ಜೈಲಿನಲ್ಲೇ ದರ್ಶನ್ ಆರೋಗ್ಯ ವಿಚಾರಿಸಿದ ಗೆಳತಿ ಪವಿತ್ರಾಗೌಡ

ಖ (3)

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಮತ್ತು ಪವಿತ್ರಾಗೌಡ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ನ್ಯಾಯಾಲಯದ ವಿಚಾರಣೆ ವೇಳೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮುಖಾಮುಖಿಯಾದ ದರ್ಶನ್ ಮತ್ತು ಪವಿತ್ರಾಗೌಡ ಅವರ ಆರೋಗ್ಯ ವಿಚಾರಿಸಿದ್ದಾರೆ. ಜೈಲಿನಲ್ಲಿರುವ ಗೆಳೆಯನ ಆರೋಗ್ಯದ ಬಗ್ಗೆ ಪವಿತ್ರಾಗೌಡ ಕಾಳಜಿ ವ್ಯಕ್ತಪಡಿಸಿದ್ದು, ದರ್ಶನ್ ಕೂಡ ಆಕೆಗೆ ಧೈರ್ಯ ತುಂಬಿದ್ದಾರೆ ಎನ್ನಲಾಗಿದೆ.

ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಈ ಮಾತುಕತೆಯಲ್ಲಿ ಇಬ್ಬರೂ ಕೆಲಕಾಲ ಪರಸ್ಪರ ಯೋಗಕ್ಷೇಮ ವಿಚಾರಿಸಿಕೊಂಡಿದ್ದಾರೆ. ವಿಚಾರಣೆ ನಡೆಯುತ್ತಿದ್ದ ಸಂದರ್ಭದಲ್ಲಿ ಇತರ ಆರೋಪಿಗಳು ಹೊರಹೋದ ಬಳಿಕ ದರ್ಶನ್ ಮತ್ತು ಪವಿತ್ರಾಗೌಡ ನಡುವೆ ಈ ಸಂಭಾಷಣೆ ನಡೆದಿದೆ ಎನ್ನಲಾಗಿದೆ. ವಿಡಿಯೋ ಕಾನ್ಫರೆನ್ಸ್ ಸಂಪರ್ಕ ಕಡಿತಗೊಂಡಿದೆ ಎಂದು ಭಾವಿಸಿ ಇಬ್ಬರೂ ಮಾತನಾಡಿದ್ದಾರೆ ಎನ್ನಲಾಗಿದೆ. ಆದರೆ ಸಂಪರ್ಕ ಮತ್ತೆ ಸಕ್ರಿಯವಾಗುತ್ತಿದ್ದಂತೆ ಇಬ್ಬರೂ ಮೌನವಾಗಿದ್ದಾರೆ ಎನ್ನಲಾಗಿದೆ.

‘ನೀ ಹೇಗಿದ್ದೀಯಾ? ಆರೋಗ್ಯ ಹೇಗಿದೆ?’

ವಿಡಿಯೋ ಕಾನ್ಫರೆನ್ಸ್‌ನಲ್ಲಿ ಮೊದಲು ಪವಿತ್ರಾಗೌಡ ದರ್ಶನ್ ಅವರ ಆರೋಗ್ಯದ ಬಗ್ಗೆ ವಿಚಾರಿಸಿದ್ದಾರೆ. ‘ನೀ ಹೇಗಿದ್ದೀಯಾ? ಆರೋಗ್ಯ ಹೇಗಿದೆ?’ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ದರ್ಶನ್ ‘ಓಕೆ, ಪರವಾಗಿಲ್ಲ’ ಎಂದು ಉತ್ತರಿಸಿದ್ದಾರೆ ಎನ್ನಲಾಗಿದೆ.

ಬಳಿಕ ‘ಊಟ ಆಯ್ತಾ? ಹೇಗಿದೆ ಬೆನ್ನು ನೋವು?’ ಎಂದು ಪವಿತ್ರಾ ಮತ್ತಷ್ಟು ಕಾಳಜಿಯಿಂದ ವಿಚಾರಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ದರ್ಶನ್, ಬೆನ್ನು ನೋವಿನ ಸಮಸ್ಯೆ ಇರುವುದಾಗಿ ತಿಳಿಸಿದ್ದಾರೆ. ‘ಬೆನ್ನು ಪೂರ್ತಿ ಮುರಿದು ಹೋಗಿದೆ, ನೋವಾಗುತ್ತಿದೆ’ ಎಂದು ತಮ್ಮ ಆರೋಗ್ಯದ ಸ್ಥಿತಿಯನ್ನು ವಿವರಿಸಿದ್ದಾರೆ ಎನ್ನಲಾಗಿದೆ.

ದರ್ಶನ್ ಅವರ ಬೆನ್ನು ನೋವಿನ ವಿಚಾರ ತಿಳಿದ ಪವಿತ್ರಾಗೌಡ, ಫಿಸಿಯೋಥೆರಪಿ ಚಿಕಿತ್ಸೆ ಆರಂಭವಾಗಿದೆಯೇ ಎಂದು ಪ್ರಶ್ನಿಸಿದ್ದಾರೆ. ಎಷ್ಟು ದಿನ ಚಿಕಿತ್ಸೆ ಪಡೆಯಬೇಕು ಎಂಬ ಬಗ್ಗೆಯೂ ವಿಚಾರಿಸಿದ್ದಾರೆ. ಇದಕ್ಕೆ ಉತ್ತರಿಸಿದ ದರ್ಶನ್, ಫಿಸಿಯೋಥೆರಪಿ ನಡೆಯುತ್ತಿದ್ದು, ಸದ್ಯ ಒಂದು ಸೆಷನ್ ಮಾತ್ರ ಪೂರ್ಣಗೊಂಡಿದೆ. ಇನ್ನೂ ಹೆಚ್ಚಿನ ಚಿಕಿತ್ಸೆ ಪಡೆಯಬೇಕಿದೆ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.

‘ಇನ್ನೆಷ್ಟು ದಿನ ಹೀಗೆ ಜೈಲಲ್ಲಿರಬೇಕು?’

‘ಇನ್ನೂ ಎಷ್ಟು ದಿನ ಹೀಗೆ ಜೈಲಿನಲ್ಲಿ ಇರಬೇಕು?’ ಎಂದು ಪವಿತ್ರಾಗೌಡ ದರ್ಶನ್ ಅವರನ್ನು ಪ್ರಶ್ನಿಸಿದ್ದಾರೆ. ಇದಕ್ಕೆ ದರ್ಶನ್ ಕೈಬೆರಳುಗಳ ಮೂಲಕ ನಾಲ್ಕು ತಿಂಗಳು ಎಂಬರ್ಥದಲ್ಲಿ ಸನ್ನೆ ಮಾಡಿದ್ದಾರೆ ಎನ್ನಲಾಗಿದೆ.

ಜೈಲಿನ ವಾತಾವರಣದಿಂದ ಬೇಸತ್ತಿರುವುದನ್ನು ವ್ಯಕ್ತಪಡಿಸಿದ ಪವಿತ್ರಾಗೌಡ, ‘ನನಗೆ ಇಲ್ಲಿ ಇರೋದಕ್ಕೆ ಆಗ್ತಾ ಇಲ್ಲ, ನರಕ ಆಗ್ತಿದೆ’ ಎಂದು ತಮ್ಮ ಅಸಮಾಧಾನ ತೋಡಿಕೊಂಡಿದ್ದಾರೆ ಎನ್ನಲಾಗಿದೆ.

ಹೈಕೋರ್ಟ್ ನ್ಯಾಯಾಧೀಶರ ಬದಲಾವಣೆ ಬಗ್ಗೆ ಚರ್ಚೆ?

ಪವಿತ್ರಾಗೌಡ ಅವರ ಮಾತಿಗೆ ಪ್ರತಿಕ್ರಿಯಿಸಿದ ದರ್ಶನ್, ಇನ್ನೂ ನಾಲ್ಕು ತಿಂಗಳು ಇರುವಂತೆ ಸೂಚಿಸಿ, ಹೈಕೋರ್ಟ್‌ನಲ್ಲಿ ನ್ಯಾಯಾಧೀಶರ ಬದಲಾವಣೆಯಾಗಬಹುದು ಎಂಬ ವಿಚಾರವನ್ನು ಪ್ರಸ್ತಾಪಿಸಿದ್ದಾರೆ ಎನ್ನಲಾಗಿದೆ.

ಇದಕ್ಕೆ ಪವಿತ್ರಾಗೌಡ, ‘ಯಾರು, ವಿಶ್ವಜಿತ್ ಶೆಟ್ಟಿ ಅವರಾ?’ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ದರ್ಶನ್ ಹೌದು ಎಂಬಂತೆ ತಲೆ ಆಡಿಸಿದ್ದಾರೆ ಎನ್ನಲಾಗಿದೆ.

ಬಳಿಕ ದರ್ಶನ್, ‘ಇಷ್ಟು ದಿನ ಇದ್ದೀಯಾ, ಇನ್ನೂ ನಾಲ್ಕರಿಂದ ಐದು ತಿಂಗಳು ಇರು. ಮೆಂಟಲಿ ಸ್ಟ್ರಾಂಗ್ ಇರು, ಹೃದಯ ಗಟ್ಟಿ ಮಾಡಿಕೊ’ ಎಂದು ಪವಿತ್ರಾಗೌಡಗೆ ಧೈರ್ಯ ತುಂಬಿದ್ದಾರೆ ಎನ್ನಲಾಗಿದೆ.

ದಚ್ಚು-ಪವಿ ಮಾತುಕತೆ ಮತ್ತೆ ಚರ್ಚೆಗೆ

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಮತ್ತು ಪವಿತ್ರಾಗೌಡ ಇಬ್ಬರೂ ಆರೋಪಿಗಳಾಗಿದ್ದು, ನ್ಯಾಯಾಂಗ ಪ್ರಕ್ರಿಯೆ ಮುಂದುವರಿದಿದೆ. ಈ ನಡುವೆ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದಿರುವ ಅವರ ಮಾತುಕತೆ ಇದೀಗ ಗಮನ ಸೆಳೆದಿದೆ.

 

Exit mobile version