ಬಿ.ಎಸ್. ಸುಧೀಂದ್ರ ಹಾಗೂ ಆರ್. ನವೀನ್ ನಿರ್ಮಾಣದಲ್ಲಿ, ದಿನೇಶ್ ಬಾಬು ನಿರ್ದೇಶನದಲ್ಲಿ ‘ಅಮೃತವರ್ಷಿಣಿ 2’ ಚಿತ್ರ ಮೂಡಿಬರಲು ಸಜ್ಜಾಗುತ್ತಿದೆ. 1997ರಲ್ಲಿ ತೆರೆಕಂಡು ಅಪಾರ ಜನಮನ್ನಣೆ ಗಳಿಸಿದ್ದ ರಮೇಶ್ ಅರವಿಂದ್, ಸುಹಾಸಿನಿ ಹಾಗೂ ಶರತ್ ಬಾಬು ಅಭಿನಯದ, ದಿನೇಶ್ ಬಾಬು ನಿರ್ದೇಶನದ ‘ಅಮೃತವರ್ಷಿಣಿ’ ಚಿತ್ರದ ಮುಂದುವರಿದ ಭಾಗ ಇದಾಗಿದೆ. ಜನವರಿ 14ರ ಸಂಕ್ರಾಂತಿಯ ಶುಭ ಸಂದರ್ಭದಲ್ಲಿ ಚಿತ್ರದ ಚಿತ್ರೀಕರಣ ಆರಂಭವಾಗಲಿದ್ದು, ಕೊಡೈಕೆನಾಲ್ ಹಾಗೂ ಬೆಂಗಳೂರಿನಲ್ಲಿ ಚಿತ್ರೀಕರಣ ನಡೆಯಲಿದೆ.
ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದ ‘ಅಮೃತವರ್ಷಿಣಿ’ ಚಿತ್ರ ಇಂದಿಗೂ ಪ್ರೇಕ್ಷಕರ ಮನಸ್ಸಿನಲ್ಲಿ ಅಚ್ಚಳಿಯದ ನೆನಪಾಗಿ ಉಳಿದಿದೆ. ಭಾವನಾತ್ಮಕ ಕಥಾಹಂದರ, ಮನಮುಟ್ಟುವ ಸಂಗೀತ ಹಾಗೂ ಕಲಾವಿದರ ಮನೋಜ್ಞ ಅಭಿನಯದಿಂದಾಗಿ ಈ ಚಿತ್ರ ದೊಡ್ಡ ಮಟ್ಟದ ಯಶಸ್ಸು ಕಂಡಿತ್ತು.
ಈಗ ಸುಮಾರು ಮೂರು ದಶಕಗಳ ಬಳಿಕ ಚಿತ್ರದ ಎರಡನೇ ಭಾಗ ನಿರ್ಮಾಣವಾಗುತ್ತಿರುವುದು ವಿಶೇಷ. ಅದರಲ್ಲೂ ಮೂಲ ಚಿತ್ರದ ಪ್ರಮುಖ ಕಲಾವಿದರಾದ ರಮೇಶ್ ಅರವಿಂದ್ ಹಾಗೂ ಸುಹಾಸಿನಿ ‘ಅಮೃತವರ್ಷಿಣಿ 2’ರಲ್ಲೂ ಅಭಿನಯಿಸುತ್ತಿರುವುದು ಚಿತ್ರದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ.
ಮೂಲ ಚಿತ್ರದ ನಿರ್ದೇಶಕರಾದ ದಿನೇಶ್ ಬಾಬು ಅವರೇ ಈ ಚಿತ್ರಕ್ಕೂ ನಿರ್ದೇಶನದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಹೀಗಾಗಿ ಮೊದಲ ಚಿತ್ರದ ಭಾವನಾತ್ಮಕ ಸೊಗಡನ್ನು ಉಳಿಸಿಕೊಂಡು, ಹೊಸತನದೊಂದಿಗೆ ಎರಡನೇ ಭಾಗವನ್ನು ಪ್ರೇಕ್ಷಕರ ಮುಂದೆ ತರಲು ಚಿತ್ರತಂಡ ಸಿದ್ದತೆ ನಡೆಸುತ್ತಿದೆ.
ಜನಪ್ರಿಯ ನಟರಾದ ರಾಮಕೃಷ್ಣ ಹಾಗೂ ತಾರಾ ಅವರೂ ಕೂಡ ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಉಳಿದ ತಾರಾಬಳಗ ಹಾಗೂ ತಾಂತ್ರಿಕ ವರ್ಗದ ಕುರಿತು ಹೆಚ್ಚಿನ ಮಾಹಿತಿಯನ್ನು ಚಿತ್ರತಂಡ ಸದ್ಯದಲ್ಲೇ ಬಹಿರಂಗಪಡಿಸಲಿದೆ.
ಮೂಲ ಚಿತ್ರದ ಯಶಸ್ಸು ಹಾಗೂ ರಮೇಶ್ ಅರವಿಂದ್–ಸುಹಾಸಿನಿ ಅವರ ಜನಪ್ರಿಯ ಜೋಡಿಯ ಅಭಿನಯವನ್ನು ಮತ್ತೊಮ್ಮೆ ತೆರೆಮೇಲೆ ಕಾಣಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ‘ಅಮೃತವರ್ಷಿಣಿ 2’ ಕನ್ನಡ ಚಿತ್ರರಂಗದಲ್ಲಿ ಮತ್ತೊಂದು ಮಧುರ ಅನುಭವ ನೀಡುವ ನಿರೀಕ್ಷೆ ಮೂಡಿಸಿದೆ.
