ಬೆಂಗಳೂರು: ಸ್ಯಾಂಡಲ್‌ವುಡ್ ನಟ ದರ್ಶನ್ ಮತ್ತು ವಿವಾದಗಳು ಸದ್ಯಕ್ಕೆ ಬೆನ್ನ ಬಿಡುವಂತೆ ಕಾಣುತ್ತಿಲ್ಲ. ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ಮತ್ತು ಕಾನೂನು ಹೋರಾಟ ನಡೆಯುತ್ತಿರುವ ಬೆನ್ನಲ್ಲೇ, ಆ ಘಟನೆಯನ್ನೇ ಆಧರಿಸಿ ಸಿದ್ಧವಾಗಿದ್ದ ಎನ್ನಲಾದ ‘ಬಾಸ್’ ಸಿನಿಮಾದ ಬಿಡುಗಡೆಗೆ ಬೆಂಗಳೂರಿನ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯವು ಮಧ್ಯಂತರ ತಡೆಯಾಜ್ಞೆ ನೀಡಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಅವರು ಪ್ರಮುಖ ಆರೋಪಿಯಾಗಿದ್ದಾರೆ. ಈ ಘಟನೆಯನ್ನೇ ಕಥಾವಸ್ತುವಾಗಿಸಿಕೊಂಡು ‘ಬಾಸ್’ ಎಂಬ ಚಿತ್ರ ನಿರ್ಮಾಣವಾಗುತ್ತಿದೆ ಎಂಬ ಸುದ್ದಿಗಳು ಕೇಳಿಬಂದಿದ್ದವು. ಈ ಸಿನಿಮಾ ಬಿಡುಗಡೆಯಾದರೆ ತಮ್ಮ ವೈಯಕ್ತಿಕ ಘನತೆ, ಗೌರವಕ್ಕೆ ಧಕ್ಕೆಯಾಗುತ್ತದೆ ಮತ್ತು ಸದ್ಯ ನ್ಯಾಯಾಲಯದಲ್ಲಿ ನಡೆಯುತ್ತಿರುವ ಪ್ರಕರಣದ ವಿಚಾರಣೆಯ ಮೇಲೆ ಇದು ಪ್ರಭಾವ ಬೀರಬಹುದು ಎಂದು ಆತಂಕ ವ್ಯಕ್ತಪಡಿಸಿ ನಟ ದರ್ಶನ್ ಹಾಗೂ ಅವರ ಪತ್ನಿ ವಿಜಯಲಕ್ಷ್ಮಿ ದರ್ಶನ್ ಅವರು ನ್ಯಾಯಾಲಯದ ಮೊರೆ ಹೋಗಿದ್ದರು.
ದರ್ಶನ್ ದಂಪತಿ ಸಲ್ಲಿಸಿದ್ದ ಮೂಲ ದಾವೆಯನ್ನು ವಿಚಾರಣೆ ನಡೆಸಿದ 16ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯವು, ಪ್ರಕರಣದ ಸೂಕ್ಷ್ಮತೆಯನ್ನು ಗಮನಿಸಿ ಬಿಡುಗಡೆಗೆ ತಡೆ ನೀಡಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳನ್ನು ನೇರವಾಗಿ ಅಥವಾ ಪರೋಕ್ಷವಾಗಿ ಆಧರಿಸಿದ ಈ ಬಾಸ್ ಎಂಬ ಸಿನಿಮಾ, ದರ್ಶನ್ ಮತ್ತು ಅವರ ಕುಟುಂಬದ ಗೌರವಕ್ಕೆ ತೇಜೋವಧೆ ಉಂಟು ಮಾಡುವಂತಹ ಯಾವುದೇ ದೃಶ್ಯ ಅಥವಾ ಕಥೆಯನ್ನು ಹೊಂದಿರುವ ಈ ಚಿತ್ರವನ್ನ ಚಿತ್ರಮಂದಿರ ಅಥವಾ ಒಟಿಟಿ ವೇದಿಕೆಗಳಲ್ಲಿ ಬಿಡುಗಡೆ ಮಾಡಬಾರದು ಎಂದು ನ್ಯಾಯಾಧೀಶರು ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ.
ಈಗಾಗಲೇ ಚಿತ್ರದ ನಿರ್ಮಾಪಕರು, ನಿರ್ದೇಶಕರು ಮತ್ತು ವಿತರಕರಿಗೆ ನ್ಯಾಯಾಲಯವು ಸಮನ್ಸ್ ಜಾರಿಗೊಳಿಸಿದೆ. ಸಿನಿಮಾದಲ್ಲಿ ಅಂತಹ ದೃಶ್ಯಗಳಿವೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ವಿವರಣೆ ಕೋರಲಾಗಿದೆ. ಈ ಮಧ್ಯೆ ಏಪ್ರಿಲ್ 14ರಂದು ರಾಜ್ಯಾದ್ಯಂತ ತೆರೆಕಾಣಲು ಸಜ್ಜಾಗಿದ್ದ ‘ಬಾಸ್’ ಚಿತ್ರದ ಪ್ರದರ್ಶನ ಈಗ ಅನಿಶ್ಚಿತವಾಗಿದೆ. ನ್ಯಾಯಾಲಯವು ಮುಂದಿನ ವಿಚಾರಣೆಯನ್ನು ಮೇ 2ಕ್ಕೆ ಮುಂದೂಡಿದೆ.
ಯಾವುದೇ ಕ್ರಿಮಿನಲ್ ಪ್ರಕರಣವು ನ್ಯಾಯಾಲಯದ ವಿಚಾರಣಾ ಹಂತದಲ್ಲಿದ್ದಾಗ (Sub-judice), ಅದರ ಮೇಲೆ ಸಿನಿಮಾ ಅಥವಾ ಸಾಹಿತ್ಯ ಸೃಷ್ಟಿಸುವುದು ಕಾನೂನಾತ್ಮಕವಾಗಿ ಹಲವು ಸವಾಲುಗಳನ್ನು ಎದುರಿಸುತ್ತದೆ. ದರ್ಶನ್ ಪರ ವಕೀಲರು ವಾದಿಸಿದಂತೆ, ಸಿನಿಮಾವು ಜನರ ಮನಸ್ಸಿನಲ್ಲಿ ಆರೋಪಿಗಳ ಬಗ್ಗೆ ಮುಂಸೂಚನೆಯ ಭಾವನೆಗಳನ್ನು ಬಿತ್ತಬಹುದು, ಇದು ನ್ಯಾಯದಾನಕ್ಕೆ ಅಡ್ಡಿಯಾಗಬಹುದು ಎನ್ನುವುದು ಅವರ ಮುಖ್ಯ ಆಕ್ಷೇಪವಾಗಿತ್ತು. ಈ ಹಿನ್ನೆಲೆಯಲ್ಲಿ ಕೋರ್ಟ್ ನೀಡಿರುವ ತಡೆಯಾಜ್ಞೆಯು ಸಿನಿಮಾ ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ.





