ಅ. 2ಕ್ಕೆ ‘ಬೇಲ್’ ಗ್ರ್ಯಾಂಡ್ ರಿಲೀಸ್: ಪ್ರೀ-ರಿಲೀಸ್ ಇವೆಂಟ್‌ನಲ್ಲಿ ಸ್ಟೆಪ್ ಹಾಕಿದ ತಾರೆಯರು!

Your paragraph text (42)

ಶಿವಣ್ಣ ಹಾಗೂ ಬಹುಭಾಷಾ ಕಲಾವಿದರ ಸಮಾಗಮದಿಂದ ತಯಾರಾಗಿರೋ ಬಹುನಿರೀಕ್ಷಿತ ಬೇಲ್ ಸಿನಿಮಾದ ರಿಲೀಸ್‌ಗೆ ಇನ್ನೆರಡೇ ದಿನ ಬಾಕಿ. ಅದಕ್ಕೂ ಮುನ್ನ ಗ್ರ್ಯಾಂಡ್ ಪ್ರೀ-ರಿಲೀಸ್ ಇವೆಂಟ್ ನಡೆದಿದ್ದು, ಇಡೀ ಟೀಂ ವೇದಿಕೆಯಲ್ಲಿ ಹಂಗಾಮ ಮಾಡಿದೆ.

ಶಿವಣ್ಣ ‘ಬೇಲ್’ ಟೀಂ ಸಮಾಗಮ.. ರಿಲೀಸ್‌ಗೆ ಕೌಂಟ್‌ಡೌನ್

ಹೇಗಿದೆ ಸಾರ್ವಭೌಮ.. ಕನ್ನಡದ ಭೀಮ ಶಿವಣ್ಣನ ಆ್ಯಂಥೆಮ್?

ಕೌಂಟರ್‌ಗೆ ಎನ್‌ಕೌಂಟರ್.. ಸ್ಟೇಜ್‌‌ನಲ್ಲೇ ಸೂಪರ್ ಡ್ಯಾನ್ಸ್..!

ಲೆಜೆಂಡ್ ಬಿಚ್ಚಿಟ್ರು ಕೂದಲ ಕಥೆ.. ಕಣ್ಣೀರಿಟ್ಟಿದ್ದ ಶಿವಣ್ಣ-ಗೀತಕ್ಕ..!

ಬೇಲ್.. ಈ ವರ್ಷದ ಮೋಸ್ಟ್ ಎಕ್ಸ್‌ಪೆಕ್ಟೆಡ್ ಮೂವಿ. ಟಾಕ್ಸಿಕ್, ಜನನಾಯಗನ್‌‌ನಂತಹ ಸಿನಿಮಾಗಳನ್ನ ನಿರ್ಮಿಸಿದ್ದ ಹೆಮ್ಮೆಯ ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್‌ನಡಿ ತಯಾರಾಗಿರೋ ಚಿತ್ರ. ಗೂಗ್ಲಿ ಡೈರೆಕ್ಟರ್ ಪವನ್ ಒಡೆಯರ್ ಪ್ರೇಕ್ಷಕರ ಅಭಿರುಚಿಗೆ ತಕ್ಕನಾಗಿ ಎಲ್ಲಾ ಕಮರ್ಷಿಯಲ್ ಅಂಶಗಳನ್ನ ಬ್ಲೆಂಡ್ ಮಾಡಿ ಮಾಡಿರೋ ಹೈ ವೋಲ್ಟೇಜ್ ಆ್ಯಕ್ಷನ್ ಥ್ರಿಲ್ಲರ್ ಮೂವಿ. ಸ್ಯಾಂಪಲ್ಸ್‌‌ನಿಂದ ಸದ್ದು ಮಾಡ್ತಿರೋ ಬೇಲ್ ರಿಲೀಸ್‌ಗೆ ಇನ್ನೆರಡೇ ಎರಡು ದಿನ ಬಾಕಿ ಉಳಿದಿದೆ.

ಲಿವಿಂಗ್ ಲೆಜೆಂಡ್ ಶಿವರಾಜ್‌‌ಕುಮಾರ್ ಜೊತೆ ಬಹುಭಾಷಾ ಬಹುತಾರಾಗಣದ ಚಿತ್ರವಾಗಿ ಬೇಲ್ ಮೂಡಿಬಂದಿದೆ. ಸಾಯಿಕುಮಾರ್, ಜಯರಾಮ್, ಸಂಗೀತಾ, ಲೂಸ್‌ಮಾದ ಯೋಗಿ, ದೀಕ್ಷಿತ್ ಶೆಟ್ಟಿ, ಸಂಜನಾ ಆನಂದ್, ಗೋಪಾಲಕೃಷ್ಣ ದೇಶಪಾಂಡೆ, ರಮೇಶ್ ಇಂದಿರ ಸೇರಿದಂತೆ ನುರಿತ ಕಲಾವಿದರ ದಂಡಿದೆ. ರಿಲೀಸ್‌‌ಗೂ ಮುನ್ನ ಗ್ರ್ಯಾಂಡ್ ಪ್ರೀ ರಿಲೀಸ್ ಇವೆಂಟ್ ನಡೆಸಿದ ಚಿತ್ರತಂಡ, ಆ ವೇದಿಕೆಯಲ್ಲಿ ಶಿವಣ್ಣ ಆ್ಯಂಥೆಮ್ ಗೀತೆಯನ್ನ ಕೂಡ ಬಿಡುಗಡೆ ಮಾಡಿರೋದು ವಿಶೇಷ.

ಹೇ ನಟಸಾರ್ವಭೌಮ ಕನ್ನಡದ ಭೀಮ ಅನ್ನೋ ಈ ಶಿವಣ್ಣ ಆ್ಯಂಥೆಮ್ ಗೀತೆಗೆ ತ್ರಿಲೋಕ್ ತ್ರಿವಿಕ್ರಮ್ ಪದಪುಂಜ ಪೋಣಿಸಿದ್ದು, ಅಜನೀಶ್ ಲೋಕನಾಥ್ ರಾಗ ಸಂಯೋಜನೆ ಮಾಡಿದ್ದಾರೆ. ಅಲ್ಲದೆ ಅನಿರುದ್ದ್ ಶಾಸ್ತ್ರಿ ಜೊತೆ ಸ್ವತಃ ಅಜನೀಶ್ ಅವ್ರೇ ಈ ಮಾಸ್ ಗೀತೆಯನ್ನ ಹಾಡಿರೋದು ಮತ್ತೊಂದು ಹೈಲೈಟ್. ಈ ವೇಳೆ ಶಿವರಾಜ್‌ಕುಮಾರ್ ಹಾಗೂ ನಿರ್ದೇಶಕ ಪವನ್ ಒಡೆಯರ್ ತಮ್ಮ ವೈಯಕ್ತಿಕ ಬದುಕಿನ ನೋವು, ಸವಾಲುಗಳು ಹಾಗೂ ಶೂಟಿಂಗ್ ವೇಳೆಯ ಭಾವನಾತ್ಮಕ ಅನುಭವಗಳನ್ನು ಹಂಚಿಕೊಂಡರು.

ವೇದಿಕೆಯಲ್ಲಿ ಮಾತನಾಡಿದ ಶಿವಣ್ಣ, ತಾವು ಚಿಕಿತ್ಸೆ ಪಡೆಯುತ್ತಿದ್ದ ಕಠಿಣ ದಿನಗಳನ್ನ ಮೆಲುಕು ಹಾಕುತ್ತಾ.. ನಾನು ಕೊನೆಯ ಹಂತದ ಕೀಮೋ ಥೆರಪಿಗೆ ಒಳಗಾಗುತ್ತಿದ್ದ ಸಂದರ್ಭದಲ್ಲಿ ನಿರ್ದೇಶಕ ಪವನ್ ಒಡೆಯರ್ ಹಾಗೂ ಅವ್ರ ಪತ್ನಿ ಅಪೇಕ್ಷಾ ಭೇಟಿ ನೀಡಿ ಕಥೆ ಹೇಳಿದ್ರು. ಕೀಮೋ ಥೆರಪಿ ವೇಳೆ ಸಾಮಾನ್ಯವಾಗಿ ಕೂದಲು ಉದುರುತ್ತವೆ. ಅಷ್ಟು ಪ್ರಬಲ ಡೋಸ್ ನೀಡಿದ್ದರೂ ದೇವರ ದಯೆಯಿಂದ ನನಗೆ ಒಂದೇ ಒಂದು ಕೂದಲು ಕೂಡ ಉದುರಲಿಲ್ಲ. 64 ವರ್ಷದವರೆಗೆ ಜೋಪಾನವಾಗಿ ಕಾಪಾಡಿಕೊಂಡು ಬಂದಿದ್ದ ಕೂದಲನ್ನು ನೋಡಿ ಬೇರೆಯವರು ಮರುಗಬಾರದು ಅನ್ನೋ ಆತಂಕವಿತ್ತು. ಚಿಕಿತ್ಸೆಯ ಆ ಕಷ್ಟದ ವೇಳೆಯಲ್ಲೂ ಪವನ್ ದಂಪತಿ ಬಂದು ಪ್ರೀತಿಯಿಂದ ಅಡ್ವಾನ್ಸ್ ನೀಡಿ ಸಿನಿಮಾ ಒಪ್ಪಿಸಿದ್ರು. ಅವರ ನಂಬಿಕೆಗೆ ನಾನು ಹಾಗೂ ಗೀತಾ ಭಾವುಕರಾಗಿ ಕಣ್ಣೀರಿಟ್ಟಿದ್ದೆವು ಅಂತ ಶಿವಣ್ಣ ಮುಕ್ತವಾಗಿ ಮಾತನಾಡಿದ್ರು.

ಸಿನಿಮಾದ ಆರ್ಟಿಸ್ಟ್‌‌ಗಳ ಬಗ್ಗೆ ಮಾತಾಡಿದ ಶಿವಣ್ಣ.. ಇದು ಕೇವಲ ಒನ್ ಮ್ಯಾನ್ ಶೋ ಅಲ್ಲ. ಎಲ್ಲಾ ಪಾತ್ರಗಳು ಚಿತ್ರಕಥೆಗೆ ಜೀವ ತುಂಬಿವೆ. ದೀಕ್ಷಿತ್ ಅತ್ಯುತ್ತಮ ಡ್ಯಾನ್ಸರ್ ಮತ್ತು ಹ್ಯಾಂಡ್ಸಮ್ ನಟ. ಸಂಜನಾ ಉತ್ತಮ ಅಭಿನಯ ನೀಡಿದ್ದಾರೆ. ಇನ್ನು ‘ದುನಿಯಾ’ ಚಿತ್ರದಿಂದಲೂ ನಾನು ಲೂಸ್ ಮಾದ ಯೋಗಿಗೆ ದೊಡ್ಡ ಅಭಿಮಾನಿಯಾಗಿದ್ದು, ಅವರೊಂದಿಗೆ ಸ್ಕ್ರೀನ್ ಶೇರ್ ಮಾಡಿದ್ದು ಖುಷಿ ನೀಡಿದೆ. ವಯಸ್ಸಾಗುವುದನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳಬೇಕು, 64 ವರ್ಷವಾದರೂ ಕೆಲಸ ಮಾಡುವ ಸಕಾರಾತ್ಮಕ ಮನೋಭಾವ ನಮ್ಮಲ್ಲಿರಬೇಕು ಎಂದರು.

ಕ್ರಿಕೆಟ್ ಟೂರ್ನಮೆಂಟ್ ಆಕ್ಷನ್ ವೇಳೆ ಶಿವಣ್ಣನಿಗೆ ಕ್ಯಾನ್ಸರ್ ಆಗಿದೆ ಎಂಬ ಸುದ್ದಿ ಕೇಳಿ ದಿಗ್ಭ್ರಮೆಗೊಂಡಿದ್ದೆ. ಆದ್ರೆ ಚಿತ್ರರಂಗದ ಕಾರ್ಮಿಕರ ಬದುಕಿಗೆ ನಿರಂತರವಾಗಿ ಆಸರೆಯಾಗಿರುವ, ಹಿಟ್-ಫ್ಲಾಪ್ ಮೀರಿ ನಿಂತಿರುವ ಶಿವಣ್ಣನಿಗೆ ಏನೂ ಆಗಲ್ಲ ಅನ್ನೋ ನಂಬಿಕೆಯಿತ್ತು. ಚಿಕಿತ್ಸೆ ಮುಗಿಸಿ ಗುಣಮುಖರಾಗಿ ಬಂದ ತಕ್ಷಣವೇ ಅವರು ನಮಗೆ ಕರೆ ಮಾಡಿ ಚಿತ್ರೀಕರಣಕ್ಕೆ ಡೇಟ್ಸ್ ನೀಡಿದ್ರು. ಇದಕ್ಕೆ ಬೆನ್ನೆಲುಬಾಗಿ ನಿಂತ ಗೀತಕ್ಕ ಹಾಗೂ ನಿವೇದಿತಾ ಶಿವರಾಜ್‌ಕುಮಾರ್ ಅವರಿಗೆ ಧನ್ಯವಾದಗಳು. ಈ ಚಿತ್ರವನ್ನ ನಾವೇ ನಿರ್ಮಿಸಲು ಹೊರಟಿದ್ದಾಗ, ಕಥೆ ಮೆಚ್ಚಿದ ಕೆವಿಎನ್ ಪ್ರೊಡಕ್ಷನ್ಸ್‌ನ ವೆಂಕಟ್ ಕೆ. ನಾರಾಯಣ್ ಬೆಂಬಲವಾಗಿ ನಿಂತರು ಅಂದ್ರು ಡೈರೆಕ್ಟರ್ ಪವನ್ ಒಡೆಯರ್.

ಸೆಕೆಂಡ್ ಶೆಡ್ಯೂಲ್ ಶೂಟಿಂಗ್ ವೇಳೆ ನನ್ನ ತಾಯಿಗೂ ಕ್ಯಾನ್ಸರ್ ಇರೋದು ಪತ್ತೆಯಾಯಿತು. ಆಕೆ ಶಿವಣ್ಣನ ಅಪ್ಪಟ ಅಭಿಮಾನಿ. ತಮಗೆ ನೋವಿದ್ದರೂ, ‘ಚಿತ್ರ ಚೆನ್ನಾಗಿ ಮೂಡಿಬರಬೇಕು, ಸದಾ ಕೆಲಸ ಮಾಡು’ ಎಂದೇ ಹುರಿದುಂಬಿಸುತ್ತಿದ್ದರು. ತಾಯಿ ತೀರಿಕೊಂಡ ಸೂತಕದ ದಿನದಲ್ಲೂ ನಾನು ಈ ಸಿನಿಮಾಗಾಗಿ ಶ್ರಮಿಸಿದ್ದೇನೆ” ಅಂತ ಪವನ್ ಒಡೆಯರ್ ಕಣ್ಣೀರು ಹಾಕಿದ್ದು ಎಮೋಷನಲ್ ಮೊಮೆಂಟ್‌ಗೆ ಸಾಕ್ಷಿ ಆಯ್ತು.

ಅಜನೀಶ್ ಲೋಕನಾಥ್ ಸಂಗೀತ, ವೈದಿ ಎಸ್ ಕ್ಯಾಮೆರಾ ಕೈಚಳಕ ಹಾಗೂ ಮುರಳಿ ಮಾಸ್ಟರ್ ಕೊರಿಯೋಗ್ರಫಿ ಬೇಲ್ ಚಿತ್ರದ ಕಲರ್‌‌ಫುಲ್‌ನೆಸ್ ಹಾಗೂ ಖದರ್‌ ಎರಡನ್ನೂ ಹೆಚ್ಚಿಸಿವೆ. ವೇದಿಕೆಯಲ್ಲಿ ದೀಕ್ಷಿತ್ ಸಂಜನಾ ಸಿಗ್ನೇಚರ್ ಸ್ಟೆಪ್ ಹಾಕಿ ಗಮನ ಸೆಳೆದರೆ, ಗ್ಲಾಮರ್ ಡಾಲ್ ನಿವೇದಿತಾ ಗೌಡ ಕೂಡ ಶಿವಣ್ಣ ಸೇರಿದಂತೆ ಇಡೀ ಟೀಂ ಜೊತೆ ಸೊಂಟ ಬಳುಕಿಸಿ, ಶಿಳ್ಳೆ ಚಪ್ಪಾಳೆ ಗಿಟ್ಟಿಸಿದ್ರು. ಒಟ್ಟಾರೆ ಇದೇ ಅಕ್ಟೋಬರ್ 2ರಂದು ಗಾಂರ್ಇ ಜಯಂತಿ ಪ್ರಯುಕ್ತ ಗ್ರ್ಯಾಂಡ್ ರಿಲೀಸ್ ಆಗ್ತಿದೆ ಬೇಲ್.

 

Exit mobile version