ಅನಿರುದ್ಧ್ ರವಿಚಂದರ್ ಕೈ ಹಿಡಿಯಲಿದ್ದಾರಾ ಕಾವ್ಯಾ ಮಾರನ್?

Untitled design 2026 06 28T224352.842

ಚೆನ್ನೈ: ಸಂಗೀತ ಪ್ರಪಂಚದ ಯುವ ಜನಪ್ರಿಯ ನಿರ್ದೇಶಕ ಅನಿರುದ್ಧ್ ರವಿಚಂದರ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ಐಪಿಎಲ್ ತಂಡದ ಸಿಇಒ ಕಾವ್ಯಾ ಮಾರನ್ ಮದುವೆಯಾಗಲಿದ್ದಾರೆ ಎಂಬ ವದಂತಿ ಹಲವು ತಿಂಗಳುಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿತ್ತು. ಇದೀಗ ಈ ಸುದ್ದಿಗೆ ಮತ್ತಷ್ಟು ಬಲ ಬಂದಿದೆ. ಅನಿರುದ್ಧ್ ಅವರ ಚಿಕ್ಕಪ್ಪ ಹಾಗೂ ಹಿರಿಯ ನಟ ವೈ.ಜಿ. ಮಹೇಂದ್ರನ್ ಅವರು ಸ್ವತಃ ಈ ಬಗ್ಗೆ ಮಾತನಾಡಿರುವುದು ಈ ವದಂತಿಯನ್ನು ಮತ್ತಷ್ಟು ಚರ್ಚೆಗೆ ತಂದಿದೆ.

ವೈ.ಜಿ. ಮಹೇಂದ್ರನ್ ಮಾತಿನಲ್ಲೇ ಸುಳಿವು

ವೈ.ಜಿ. ಮಹೇಂದ್ರನ್ ಅವರು ಇತ್ತೀಚೆಗೆ ಒಂದು ಯೂಟ್ಯೂಬ್ ಸಂದರ್ಶನದಲ್ಲಿ ಭಾಗವಹಿಸಿ, ಅನಿರುದ್ಧ್ ಅವರ ಮದುವೆಯ ಬಗ್ಗೆ ಸ್ಪಷ್ಟ ಮಾಹಿತಿ ನೀಡಿದ್ದಾರೆ. “ಅನಿರುದ್ಧ್ ತುಂಬಾ ಸೌಮ್ಯ ಸ್ವಭಾವದ ಹುಡುಗ. ಅವನಿಗೆ ಶುಭಾಶಯ ಹೇಳಲು ಇದು ಸರಿಯಾದ ಸಮಯ. ಅವನು ಮದುವೆಗೆ ಸಜ್ಜಾಗಿದ್ದಾನೆ. ಶೀಘ್ರದಲ್ಲೇ ಅವನು ಅದ್ಧೂರಿಯಾಗಿ ಮದುವೆಯಾಗಲಿದ್ದಾನೆ” ಎಂದು ಅವರು ಹೇಳಿದ್ದಾರೆ.

ಈ ಸುದ್ದಿ ಕೇವಲ ವದಂತಿಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ನನಗೆ ಸಿಕ್ಕಿರುವ ಮಾಹಿತಿಯ ಪ್ರಕಾರ ಇದು ನಿಜ. ಇಬ್ಬರೂ ಮದುವೆಯಾಗಲಿದ್ದಾರೆ” ಎಂದು ಖಚಿತಪಡಿಸಿದ್ದಾರೆ. 

ಕಾವ್ಯಾ ಮಾರನ್ ಬಗ್ಗೆ ಮೆಚ್ಚುಗೆಯ ಮಾತು

ಕಾವ್ಯಾ ಮಾರನ್ ಬಗ್ಗೆ ಮಾತನಾಡಿದ ವೈ.ಜಿ. ಮಹೇಂದ್ರನ್, “ಅವರು ಸಾಮಾನ್ಯ ಹುಡುಗಿಯಲ್ಲ. ಸನ್ ರೈಸರ್ಸ್ ಹೈದರಾಬಾದ್ನಂತಹ ದೊಡ್ಡ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುವ ಸಾಮರ್ಥ್ಯ ಅವರಿಗಿದೆ. ತಂದೆಯ ವ್ಯವಹಾರ ಕೌಶಲ್ಯವನ್ನು ಅವರು ಪಡೆದಿದ್ದಾರೆ. ಅನಿರುದ್ಧ್ ಮತ್ತು ಕಾವ್ಯಾ ಒಳ್ಳೆಯ ಜೋಡಿ” ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಸಂದರ್ಶನ ವೈರಲ್ ಆಗಿದ್ದೇ ತಡ, ಇನ್ನೇನು ವದಂತಿ ನಿಜವಾಯ್ತು, ಕಾವ್ಯಾ-ಅನಿರುದ್ಧ್ ಮದುವೆ ಆಗೋದು ಕನ್ಫರ್ಮ್ ಎಂದು ಅಭಿಮಾನಿಗಳು ಸಂತೋಷ ವ್ಯಕ್ತಪಡಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್‌ನಲ್ಲಿರುವ ಈ ಸುದ್ದಿಗೆ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.

ಯಾರು ಕಾವ್ಯಾ ಮಾರನ್?

ಕಾವ್ಯಾ ಮಾರನ್, ಸನ್ ಗ್ರೂಪ್ ಮುಖ್ಯಸ್ಥ ಕಲಾನಿಧಿ ಮಾರನ್ ಅವರ ಪುತ್ರಿ. ಅವರು ಸನ್ ಟಿವಿ ನೆಟ್ವರ್ಕ್ ನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಗಿದ್ದು, ಐಪಿಎಲ್ ತಂಡ ಸನ್ ರೈಸರ್ಸ್ ಹೈದರಾಬಾದ್‌ನ ಜವಾಬ್ದಾರಿಯನ್ನೂ ನಿರ್ವಹಿಸುತ್ತಿದ್ದಾರೆ. ತಮಿಳುನಾಡಿನ ಪ್ರಬಲ ಮಾಧ್ಯಮ ಮತ್ತು ವ್ಯವಹಾರ ಸಾಮ್ರಾಜ್ಯವನ್ನು ನಡೆಸುತ್ತಿರುವ ಕಲಾನಿಧಿ ಮಾರನ್ ಅವರ ಕಿರಿಯ ಪುತ್ರಿಯಾಗಿರುವ ಕಾವ್ಯಾ, ತಮ್ಮ 30ರ ಹರೆಯದಲ್ಲೇ ದೊಡ್ಡ ಮಟ್ಟದ ಉದ್ಯಮವನ್ನು ನಿಭಾಯಿಸುತ್ತಿರುವ ಯುವ ವ್ಯವಸ್ಥಾಪಕಿಯಾಗಿದ್ದಾರೆ.

ಅನಿರುದ್ಧ್ ರವಿಚಂದರ್ ಯಾರು?

35 ವರ್ಷದ ಅನಿರುದ್ಧ್ ರವಿಚಂದರ್ ಭಾರತೀಯ ಚಿತ್ರರಂಗದ ಅತ್ಯಂತ ಜನಪ್ರಿಯ ಸಂಗೀತ ನಿರ್ದೇಶಕರಲ್ಲಿ ಒಬ್ಬರು. ‘ವಿಕ್ರಂ’, ‘ಜೈಲರ್’, ‘ಲಿಯೋ’, ‘ಕೊಲಮಾವು ಕೋಕಿಲಾ’ ಸೇರಿದಂತೆ ಹಲವು ಹಿಟ್ ಸಿನಿಮಾಗಳಿಗೆ ಸಂಗೀತ ನೀಡಿದ್ದಾರೆ. ಇವರ ಸಂಗೀತವು ತಮಿಳು, ತೆಲುಗು ಮತ್ತು ಹಿಂದಿ ಸಿನಿಮಾಗಳಲ್ಲೂ ಸೂಪರ್ ಹಿಟ್ ಆಗಿದ್ದು, ಅವರು ದಕ್ಷಿಣ ಭಾರತದ ಅತಿ ಹೆಚ್ಚು ಸಂಭಾವನೆ ಪಡೆಯುವ ಸಂಗೀತ ನಿರ್ದೇಶಕರ ಸಾಲಿನಲ್ಲಿದ್ದಾರೆ. ಅನಿರುದ್ಧ್ ಅವರ ‘ವೈಟ್ ವೈಟ್’ ಹಾಡು ಪಾನ್ ಇಂಡಿಯಾ ಮಟ್ಟದಲ್ಲಿ ಜನಪ್ರಿಯವಾಗಿದೆ.

ಇಬ್ಬರ ನಡುವಿನ ಸಂಬಂಧದ ಬಗ್ಗೆ ಏನು ಗೊತ್ತು?

ಕಳೆದ ಹಲವು ತಿಂಗಳುಗಳಿಂದ ಅನಿರುದ್ಧ್ ಮತ್ತು ಕಾವ್ಯಾ ಮಾರನ್ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ವಿವಿಧ ಕಾರ್ಯಕ್ರಮಗಳಲ್ಲಿ ಇಬ್ಬರೂ ಒಟ್ಟಿಗೆ ಕಂಡುಬಂದಿದ್ದು, ಅವರ ಸ್ನೇಹ ಸಂಬಂಧದ ಬಗ್ಗೆ ಸಾಕಷ್ಟು ಊಹಾಪೋಹಗಳಿಗೆ ಕಾರಣವಾಗಿತ್ತು. ಆದರೆ ಈವರೆಗೂ ಇಬ್ಬರೂ ತಮ್ಮ ಸಂಬಂಧ ಅಥವಾ ಮದುವೆ ಬಗ್ಗೆ ಅಧಿಕೃತವಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಅಭಿಮಾನಿಗಳ ಸಂತೋಷ

ವೈ.ಜಿ. ಮಹೇಂದ್ರನ್ ಹೇಳಿಕೆಯ ನಂತರ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಶುಭಾಶಯಗಳನ್ನು ಹಂಚಿಕೊಳ್ಳಲು ಆರಂಭಿಸಿದ್ದಾರೆ. “ಕಾವ್ಯಾ-ಅನಿರುದ್ಧ್ ಸೂಪರ್ ಕೂಲ್ ಕಪಲ್”, “ತಮಿಳು ಸಿನಿಮಾದ ಡ್ರೀಮ್ ಜೋಡಿ”, “ಅನಿರುದ್ಧ್ ಅಣ್ಣನಿಗೆ ಶುಭಾಶಯಗಳು” ಎಂದು ಹಲವಾರು ಪೋಸ್ಟ್ಗಳು ವೈರಲ್ ಆಗುತ್ತಿವೆ.

Exit mobile version