ಕುಡಿದು ಕಿರಿಕ್‌ ಮಾಡಿದ ಭಾಗ್ಯ: ಅಮ್ಮ-ಮಕ್ಕಳ ಫೈಟಿಂಗ್‌ ವಿಡಿಯೋ ವೈರಲ್‌

Befunky collage (10)

ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿ ‘ಭಾಗ್ಯಲಕ್ಷ್ಮಿ’ ತಾರೆ ಸುಷ್ಮಾ ಕೆ. ರಾವ್‌ ಶೂಟಿಂಗ್‌ ಬಳಿಕ ತಮ್ಮ ಸೋಶಿಯಲ್‌ ಮೀಡಿಯಾದಲ್ಲಿ ಸೆನ್ಸೇಷನ್ ಸೃಷ್ಟಿಸಿದ್ದಾರೆ. ಇತ್ತೀಚೆಗೆ ಆಕೆ ಶೇರ್‌ ಮಾಡಿರುವ ಒಂದು ರೀಲ್ಸ್‌ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಈ ವಿಡಿಯೋದಲ್ಲಿ ಸುಷ್ಮಾ ಅವರ ಜೊತೆಗೆ ಧಾರಾವಾಹಿಯಲ್ಲಿ ಆಕೆಯ ಮಕ್ಕಳ ಪಾತ್ರದಲ್ಲಿ ಕಾಣಿಸಿಕೊಳ್ಳುವ ತನ್ವಿ (ಅಮೃತಾ ಗೌಡ) ಮತ್ತು ಗುಂಡ (ನಿಹಾರ್‌ ಗೌಡ) ಕಾಣಿಸಿಕೊಂಡಿದ್ದಾರೆ. ವಿಡಿಯೋದಲ್ಲಿ ಈ ಮೂವರು ಕುಡುಕರಂತೆ ವರ್ತಿಸಿ, ತಮಾಷೆಯ ಫೈಟಿಂಗ್‌ ಮಾಡಿರುವ ದೃಶ್ಯಗಳು ಎಲ್ಲರ ಗಮನ ಸೆಳೆದಿವೆ. ಅಮ್ಮನ ಮೇಲೆ ಮಕ್ಕಳು ‘ಕೈಮಾಡಿದ’ ಈ ರೀಲ್ಸ್‌ ಕಂಡು ಮೊದಲಿಗೆ ಗಾಬರಿಯಾದರೂ, ಇದು ಕೇವಲ ಮನರಂಜನೆಗಾಗಿ ಮಾಡಿದ ತಮಾಷೆಯ ವಿಡಿಯೋ ಎಂದು ತಿಳಿದು ಅಭಿಮಾನಿಗಳು ಖುಷಿಪಟ್ಟಿದ್ದಾರೆ.

ಸುಷ್ಮಾ ಕೆ. ರಾವ್‌ ಶೂಟಿಂಗ್‌ ಮುಗಿದ ಬಳಿಕ ಸೋಶಿಯಲ್‌ ಮೀಡಿಯಾದಲ್ಲಿ ಸಕತ್‌ ಆಕ್ಟೀವ್‌ ಆಗಿರುತ್ತಾರೆ. ಈ ಬಾರಿಯೂ ತಮ್ಮ ತಂಡದ ಜೊತೆಗೆ ಕುಡುಕರ ರೀತಿಯ ರೀಲ್ಸ್‌ ಮಾಡಿ, ಅಭಿಮಾನಿಗಳಿಗೆ ಮನರಂಜನೆಯ ಡೋಸ್‌ ನೀಡಿದ್ದಾರೆ. ಈ ವಿಡಿಯೋ ಶೇರ್‌ ಆಗುತ್ತಿದ್ದಂತೆಯೇ ಸಾವಿರಾರು ಲೈಕ್‌ಗಳು ಮತ್ತು ಕಾಮೆಂಟ್‌ಗಳು ಬಂದಿವೆ. ಅಭಿಮಾನಿಗಳು ಸುಷ್ಮಾ, ತನ್ವಿ ಮತ್ತು ಗುಂಡನ ಈ ತಮಾಷೆಯ ರೀಲ್ಸ್‌ಗೆ ಫುಲ್‌ ಮಾರ್ಕ್ಸ್‌ ಕೊಟ್ಟಿದ್ದಾರೆ.

‘ಭಾಗ್ಯಲಕ್ಷ್ಮಿ’ ಧಾರಾವಾಹಿಯಲ್ಲಿ ಸದ್ಯ ಭಾಗ್ಯಳ ತಂಗಿ ಪೂಜಾಳ ಮದುವೆಯ ಸುತ್ತ ರೋಚಕ ಘಟನೆಗಳು ನಡೆಯುತ್ತಿವೆ. ಪೂಜಾಳ ಎಂಗೇಜ್‌ಮೆಂಟ್‌ ಕಿಶನ್‌ ಜೊತೆ ಆಗಿದ್ದರೂ, ಮದುವೆಗೆ ಹಲವು ವಿಘ್ನಗಳು ಎದುರಾಗಿವೆ. ಕಿಶನ್‌ನ ಅಣ್ಣ ಈ ಮದುವೆಗೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇದರ ಜೊತೆಗೆ ಕಿಶನ್‌ನ ಅತ್ತೆ ಕೂಡ ‘ಬಡವರ ಮನೆಯ ಹೆಣ್ಣು’ ಎಂದು ಪೂಜಾಳನ್ನು ತಿರಸ್ಕರಿಸುತ್ತಿದ್ದಾಳೆ. ಭಾಗ್ಯ ಮತ್ತು ಆಕೆಯ ಅತ್ತೆ ಕುಸುಮಾ ಮಾಡಿರುವ ಕೆಲವು ತಪ್ಪುಗಳಿಂದ ಕಿಶನ್‌ನ ಅಣ್ಣನಿಗೆ ಭಾಗ್ಯಳ ಮೇಲೆ ಕೋಪ ಇದೆ. ಆದರೆ, ಪೂಜಾ ಮಾತ್ರ ಕಿಶನ್‌ನನ್ನೇ ಮದುವೆಯಾಗುವ ಛಲದಲ್ಲಿದ್ದಾಳೆ. ಇದರ ಜೊತೆಗೆ, ಮದುವೆಯ ಖರ್ಚಿನ ಜವಾಬ್ದಾರಿಯೂ ಭಾಗ್ಯಳ ಮೇಲೆ ಬಿದ್ದಿದೆ.

ಸುಷ್ಮಾ ಕೆ. ರಾವ್‌ ಚಿಕ್ಕಮಗಳೂರಿನ ಕೊಪ್ಪದವರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಕಂಪ್ಯೂಟರ್‌ ಸೈನ್ಸ್‌ನಲ್ಲಿ ಬಿಎಸ್‌ಸಿ ಪದವಿ ಪಡೆದಿರುವ ಇವರು, ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದಿಂದ ಹಿಂದಿಯಲ್ಲಿ ಪದವಿಯನ್ನೂ ಪಡೆದಿದ್ದಾರೆ. ಭರತನಾಟ್ಯ ಮತ್ತು ಕೂಚಿಪುಡಿ ಕಲಾವಿದೆಯಾಗಿರುವ ಸುಷ್ಮಾ, 1997ರಲ್ಲಿ ನೃತ್ಯಕ್ಕಾಗಿ ಮತ್ತು 2005ರಲ್ಲಿ ನಟನೆಗಾಗಿ ಆರ್ಯಭಟ ಪ್ರಶಸ್ತಿ ಪಡೆದಿದ್ದಾರೆ. ಕನ್ನಡ ಕಿರುತೆರೆಗೆ ಎಸ್‌. ನಾರಾಯಣ್‌ ನಿರ್ದೇಶನದ ‘ಭಾಗಗೀರಥಿ’ ಧಾರಾವಾಹಿಯ ಮೂಲಕ ಕಾಲಿಟ್ಟ ಇವರು, ‘ಯಾವ ಜನ್ಮದ ಮೈತ್ರಿ’, ‘ಗುಪ್ತಗಾಮಿನಿ’, ‘ಸೊಸೆ ತಂದ ಭಾಗ್ಯ’ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. 38 ವರ್ಷದ ಸುಷ್ಮಾ, ತಮ್ಮ ನಟನೆ ಮತ್ತು ಸೋಶಿಯಲ್‌ ಮೀಡಿಯಾದ ಮೂಲಕ  ಎಲ್ಲರ ಮನಗೆದ್ದಿದ್ದಾರೆ.

Exit mobile version