ಬಾಲಿವುಡ್‌‌ ದಂತಕಥೆ ‘ಧರ್ಮೇಂದ್ರ’ ಯುಗಾಂತ್ಯ..!!

ಹೇಮಾ ಮಾಲಿನಿ ಪ್ರೇಮ ಪಂಜರದಲ್ಲಿ ಹೀ-ಮ್ಯಾನ್

Untitled design 2025 11 24T154231.772

ಭಾರತೀಯ ಚಿತ್ರರಂಗವನ್ನು ಶ್ರೀಮಂತಗೊಳಿಸಿದ ಬಾಲಿವುಡ್ ದಂತಕಥೆ ಧರ್ಮೇಂದ್ರ ಇನ್ನು ನೆನಪು ಮಾತ್ರ. ಯೆಸ್.. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಹಿರಿಜೀವ ನಮ್ಮನ್ನ ಅಗಲಿದ್ದಾರೆ. ಬಾಲಿವುಡ್‌ನ ಹೀ-ಮ್ಯಾನ್ ಆಗಿ ಆರು ದಶಕಗಳ ಕಾಲ ಮಿಂಚಿದ್ರು ಲೆಜೆಂಡ್ ಧರ್ಮೇಂದ್ರ. ರೆಟ್ರೋ ಕಾಲದಿಂದ ಮೆಟ್ರೋವರಗೂ ಧರ್ಮೇಂದ್ರ ಅವ್ರ ಕಲಾ ಬದುಕು, ಕುಟುಂಬ, ಮದ್ವೆ, ರಾಜಕಾರಣ, ವಿವಾದಗಳ ಕುರಿತ ಕಂಪ್ಲೀಟ್ ಕಹಾನಿ ಇಲ್ಲಿದೆ.

ಶೋಲೆ ಚಿತ್ರದ ವೀರು.. ಬಾಲಿವುಡ್‌‌ನ ಲೆಜೆಂಡರಿ ಆ್ಯಕ್ಟರ್‌‌‌ ಧರ್ಮೇಂದ್ರ ಇನ್ನು ನೆನಪು ಮಾತ್ರ. ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು, ಉಸಿರಾಟದ ತೊಂದರೆಯಿಂದ ಎರಡು ವಾರದ ಹಿಂದೆ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿದ್ದರು. ನಂತ್ರ ಡಿಸ್ಚಾರ್ಜ್ ಕೂಡ ಆಗಿ ಮನೆ ಸೇರಿದ್ರು. ಮನೆಯಲ್ಲೇ ICU ಸೆಟಪ್ ಮಾಡಿಸಿ, ಚಿಕಿತ್ಸೆ ಪಡೆಯುತ್ತಿದ್ದ ಧರ್ಮೇಂದ್ರ, ಇಂದು ಚಿಕಿತ್ಸೆ ಫಲಕಾರಿ ಆಗದೆ ಇಹಲೋಕ ತ್ಯಜಿಸಿದ್ದಾರೆ. ಅವರ ಅಗಲಿಕೆಗೆ ಇಡೀ ಭಾರತ ಕಂಬನಿ ಮಿಡಿದಿದ್ದು, ಈ ಮೂಲಕ ಬಾಲಿವುಡ್‌‌ನ ಆ ಒಂದು ಗೋಲ್ಡನ್ ಎರಾ ಇಲ್ಲಿಗೆ ಮುಗಿದಂತಾಗಿದೆ.

ಯೆಸ್.. ಇಳಿವಯಸ್ಸಿನಲ್ಲಿ ಕೂಡ ಬಹಳ ಲವಲವಿಕೆಯಿಂದ, ಜೀವನೋತ್ಸಾಹ ಹೊಂದಿದ್ದ ವ್ಯಕ್ತಿತ್ವ ಅವರದ್ದು. ಅವ್ರ ಸಿನಿಮೋತ್ಸಾಹ ಅದೆಷ್ಟೋ ಮಂದಿ ಯಂಗ್‌ಸ್ಟರ್ಸ್‌ಗೆ ಸ್ಫೂರ್ತಿ ಆಗಿತ್ತು. 89ನೇ ವಯಸ್ಸಿನಲ್ಲಿ ವಿಶ್ರಾಂತಿಗೆ ಜಾರದೆ, ಇಕ್ಕಿಸ್ ಅನ್ನೋ ಸಿನಿಮಾದಲ್ಲಿ ನಟಿಸಿದ್ದಾರೆ. ಇದು ಕ್ರಿಸ್‌ಮಸ್ ವಿಶೇಷ ಡಿಸೆಂಬರ್ 25ಕ್ಕೆ ತೆರೆಗೆ ಬರ್ತಿದ್ದು, 1971ರ ಇಂಡೋ-ಪಾಕ್ ವಾರ್‌‌ನ ಬಯೋಪಿಕ್ ಆಗಿದೆ. ಈ ಇಕ್ಕಿಸ್ ಸಿನಿಮಾನೇ ಅವ್ರ ಕಟ್ಟಕಡೆಯ ಸಿನಿಮಾ ಆಗುತ್ತೆ ಅಂತ ಯಾರೂ ಊಹಿಸಿರಲಿಲ್ಲ.

ಮೊನ್ನೆಯೇ ಧರ್ಮೇಂದ್ರ ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆ ಖಾನ್, ಕಪೂರ್‌‌ಗಳಿಂದ ಹಿಡಿದು, ಬಾಲಿವುಡ್‌ನ ಬಹುತೇಕ ಎಲ್ಲಾ ಸ್ಟಾರ್‌‌ಗಳು ಆಸ್ಪತ್ರೆಗೆ ದೌಡಾಯಿಸಿದ್ರು. ಲೆಜೆಂಡ್ ಆ್ಯಕ್ಟರ್ ಕುಟುಂಬಕ್ಕೆ ಸ್ಥೈರ್ಯ ತುಂಬುವ ಕಾರ್ಯ ಮಾಡಿದ್ರು. ಸಾಕಷ್ಟು ಮಂದಿ ದೇವರಿಗೆ ಹರಕೆ ಹೊತ್ತರು, ಪ್ರಾರ್ಥಿಸಿದ್ರು. ಆದ್ರೆ ಅದ್ಯಾವುದೂ ಇಂದು ಫಲಿಸಲಿಲ್ಲ. ಕಾಲನ ಕರೆಗೆ ಓಗೊಟ್ಟು, ಚಿರನಿದ್ರೆಗೆ ಜಾರಿದೆ ಹಿರಿಜೀವ.

ಭಾರತೀಯ ಚಿತ್ರರಂಗದ ಸರ್ವಶ್ರೇಷ್ಟ ನಟರಲ್ಲಿ ಒಬ್ಬರಾದ ಧರ್ಮೇಂದ್ರ, 1960ರಲ್ಲಿ ಚಿತ್ರರಂಗಕ್ಕೆ ಬಂದವರು. ದಿಲ್ ಭಿ ತೇರಾ ಹಮ್ ಭಿ ತೇರೆ ಅನ್ನೋ ಚಿತ್ರದ ಮೂಲಕ ಕರಿಯರ್ ಆರಂಭಿಸಿದ್ರು. ನಂತರ ಅವರು ಹಿಂದಿರುಗಿ ನೋಡಿದ ನಿದರ್ಶನವೇ ಇಲ್ಲ. 70, 80ರ ದಶಕದಲ್ಲಿ ಧರ್ಮೇಂದ್ರ ಚಿತ್ರಗಳಿಗೆ ಎಲ್ಲಿಲ್ಲದ ಬೇಡಿಕೆ. ಬಾಲಿವುಡ್‌ನ ಮೋಸ್ಟ್ ಸ್ಟೈಲಿಶ್ ಆ್ಯಕ್ಟರ್ ಆಗಿದ್ದ ಧರ್ಮೇಂದ್ರ ಮಾಡಿದ ಪಾತ್ರಗಳು ಅಜರಾಮರ.

ಬಾಲಿವುಡ್‌‌ನಲ್ಲಿ ಅತಿಹೆಚ್ಚು ಹಿಟ್ಸ್ ನೀಡಿದ ಗರಿಮೆ ಧರ್ಮೇಂದ್ರ ಅವರಿಗಿದೆ. ಒಂದೇ ವರ್ಷದಲ್ಲಿ ಬರೋಬ್ಬರಿ 7ರಿಂದ 9 ಹಿಟ್ ಚಿತ್ರಗಳನ್ನ ನೀಡಿ, ಚಿತ್ರಪ್ರೇಮಿಗಳ ಮನದ ರಾಜನಾಗಿ ಮೆರೆದರು. ಆಯೀ ಮಿಲಾನ್ ಕಿ ಬೇಲಾ, ಫೂಲ್ ಔರ್ ಪತ್ಥರ್, ಆಯೇ ದಿನ ಬಾಹರ್ ಕೇ ಸಿನಿಮಾಗಳಿಂದ ಬಹುದೊಡ್ಡ ಸ್ಟಾರ್‌‌ಡಮ್ ಪಡೆದುಕೊಂಡರು.

90ರ ದಶಕದಲ್ಲಿ ಕ್ಯಾರೆಕ್ಟರ್ ರೋಲ್ಸ್ ಮಾಡೋಕೆ ಶುರುವಿಟ್ಟ ಧರ್ಮೇಂದ್ರ, ಈ ವರ್ಷ ಕೂಡ ಇಕ್ಕಿಸ್ ಚಿತ್ರದ ಶೂಟಿಂಗ್‌‌ನಲ್ಲಿ ಭಾಗಿಯಾಗಿದ್ರು ಅನ್ನೋದು ಇಂಟರೆಸ್ಟಿಂಗ್ ವಿಷಯ. ಅಂದಹಾಗೆ ಇವ್ರನ್ನ ಬಾಲಿವುಡ್‌ನ ಹೀ-ಮ್ಯಾನ್ ಅಂತ ಕರೆಯುತ್ತಾರೆ. ಶೋಲೆ ಸಿನಿಮಾದಿಂದ ಶುರುವಾದ ಹೇಮಾ ಮಾಲಿನಿ-ಧರ್ಮೇಂದ್ರ ಜೋಡಿಯ ಮೋಡಿ, ಅದಾದ ಬಳಿಕ ಬ್ಯಾಕ್ ಟು ಬ್ಯಾಕ್ ಹತ್ತಾರು ಚಿತ್ರಗಳಲ್ಲಿ ಅದು ಮುಂದುವರೆಯಿತು.

ಇಂಟರೆಸ್ಟಿಂಗ್ ವಿಷಯ ಏನಪ್ಪಾಂದ್ರೆ ಶೋಲೆ ಸಿನಿಮಾದಲ್ಲಿ ಧರ್ಮೇಂದ್ರ ಹಾಗೂ ಅಮಿತಾಬ್ ಬಚ್ಚನ್ ರೋಲ್‌ಗಳು ಅದಲು ಬದಲಾಗಿವೆಯಂತೆ. ಮೊದಲು ಡೈರೆಕ್ಟರ್ ಕಥೆ ಹೇಳುವಾಗ ಧರ್ಮೇಂದ್ರ ಪಾತ್ರಕ್ಕೆ ಅಮಿತಾಬ್ ಬಚ್ಚನ್, ಬಿಗ್ ಬಿ ರೋಲ್‌ಗೆ ಧರ್ಮೇಂದ್ರ ಫಿಕ್ಸ್ ಆಗಿದ್ರಂತೆ. ಯಾವಾಗ ಹೇಮಾ ಮಾಲಿನಿ ಚಿತ್ರಕ್ಕೆ ಎಂಟ್ರಿ ಕೊಟ್ರೋ, ಆಕೆಗಾಗಿಯೇ ತನ್ನ ಪಾತ್ರ ಬಿಗ್‌ಬಿಗೆ ನೀಡಿ, ಅಮಿತಾಬ್ ರೋಲ್‌ನ ತಾವು ಮಾಡಿದ್ರಂತೆ ಧರ್ಮೇಂದ್ರ.

ಅಷ್ಟರಲ್ಲಾಗಲೇ ಹೇಮಾ ಮಾಲಿನಿ ಪ್ರೇಮ ಪಂಜರದ ಕೈದಿ ಆಗಿಬಿಟ್ಟಿದ್ರು ಧರ್ಮೇಂದ್ರ. ಹಾಗಾಗಿಯೇ ಮಾವಿನ ಹಣ್ಣು ಕೀಳುವ ಸೀನ್‌‌ನಲ್ಲಿ ಆಕೆ ಜೊತೆ ರೊಮ್ಯಾನ್ಸ್ ಮಾಡೋಕೆ ಒಂದೇ ಸೀನ್‌‌ನ 20ಕ್ಕೂ ಅಧಿಕ ಟೇಕ್ಸ್ ತೆಗೆದುಕೊಂಡಿದ್ರಂತೆ ಧರ್ಮೇಂದ್ರ. ಅದನ್ನ ಖುದ್ದು ಅವರೇ ಒಂದು ಸಂದರ್ಶನದಲ್ಲಿ ಬಹಿರಂಗವಾಗಿ ಹೇಳಿಕೊಂಡಿದ್ರು ಕೂಡ. ಅಂದಹಾಗೆ ಧರ್ಮೇಂದ್ರ ಬರೀ ಸಿನಿಮಾಗಳಲ್ಲಷ್ಟೇ ಹೇಮಾ ಮಾಲಿನಿ ಜೊತೆ ರೊಮ್ಯಾನ್ಸ್ ಮಾಡಿ ಕೈಬಿಡಲಿಲ್ಲ. ಬಾಳ ಸಂಗಾತಿಯನ್ನಾಗಿಸಿಕೊಂಡು, ಸಹಜೀವನ ಕೂಡ ನಡೆಸಿದ್ರು.

ಲೆಜೆಂಡ್ ಧರ್ಮೇಂದ್ರ ಹಾಗೂ ಹೇಮಾ ಮಾಲಿನಿ ದಂಪತಿಗೆ ಇಬ್ಬರು ಮಕ್ಕಳು. ಬಾಲಿವುಡ್ ನಟಿ ಈಶಾ ಡಿಯೋಲ್ ಒಬ್ಬರಾದ್ರೆ, ಅಸಿಸ್ಟೆಂಟ್ ಡೈರೆಕ್ಟರ್ ಅಹಾನಾ ಡಿಯೋಲ್ ಮತ್ತೊಬ್ಬರು. ಅರೇ ಹಾಗಾದ್ರೆ ಸನ್ನಿ ಡಿಯೋಲ್ ಹಾಗೂ ಬಾಬಿ ಡಿಯೋಲ್ ಯಾರು ಅಂತ ಹುಬ್ಬೇರಿಸಬೇಡಿ. ಅವರು ಕೂಡ ಧರ್ಮೇಂದ್ರ ಮಕ್ಕಳೇ. ಹೌದು.. ಹೀ-ಮ್ಯಾನ್ ಬಿಟೌನ್‌ಗೆ ಎಂಟ್ರಿ ಕೊಡೋಕೆ ಮೊದಲೇ ಪ್ರಕಾಶ್ ಕೌರ್ ಅನ್ನೋರನ್ನ ಮದ್ವೆ ಆಗಿದ್ರು. ಸೋ.. ಮೊದಲ ಪತ್ನಿಗೆ ಇಬ್ಬರು ಹೆಣ್ಣು ಮಕ್ಕಳು ಹಾಗೂ ಇಬ್ಬರು ಗಂಡು ಮಕ್ಕಳು. ಅವ್ರೇ ಬಾಬಿ ಡಿಯೋಲ್, ಸನ್ನಿ ಡಿಯೋಲ್, ವಿಜೇತಾ ಹಾಗೂ ಅಜೀತಾ.

ಸನ್ನಿ ಡಿಯೋಲ್ ಹಾಗೂ ಬಾಬಿ ಡಿಯೋಲ್ ಬಗ್ಗೆ ವಿಶೇಷವಾಗಿ ಹೇಳುವ ಅವಶ್ಯಕತೆಯಿಲ್ಲ. ಯಾಕಂದ್ರೆ ಬಾರ್ಡರ್, ಅನಿಮಲ್ ಸಿನಿಮಾಗಳಿಂದ ಸದ್ಯ ಸಂಚಲನ ಮೂಡಿಸ್ತಿರೋ ಬಿಟೌನ್ ಆ್ಯಕ್ಟರ್ಸ್‌ ಇವರುಗಳು. ಇವರುಗಳಿಗೆ ಸದ್ಯ ವಿಶೇಷವಾದ ಫ್ಯಾನ್ ಬೇಸ್ ಇದೆ.

ಹೀಗೆ 1960ರಿಂದ 2025ರ ತನಕ ಸುಮಾರು 6ಕ್ಕೂ ಅಧಿಕ ದಶಕಗಳ ಕಾಲ, ಮುನ್ನೂರಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದಾರೆ ಧರ್ಮೇಂದ್ರ. ಖಾನ್, ಕಪೂರ್‌‌ಗಳೆಲ್ಲಾ ಇವರನ್ನ ಇಷ್ಟ ಪಡ್ತಿದ್ರು. ಅಂತಹ ಅಜಾತಶತ್ರುವಾಗಿ, ಹಿಂದಿ ಚಿತ್ರರಂಗವನ್ನು ಶ್ರೀಮಂತಗೊಳಿಸುತ್ತಾ, ಭಾರತೀಯ ಚಿತ್ರರಂಗದಲ್ಲಿ ಬಹುದೊಡ್ಡ ಛಾಪು ಮೂಡಿಸಿದ್ರು ಧರ್ಮೇಂದ್ರ.

ಪಂಜಾಬ್‌ನ ಲೂಧಿಯಾನದ ಹಳ್ಳಿಯೊಂದರಲ್ಲಿ ಜನಿಸಿದ ಧರ್ಮೇಂದ್ರ ಅವರ ತಂದೆ ಶಾಲೆಯೊಂದರ ಹೆಡ್ ಮಾಸ್ಟರ್ ಆಗಿದ್ರು. ಬ್ರಿಟಿಷ್ ಇಂಡಿಯನ್ ಸಿಟಿಜನ್‌ಶಿಪ್ ಹೊಂದಿದ್ದ ಧರ್ಮೇಂದ್ರ, ಇಂಡಿಯನ್ ಸಿಟಿಜನ್‌ಶಿಪ್ ಪಡೆದಿದ್ದು 1947ರಲ್ಲಿ ಅನ್ನೋದು ಎಷ್ಟೋ ಮಂದಿಗೆ ಗೊತ್ತಿಲ್ಲ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

 

 

 

Exit mobile version