ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋನ ಮಾಜಿ ಸ್ಪರ್ಧಿಗಳಿಗೂ ಪೊಲೀಸ್ ಠಾಣೆಗೂ ಅವಿನಾಭಾವ ನಂಟು ಇದೆ ಅನ್ಸುತ್ತೆ. ಯಾಕಂದ್ರೆ ಬಿಗ್‌ಬಾಸ್ ಹೋಗಿ ಸೆಲೆಬ್ರೆಟಿ ಅನ್ನೋ ಕಿಕ್ಕೇರಿಸಿಕೊಂಡು ಬರುವ ಹಲವರು ಪೊಲೀಸ್ ಠಾಣೆ ಮೆಟ್ಟಿಲೇರಿರೋ ಜೀವಂತ ಉದಾಹರಣೆಗಳು ಸಾಕಷ್ಟಿವೆ. ಅದಕ್ಕೆ ಈಗ ಹೊಸ ಸೇರ್ಪಡೆ ಅಂದ್ರೆ ಬಿಗ್ ಬಾಸ್ ಸೀಸನ್ 10 ಸ್ಪರ್ಧಿ ವಿನಯ್ ಗೌಡ ಹಾಗೂ ಬಿಗ್ ಬಾಸ್ ಸೀಸನ್ 10ರ ರನ್ನರ್ ಅಪ್ ರಜತ್ ಕಿಶನ್.
ಕನ್ನಡ ಬಿಗ್‌ಬಾಸ್ ರಿಯಾಲಿಟಿ ಶೋನ ಮಾಜಿ ಸ್ಪರ್ಧಿಗಳು ಪೊಲೀಸ್ ಸ್ಟೇಷನ್ ಮೆಟ್ಟಿಲೇರಿರೋದು ಇದೇ ಮೊದಲೇನಲ್ಲ. ಈಗಾಗಲೇ 11 ಸೀಸನ್‌ಗಳನ್ನು ಪೂರೈಸಿರೋ ಕನ್ನಡ ಬಿಗ್‌ಬಾಸ್ ಶೋನ ಹಲವಾರು ಮಾಜಿ ಸ್ಪರ್ಧಿಗಳು ಒಂದಲ್ಲಾ ಒಂದು ಕಾರಣಕ್ಕೆ ಪೊಲೀಸ್ ಸ್ಟೇಷನ್‌ಗೆ ಹೋಗಿ ಬಂದಿದ್ದಾರೆ. ಒಂದಲ್ಲಾ ಒಂದು ಕಾಣಕ್ಕೆ ಕಿರಿಕ್ ಮಾಡಿಕೊಂಡಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 1 ಸ್ಪರ್ಧಿಯಾಗಿದ್ದ ಋಷಿಕುಮಾರ ಸ್ವಾಮಿ ಅಲಿಯಾಸ್ ಕಾಳಿ ಸ್ವಾಮಿ, ಸಮಾಜದ ಶಾಂತಿಗೆ ಭಂಗ ತಂದಿದ್ದಾರೆ ಎಂದು ದೂರು ದಾಖಲಾಗಿತ್ತು. ಇನ್ನು ಬಿಗ್ ಬಾಸ್ ಕನ್ನಡ ಸೀಸನ್ 3ರಲ್ಲಿ ಸ್ಪರ್ಧಿಯಾಗಿದ್ದ ಹುಚ್ಚ ವೆಂಕಟ್, ಶೋ ನಡೆಯುವ ವೇಳೆಯಲ್ಲೇ ಸಹ ಸ್ಪರ್ಧಿ ಮೇಲೆ ಹಲ್ಲೆ ಮಾಡಿ ಅಲ್ಲಿಂದ ಹೊರಬಂದಿದ್ದರು. ಸ್ವಲ್ಪ ದಿನದ ಬಳಿಕ ಅಭಿಮಾನಿಯೊಬ್ಬರಿಗೆ ಹೊಡೆದು ಕಾರಿಗೆ ಹಾನಿ ಮಾಡಿದ್ದಕ್ಕಾಗಿ ಮಡೇಕೇರಿಯಲ್ಲಿ ಜನರಿಂದ ಗೂಸಾ ತಿಂದು ಪೊಲೀಸ್ ಸ್ಟೇಷನ್‌ಗೆ ಹೋಗಿ ಬಂದಿದ್ರು.
ಬಾರ್ ನೌಕರನ ಅಪಹರಣ, ಪ್ರಾಣ ಬೆದರಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಿಗ್‌ಬಾಸ್ ಸೀಸನ್ 3ರ ಮಾಜಿ ಸ್ಪರ್ಧಿಯಾಗಿದ್ದ ಸುನಾಮಿ ಕಿಟ್ಟಿ ಅಲಿಯಾಸ್ ಪ್ರದೀಪನನ್ನು ಜ್ಞಾನ ಭಾರತಿ ಠಾಣೆ ಪೊಲೀಸರು ಬಂಧಿಸಿದ್ದರು. ಇನ್ನು ಬಿಗ್‌ಬಾಸ್ ಸೀಸನ್ 5ರಲ್ಲಿ ಬರೋಬ್ಬರಿ 101 ದಿನಗಳ ಕಾಲ ಬಿಗ್‌ಬಾಸ್ ಮನೆಯಲ್ಲಿದ್ದ ಮಾಜಿ ಸ್ಫರ್ಧಿ ಸಮೀರ್ ಆಚಾರ್ಯ ದಾಂಪತ್ಯದಲ್ಲಿ ಕಲಹ ಉಂಟಾಗಿ, ದಂಪತಿ ಪರಸ್ಪರ ಹೊಡೆದಾಡಿಕೊಂಡು ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು.
ಬಿಗ್‌ಬಾಸ್ ಸೀಸನ್ 5 ರಲ್ಲಿ ರ್‍ಯಾಪರ್ ಚಂದನ್ ಶೆಟ್ಟಿ, ನಿವೇದಿತಾ ಗೌಡ ಫ್ರೆಂಡ್ಸ್ ಆಗಿದ್ರು. ಬಿಗ್‌ಬಾಸ್ ಮುಗಿದ ಬಳಿಕ ಮೈಸೂರು ದಸರಾ ವೇದಿಕೆಯಲ್ಲೇ ಚಂದನ್ ಶೆಟ್ಟಿ ನಿವೇದಿತಾಗೆ ಪ್ರಪೋಸ್ ಮಾಡಿದ್ದ ಘಟನೆಯಿಂದ ಪೊಲೀಸ್ ಸ್ಟೇಶನ್‌ನಲ್ಲಿ ದೂರು ದಾಖಲಾಗಿತ್ತು.
ಇನ್ನು ಬಿಗ್‌ಬಾಸ್ ಸೀಸನ್ 9ರಲ್ಲಿ ಸ್ಪರ್ಧಿಗಳಾಗಿದ್ದ ಆರ್ಯವರ್ಧನ್ ಗುರೂಜಿ ಹಾಗೂ ಪ್ರಶಾಂತ್ ಸಂಬರಗಿ ಕೂಡಾ ಬಿಗ್‌ನಿಂದ ಬಂದ ಬಳಿಕ ಪೊಲೀಸ್ ಸ್ಟೇಶನ್ ಮೆಟ್ಟಿಲೇರಿದ್ದರು.
ಕಾನೂನು ಬಾಹಿರವಾಗಿ ಹೆಣ್ಣು ಮಗುವನ್ನು ದತ್ತು ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್‌ಬಾಸ್ ಒಟಿಟಿ ಸೀಸನ್ 1ರ ಮಾಜಿ ಸ್ಪರ್ಧಿ ಸೋನು ಶ್ರೀನಿವಾಸ್ ಗೌಡ ಅರೆಸ್ಟ್ ಆಗಿದ್ರು.
ಇನ್ನು ಕೃಷಿ ಹೊಂಡದ ನೀರಿನಲ್ಲಿ ಸೋಡಿಯಂ ಮೆಟಲ್ ಬಳಸಿ ಸ್ಫೋಟ ಮಾಡಿದ್ದರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್ ಬಾಸ್’ ಕನ್ನಡ ಸೀಸನ್ 10ರ ರನ್ನರ್ ಅಪ್ ಆಗಿದ್ದ ಡ್ರೋನ್ ಪ್ರತಾಪ್ ಜೈಲಿಗೆ ಹೋಗಿ ಬಂದಿದ್ದಾರೆ.
ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಭಾಗಿಯಾಗುವ ಮೂಲಕ ಕನ್ನಡಿಗರಿಗೆ ಪರಿಚಯವಾಗಿದ್ದ ವರ್ತೂರ್ ಸಂತೋಷ್ ಹುಲಿ ಲಾಕೆಟ್ ಧರಿಸಿದ್ದ ವಿಚಾರದಲ್ಲಿ ಬಿಗ್ ಬಾಸ್ ಮನೆಯಿಂದಲೇ ಬಂಧನಕ್ಕೆ ಒಳಗಾಗಿದ್ದರು. ಬಿಗ್‌ಬಾಸ್ ಶೋ ಬಳಿಕ ಹಳ್ಳಿಕಾರ್ ಹಸುಗಳ ಸಾಗಾಣಿಕೆ ವೇಳೆ ಒಂದೇ ಟ್ರಕ್‌ನಲ್ಲಿ ಬರೋಬ್ಬರಿ 9 ಹೋರಿಗಳನ್ನ ಸಾಗಾಟ ಮಾಡಿ ಪ್ರಾಣಿ ಹಿಂಸೆ, ಪ್ರಾಣಿಗಳ ಸಾಗಾಟ ನಿಯಮ ಬ್ರೇಕ್ ಮಾಡಿದ್ದಾರೆ ಅಂತ ದೂರು ದಾಖಲಾಗಿತ್ತು.
ಬಿಗ್ ಬಾಸ್ ಕನ್ನಡ ಸೀಜನ್ 11ರ ಸ್ಪರ್ಧಿ ಲಾಯರ್ ಜಗದೀಶ್ ಬಿಗ್‌ಬಾಸ್ ಶೋ ವೇಳೆಯೇ ಕಿರಿಕ್ ಮಾಡಿಕೊಂಡು ಆಚೆ ಬಂದರು. ಬಳಿಕ ಕೊಡಿಗೆಹಳ್ಳಿಯ ಅಣ್ಣಮ್ಮ ದೇವಿಯ ಉತ್ಸವದ ದಿನ ಪೆಂಡಾಲ್ ವಿಚಾರಕ್ಕೆ ಸ್ಥಳೀಯರ ಜೊತೆ ಜಗಳವಾಡಿಕೊಂಡು ಜೈಲಿಗೆ ಹೋಗಿ ಬಂದಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಜನ್ 10ರ ಸ್ಪರ್ಧಿಯಾಗಿದ್ದ ರಕ್ಷಕ್ ಬುಲೆಟ್ ಖಾಸಗಿ ಶೋನಲ್ಲಿ ನಾಡದೇವಿ ಚಾಮುಂಡೇಶ್ವರಿಗೆ ಅವಹೇಳನ ಮಾಡಿರುವ ಆರೋಪಕ್ಕೆ ತುತ್ತಾಗಿದ್ದು ಜೈಲಿಗೆ ಹೋಗುವ ಭೀತಿಯಲ್ಲಿದ್ದಾರೆ.
ಈ ಹಿಂದೆ ಸಾಮಾಜಿಕ ಜೀವನದಲ್ಲಿ ಪ್ರಖ್ಯಾತರಾದ ನಟ-ನಟಿಯರು ಸಮಾಜಕ್ಕೆ ಮಾದರಿಯಾಗುವಂತೆ..ತಮ್ಮನ್ನು ನೋಡಿ ಸಮಾಜ ಕಲಿಯುವಂತೆ ಬದುಕಿ ಮಾದರಿ ಜೀವನ ನಡೆಸುತ್ತಿದ್ರು. ಆದರೆ ಈಗಿನವರು ಒಂದು ಸಣ್ಣ ಖ್ಯಾತಿ ಸಿಕ್ಕಿದ್ರೆ ಸಾಕು ಇಡೀ ಭೂಮಿಯೇ ನಂದು ಅನ್ನೋವಂತೆ ಬಿಲ್ಡಪ್ ಕೊಟ್ಕೊಂಡು ಓಡಾಡ್ತಾರೆ. ರಿಯಾಲಿಟಿ ಶೋ..ಫ್ಯಾನ್ ಫಾಲೋಯಿಂಗ್..ಸೆಲೆಬ್ರೆಟಿ ಲೈಫ್ ಇವೆಲ್ಲಾ ಶಾಶ್ವತ ಅಲ್ಲ ಅನ್ನೋದ್ರ ಪರಿವೆ ಇಲ್ಲದವರಂತೆ ಮನಸ್ಸಿಗೆ ಬಂದಂತೆ ವರ್ತನೆ ಮಾಡಿ ಸಮಾಜಕ್ಕೆ ಕೆಟ್ಟ ಸಂದೇಶಗಳನ್ನು ತಲುಪಿಸುತ್ತಿದ್ದಾರೆ.