ದೇಶಾದ್ಯಂತ ಭಾರಿ ನಿರೀಕ್ಷೆ ಮೂಡಿಸಿರುವ ನಿತೇಶ್ ತಿವಾರಿ ನಿರ್ದೇಶನದ ಬಹುಕೋಟಿ ವೆಚ್ಚದ ‘ರಾಮಾಯಣ’ ಚಿತ್ರದ ಪ್ರಚಾರ ಕಾರ್ಯಕ್ಕೆ ಅಧಿಕೃತ ಚಾಲನೆ ದೊರೆತಿದೆ. ಶನಿವಾರ (ಜುಲೈ 18) ದೆಹಲಿಯಲ್ಲಿ ನಡೆದ ‘ಪ್ರಥಮ ಸಂಕಲ್ಪ’ ಕಾರ್ಯಕ್ರಮದಲ್ಲಿ ಚಿತ್ರದ ತಾರಾಗಣ, ತಾಂತ್ರಿಕ ತಂಡ, ಸಿನಿಮಾ ಮತ್ತು ಆಧ್ಯಾತ್ಮಿಕ ಕ್ಷೇತ್ರದ ಗಣ್ಯರು ಭಾಗವಹಿಸಿದ್ದರು. ಈ ವಿಶೇಷ ಸಮಾರಂಭದಲ್ಲಿ ನಟಿ ಸಾಯಿ ಪಲ್ಲವಿ ಅವರು ಸೀತಾ ಮಾತೆಯ ಪಾತ್ರ ನಿರ್ವಹಿಸಿದ ಅನುಭವವನ್ನು ಹಂಚಿಕೊಂಡು ಭಾವುಕರಾದರು.
ಸೀತೆಯ ಪಾತ್ರದ ಬಗ್ಗೆ ಮಾತನಾಡಿದ ಸಾಯಿ ಪಲ್ಲವಿ, ನಟನ ಜೀವನದಲ್ಲಿ ಇಂತಹ ಪಾತ್ರಗಳು ಅತ್ಯಂತ ಅಪರೂಪವೆಂದು ಹೇಳಿದರು. “ದೇವತೆಯ ಪಾತ್ರವನ್ನು ನಿರ್ವಹಿಸುವುದು ಸಾಮಾನ್ಯ ಸಂಗತಿಯಲ್ಲ. ಅದರ ಹಿಂದೆ ಇಡೀ ತಂಡದ ಶ್ರಮ, ಭಕ್ತಿ ಮತ್ತು ಆತ್ಮ ಅಡಗಿರುತ್ತದೆ. ನಾನು ಈ ಪಾತ್ರವನ್ನು ಹುಡುಕಿಕೊಂಡು ಬಂದಿಲ್ಲ. ಸೀತಾ ಮಾತೆಯ ಪಾತ್ರ ಮಾಡಲು ನನಗೆ ದೇವರ ಆಶೀರ್ವಾದ ಸಿಕ್ಕಿದೆ ಎಂದು ನಾನು ನಂಬುತ್ತೇನೆ. ಇಂತಹ ಪಾತ್ರಗಳನ್ನು ನಾವು ಆಯ್ಕೆ ಮಾಡಿಕೊಳ್ಳುವುದಿಲ್ಲ, ಅವು ನಮ್ಮನ್ನು ಆಯ್ಕೆ ಮಾಡಿಕೊಳ್ಳುತ್ತವೆ ಎಂದು ಹೇಳಿದರು.
ಚಿತ್ರದ ಚಿತ್ರೀಕರಣದ ವೇಳೆ ತಮ್ಮ ಮನಸ್ಥಿತಿಯ ಬಗ್ಗೆ ಮಾತನಾಡಿದ ಅವರು, “ಪ್ರತಿ ದಿನ ಶೂಟಿಂಗ್‌ಗೆ ಹೋಗುವ ಮೊದಲು ನಾನು ಧ್ಯಾನ ಮಾಡುತ್ತಿದ್ದೆ. ‘ಸೀತಾ ಮಾತೆ, ನೀನೇ ನನ್ನ ಮೂಲಕ ನಟಿಸು. ನನ್ನಿಂದ ಏನನ್ನು ನಿರೀಕ್ಷಿಸುತ್ತೀಯೋ ಅದನ್ನೇ ಈ ಚಿತ್ರದಲ್ಲಿ ಮೂಡಿಸು’ ಎಂದು ಪ್ರಾರ್ಥಿಸುತ್ತಿದ್ದೆ. ಈ ಪಾತ್ರಕ್ಕಾಗಿ ನನ್ನ ಆಲೋಚನೆಗಳನ್ನು ಸಾಧ್ಯವಾದಷ್ಟು ಶುದ್ಧವಾಗಿಟ್ಟುಕೊಳ್ಳಲು ಪ್ರಯತ್ನಿಸಿದ್ದೇನೆ. ನನ್ನ ಅತ್ಯುತ್ತಮ ವ್ಯಕ್ತಿತ್ವವನ್ನು ಸೀತೆಯ ರೂಪದಲ್ಲಿ ಪರದೆಯ ಮೇಲೆ ತರುವುದೇ ನನ್ನ ಉದ್ದೇಶವಾಗಿತ್ತು” ಎಂದು ಭಾವುಕರಾಗಿ ಹೇಳಿದರು.
ಕಾರ್ಯಕ್ರಮದಲ್ಲಿ ನಿರ್ದೇಶಕ ನಿತೇಶ್ ತಿವಾರಿ ಕೂಡ ಚಿತ್ರದ ಪ್ರಮುಖ ಕಲಾವಿದರನ್ನು ಮುಕ್ತಕಂಠದಿಂದ ಪ್ರಶಂಸಿಸಿದರು. “ನಟರ ಕಣ್ಣುಗಳು ಅವರೊಳಗಿನ ಸತ್ಯವನ್ನು ಹೇಳುತ್ತವೆ. ರಣಬೀರ್ ಕಪೂರ್ ಅವರ ಕಣ್ಣುಗಳಲ್ಲಿ ನಾನು ಶ್ರೀರಾಮನನ್ನು ಕಂಡೆ. ಅದೇ ರೀತಿ ಸಾಯಿ ಪಲ್ಲವಿ ಅವರ ಕಣ್ಣುಗಳಲ್ಲಿ ಸೀತಾ ಮಾತೆಯನ್ನು ಕಂಡೆ. ನಾನು ಹುಡುಕುತ್ತಿದ್ದ ಪ್ರಾಮಾಣಿಕತೆ ಈ ಇಬ್ಬರು ಕಲಾವಿದರಲ್ಲಿ ಕಂಡುಬಂತು. ಚಿತ್ರವನ್ನು ನೋಡುವಾಗ ನನಗೆ ರಣಬೀರ್ ಮತ್ತು ಸಾಯಿ ಪಲ್ಲವಿ ಕಾಣಿಸುವುದಿಲ್ಲ, ಕೇವಲ ರಾಮ ಮತ್ತು ಸೀತೆ ಮಾತ್ರ ಕಾಣಿಸುತ್ತಾರೆ” ಎಂದು ಹೇಳಿದರು.
ನಮಿತ್ ಮಲ್ಹೋತ್ರಾ ನಿರ್ಮಾಣದ ಈ ಮಹತ್ವಾಕಾಂಕ್ಷೆಯ ಸಿನಿಮಾ ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದೆ. ಮೊದಲ ಭಾಗದಲ್ಲಿ ರಣಬೀರ್ ಕಪೂರ್ ಶ್ರೀರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ ಮತ್ತು ರಾಕಿಂಗ್ ಸ್ಟಾರ್ ಯಶ್ ರಾವಣನಾಗಿ ಕಾಣಿಸಿಕೊಳ್ಳಲಿದ್ದಾರೆ. ಜೊತೆಗೆ ರವಿ ದುಬೆ ಲಕ್ಷ್ಮಣನಾಗಿ, ಸನ್ನಿ ಡಿಯೋಲ್ ಹನುಮಂತನಾಗಿ ಅಭಿನಯಿಸಿದ್ದು, ಕಾಜಲ್ ಅಗರ್ವಾಲ್ ಹಾಗೂ ವಿವೇಕ್ ಒಬೆರಾಯ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಅತ್ಯಾಧುನಿಕ ತಂತ್ರಜ್ಞಾನ, ಭವ್ಯ ದೃಶ್ಯ ವೈಭವ ಮತ್ತು ಭಕ್ತಿಭಾವದೊಂದಿಗೆ ಮೂಡಿಬರುತ್ತಿರುವ ‘ರಾಮಾಯಣ’ ಸಿನಿಮಾ 2026ರ ದೀಪಾವಳಿ ಹಬ್ಬದ ಸಂದರ್ಭದಲ್ಲಿ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.
