ಮುಂಬೈ: ಓಶಿವಾರಾ ಪ್ರದೇಶದಲ್ಲಿ ನಡೆದ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಹಾಗೂ ಸ್ವಯಂ ಘೋಷಿತ ಚಲನಚಿತ್ರ ವಿಮರ್ಶಕ ಕಮಲ್ ರಶೀದ್ ಖಾನ್ ಅಲಿಯಾಸ್ ಕೆಆರ್‌ಕೆ ಅವರನ್ನು ಮುಂಬೈ ಪೊಲೀಸರು ಶುಕ್ರವಾರ ತಡರಾತ್ರಿ ಬಂಧಿಸಿದ್ದಾರೆ. ಈ ಘಟನೆ ಮುಂಬೈನಾದ್ಯಂತ ಭಾರೀ ಸಂಚಲನ ಮೂಡಿಸಿದ್ದು, ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ಕಂಡುಬಂದಿದೆ.
ಜನವರಿ 18ರಂದು ಅಂಧೇರಿ ಪಶ್ಚಿಮ ಭಾಗದ ಓಶಿವಾರಾದಲ್ಲಿರುವ ನಳಂದ ಸೊಸೈಟಿಯಲ್ಲಿ ಗುಂಡಿನ ದಾಳಿ ನಡೆದಿತ್ತು. ವಸತಿ ಕಟ್ಟಡದ ಎರಡನೇ ಮತ್ತು ನಾಲ್ಕನೇ ಮಹಡಿಗಳ ಫ್ಲಾಟ್‌ಗಳಿಗೆ ಎರಡು ಗುಂಡುಗಳು ತಾಕಿದ್ದು, ಕಟ್ಟಡ ನಿವಾಸಿಗಳಲ್ಲಿ ಆತಂಕ ಹಾಗೂ ಭಯದ ವಾತಾವರಣ ಸೃಷ್ಟಿಯಾಗಿತ್ತು. ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿರಲಿಲ್ಲ.
ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ, ಎರಡನೇ ಮಹಡಿಯ ಫ್ಲಾಟ್‌ನಲ್ಲಿ ವಾಸಿಸುವ ಬರಹಗಾರ-ನಿರ್ದೇಶಕ ನೀರಜ್ ಕುಮಾರ್ ಮಿಶ್ರಾ (45) ಮತ್ತು ನಾಲ್ಕನೇ ಮಹಡಿಯ ಫ್ಲಾಟ್‌ನಲ್ಲಿ ವಾಸಿಸುವ ಮಾಡೆಲ್ ಪ್ರತೀಕ್ ಬೈದ್ ಅವರ ಮನೆಗಳ ಗೋಡೆ ಹಾಗೂ ಕಿಟಕಿಗಳಲ್ಲಿ ಗುಂಡಿನ ಗುರುತುಗಳು ಪತ್ತೆಯಾಗಿದ್ದವು. ಸ್ಥಳದಿಂದ ಎರಡು ಖಾಲಿ ಕಾರ್ಟ್ರಿಜ್‌ಗಳನ್ನು ವಶಪಡಿಸಿಕೊಳ್ಳಲಾಗಿತ್ತು.
ಆದರೆ, ಆರಂಭದಲ್ಲಿ ಸಿಸಿಟಿವಿ ದೃಶ್ಯಾವಳಿಗಳ ಕೊರತೆಯಿಂದ ಪ್ರಕರಣದ ತನಿಖೆ ಪೊಲೀಸರಿಗೆ ದೊಡ್ಡ ಸವಾಲಾಗಿ ಪರಿಣಮಿಸಿತು. ಘಟನೆಯ ಹಿಂದೆ ಯಾರು ಇದ್ದಾರೆ ಎಂಬುದು ಪತ್ತೆ ಹಚ್ಚಲು ಅಪರಾಧ ವಿಭಾಗದ ಹಲವು ತಂಡಗಳನ್ನು ರಚಿಸಿ ತೀವ್ರ ತನಿಖೆ ನಡೆಸಲಾಯಿತು.
ತನಿಖೆ ಮುಂದುವರಿದಂತೆ, ಗುಂಡುಗಳು ಕಮಲ್ ರಶೀದ್ ಖಾನ್ ಅವರ ಒಡೆತನದ ಪರವಾನಗಿ ಪಡೆದ ಬಂದೂಕಿನಿಂದ ಹಾರಿರುವ ಸಾಧ್ಯತೆ ಕಂಡುಬಂದಿತ್ತು. ಇದರಿಂದಾಗಿ ಪೊಲೀಸರು ಕೆಆರ್‌ಕೆ ಅವರನ್ನು ವಿಚಾರಣೆಗೆ ಒಳಪಡಿಸಿದರು.
ಶುಕ್ರವಾರ ಸಂಜೆ ಕೆಆರ್‌ಕೆ ಅವರನ್ನು ಓಶಿವಾರಾ ಪೊಲೀಸ್ ಠಾಣೆಗೆ ಕರೆತರಲಾಗಿದ್ದು, ಸುದೀರ್ಘ ವಿಚಾರಣೆ ನಡೆಸಲಾಯಿತು. ವಿಚಾರಣೆ ವೇಳೆ ಕೆಆರ್‌ಕೆ ತಾವು ತಮ್ಮ ಪರವಾನಗಿ ಪಡೆದ ಬಂದೂಕಿನಿಂದ ಗುಂಡು ಹಾರಿಸಿದ್ದಾಗಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ಯಾರಿಗೂ ಹಾನಿ ಮಾಡುವ ಉದ್ದೇಶ ತನ್ನದಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಪೊಲೀಸರು ಕೆಆರ್‌ಕೆ ಅವರ ಬಂದೂಕನ್ನು ವಶಪಡಿಸಿಕೊಂಡಿದ್ದು, ಅದನ್ನು ಬ್ಯಾಲಿಸ್ಟಿಕ್ ಪರೀಕ್ಷೆಗೆ ಕಳುಹಿಸಲಾಗಿದೆ. ಜೊತೆಗೆ, ಗುಂಡಿನ ದಾಳಿ ನಡೆಸಲು ಕಾರಣವೇನು ಎಂಬುದರ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.
