ಇತ್ತೀಚೆಗೆ ‘ತ್ರಿಬಾಣಧಾರಿ ಬಾರ್ಬರಿಕ್’ ಸಿನಿಮಾ ತೆಲುಗಿನಲ್ಲಿ ಬಿಡುಗಡೆಯಾಗಿತ್ತು. ಆದರೆ ಥಿಯೇಟರ್‌ಗೆ ಪ್ರೇಕ್ಷಕರು ಸಿನಿಮಾ ನೋಡಲು ಬಾರದಿದ್ದಕ್ಕೆ ಬೇಸತ್ತ ನಿರ್ದೇಶಕ ಚಪ್ಪಲಿಯಿಂದ ಹೊಡೆದುಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ತ್ರಿಬಾಣಧಾರಿ ಬಾರ್ಬರಿಕ್ ಸಿನಿಮಾದಲ್ಲಿ ಕನ್ನಡದ ವಸಿಷ್ಠ ಸಿಂಹ ಮತ್ತು ಬಾಹುಬಲಿ ಖ್ಯಾತಿಯ ಸತ್ಯರಾಜ್‌ಯಂತಹ ತಾರೆಯರು ನಟಿಸಿದ್ದರು. ಈ ಕ್ರೈಂ ಥ್ರಿಲ್ಲರ್ ಚಿತ್ರವನ್ನು ನಿರ್ದೇಶಕ ಮೋಹನ್ ಶ್ರೀವತ್ಸ ಎರಡೂವರೆ ವರ್ಷಗಳ ಕಠಿಣ ಪರಿಶ್ರಮದಿಂದ ನಿರ್ಮಿಸಿದ್ದರು. ಆಗಸ್ಟ್ 29ರಂದು ಬಿಡುಗಡೆಯಾದ ಈ ಚಿತ್ರಕ್ಕೆ ಭರ್ಜರಿ ಪ್ರಚಾರವನ್ನೂ ಮಾಡಲಾಗಿತ್ತು. ಆದರೆ, ಥಿಯೇಟರ್‌ಗಳು ಖಾಲಿಯಾಗಿರುವುದನ್ನು ಕಂಡು ನಿರ್ದೇಶಕರು ತೀವ್ರ ನಿರಾಸೆಗೊಂಡಿದ್ದಾರೆ.
ಈ ಬೇಸರದಲ್ಲಿ ಮೋಹನ್ ಶ್ರೀವತ್ಸ ಸೋಶಿಯಲ್ ಮೀಡಿಯಾದಲ್ಲಿ ಭಾವುಕ ವೀಡಿಯೋವೊಂದನ್ನು ಹಂಚಿಕೊಂಡಿದ್ದಾರೆ, ಅದು ಈಗ ವೈರಲ್ ಆಗಿದೆ. ವೀಡಿಯೋದಲ್ಲಿ ಅವರು ತಮ್ಮ ಮುಖಕ್ಕೆ ಚಪ್ಪಲಿಯಿಂದ ಹೊಡೆದುಕೊಂಡು, ಪ್ರೇಕ್ಷಕರ ಕೊರತೆಗೆ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. “ಸಿನಿಮಾ ಚೆನ್ನಾಗಿದ್ದರೂ ಜನ ಯಾಕೆ ಬರ್ತಿಲ್ಲ? ಒಳ್ಳೆಯ ಕಂಟೆಂಟ್ ಇಟ್ಟುಕೊಂಡು ಸಿನಿಮಾ ಮಾಡಿದ್ದೇನೆ, ಆದರೂ ಥಿಯೇಟರ್‌ಗೆ 10 ಜನ ಮಾತ್ರ ಬಂದಿದ್ದಾರೆ. ಇದರಿಂದ ನನಗೆ ಆತ್ಮಹತ್ಯೆ ಮಾಡಿಕೊಳ್ಳಬೇಕೆನಿಸುತ್ತಿದೆ,” ಎಂದು ಅವರು ಭಾವುಕರಾಗಿ ಹೇಳಿದ್ದಾರೆ.
ಮೋಹನ್ ಶ್ರೀವತ್ಸ ತಾವು ಸಿನಿಮಾ ನೋಡಲು ಥಿಯೇಟರ್‌ಗೆ ಹೋದಾಗ ಕೇವಲ 10 ಪ್ರೇಕ್ಷಕರನ್ನು ಕಂಡು ಹತಾಶರಾದ ಅನುಭವವನ್ನು ಹಂಚಿಕೊಂಡಿದ್ದಾರೆ. “ನಾನು ಥಿಯೇಟರ್‌ನಲ್ಲಿ ಆ 10 ಜನರ ಬಳಿ ಹೋಗಿ, ‘ನಾನೇ ಈ ಸಿನಿಮಾದ ಡೈರೆಕ್ಟರ್, ಸಿನಿಮಾ ಹೇಗಿದೆ?’ ಎಂದು ಕೇಳಿದೆ. ಎಲ್ಲರೂ ‘ಸಿನಿಮಾ ತುಂಬಾ ಚೆನ್ನಾಗಿದೆ ಸರ್’ ಎಂದು ಹೇಳಿದರು. ಕೆಲವರು ನನ್ನನ್ನು ತಬ್ಬಿಕೊಂಡು ಶುಭಾಶಯ ಕೋರಿದರು. ಆದರೆ, ಈ ಒಳ್ಳೆಯ ಪ್ರತಿಕ್ರಿಯೆಯ ನಡುವೆ ಜನ ಯಾಕೆ ಬರಲಿಲ್ಲ?” ಎಂದು ಅವರು ಪ್ರಶ್ನಿಸಿದ್ದಾರೆ.
“ಮಲಯಾಳಂ ಸಿನಿಮಾಗಳಿಗೆ ಜನ ಮುಗಿಬಿದ್ದು ನೋಡುತ್ತಾರೆ, ಆದರೆ ನಮ್ಮ ತೆಲುಗು ಚಿತ್ರಕ್ಕೆ ಬರಲಿಲ್ಲ. ಒಳ್ಳೆಯ ಕಂಟೆಂಟ್ ಇದ್ದರೂ ಜನರಿಗೆ ಆಸಕ್ತಿ ಇಲ್ಲವೇ? ಈಗ ನಾನೇ ಚಪ್ಪಲಿಯಿಂದ ನನ್ನನ್ನು ಹೊಡೆದುಕೊಳ್ಳುತ್ತೇನೆ, ಏಕೆಂದರೆ ನಾನು ಹೇಳಿದ್ದೆ, ಸಿನಿಮಾ ಇಷ್ಟವಾಗದಿದ್ದರೆ ಚಪ್ಪಲಿಯಿಂದ ಹೊಡೆದುಕೊಳ್ಳುತ್ತೇನೆ ಎಂದು,” ಎಂದು ವಿಡಿಯೋದಲ್ಲಿ ಹೇಳಿದ್ದಾರೆ.