ನಟಿ ಹೇಮಾ ಮಾಲಿನಿ ಅವರನ್ನು ವಿವಾಹವಾದರು. ಅವರು ತಮ್ಮ ಪತ್ನಿ ಹೇಮಾ ಮಾಲಿನಿ, ಪುತ್ರರು ಬಾಬಿ ಡಿಯೋಲ್ ಮತ್ತು ಸನ್ನಿ ಡಿಯೋಲ್, ಪುತ್ರಿಯರು ಇಶಾ ಡಿಯೋಲ್ ಮತ್ತು ಅಹಾನಾ ಡಿಯೋಲ್, ಮೊಮ್ಮಕ್ಕಳನ್ನು ಅಗಲಿದ್ದಾರೆ.

ಧರ್ಮೇಂದ್ರ ಅವರ ನಿಧನದ ಸುದ್ದಿಯು ಭಾರತೀಯ ಚಿತ್ರರಂಗದಲ್ಲಿ ಅಪಾರ ಸಂತಾಪವನ್ನು ವ್ಯಕ್ತವಾಗಿದೆ ಹಾಗೂ ಬಾಲಿವುಡ್‌ ಚಿತ್ರರಂಗಕ್ಕೆ ಅಪಾರ ನಷ್ಟವಾಗಿದೆ. ಧರ್ಮೇಂದ್ರ ಅವರ ಪತ್ನಿ ಹಾಗೂ ಸಂಸದೆ ಹೇಮಾ ಮಾಲಿನಿ, ಮಕ್ಕಳಾದ ಬಾಬಿ ಡಿಯೋಲ್, ಸನ್ನಿ ಡಿಯೋಲ್, ಇಶಾ ಡಿಯೋಲ್, ಅಹಾನಾ ಡಿಯೋಲ್ ಅವರ ಮೊಮ್ಮಕ್ಕಳು ಹಾಗೂ ಚಿತ್ರಪ್ರೇಮಿಗಳನ್ನು ಧರ್ಮೇಂದ್ರ ಅಗಲಿದ್ದಾರೆ.

 ಧರ್ಮೇಂದ್ರ ಅವರ ನಿಧನವು ಭಾರತೀಯ ಸಿನಿಮಾದ ಒಂದು ಸುವರ್ಣ ಯುಗದ ಅಂತ್ಯವನ್ನು ಸೂಚಿಸುತ್ತದೆ. ಅವರ ಅಭಿನಯ, ಅಣಕು ಮತ್ತು ಹೃದಯಸ್ಪರ್ಶಿ ಪಾತ್ರಗಳು ಚಿರಸ್ಮರಣೀಯವಾಗಿ ಉಳಿಯುವುದರ ಜೊತೆಗೆ, ಭವಿಷ್ಯದ ತಲೆಮಾರಿನ ನಟರು ಮತ್ತು ಪ್ರೇಕ್ಷಕರಿಗೆ ಪ್ರೇರಣೆಯಾಗಿ ಉಳಿಯುತ್ತದೆ. ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ನಾವೆಲ್ಲರೂ ಪ್ರಾರ್ಥಿಸೋಣ.

Exit mobile version