‘ಪುಷ್ಪ 2’ ಕಾಲ್ತುಳಿತ ಸಂತ್ರಸ್ತನ ಮನೆಗೆ ಅಲ್ಲು ಕುಟುಂಬ ಭೇಟಿ: 2 ಕೋಟಿ ನೆರವು ಘೋಷಣೆ!

Untitled design 2026 05 07T161359.242

ಟಾಲಿವುಡ್ ನಟ ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ 2’ ಚಿತ್ರದ ಪ್ರೀಮಿಯರ್ ವೇಳೆ ನಡೆದ ಭೀಕರ ಕಾಲ್ತುಳಿತ ಪ್ರಕರಣ ಇಡೀ ದೇಶದ ಗಮನ ಸೆಳೆದಿತ್ತು. ಈ ದುರ್ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಬಾಲಕ ಶ್ರೀತೇಜ್ ಕುಟುಂಬವನ್ನು ಇದೀಗ ಅಲ್ಲು ಅರ್ಜುನ್ ಕುಟುಂಬ ಭೇಟಿ ಮಾಡಿ ಸಾಂತ್ವನ ಹೇಳಿದೆ. ಅಲ್ಲು ಅರ್ಜುನ್ ಪತ್ನಿ ಸ್ನೇಹಾ ರೆಡ್ಡಿ ಹಾಗೂ ತಂದೆ ಅಲ್ಲು ಅರವಿಂದ್ ಶ್ರೀತೇಜ್ ಮನೆಗೆ ತೆರಳಿ, ಕುಟುಂಬ ಸದಸ್ಯರೊಂದಿಗೆ ಮಾತುಕತೆ ನಡೆಸಿ ಬಾಲಕನ ಆರೋಗ್ಯ ವಿಚಾರಿಸಿದ್ದಾರೆ.

2024ರ ಡಿಸೆಂಬರ್ 4ರಂದು ಹೈದರಾಬಾದ್‌ನ ಸಂಧ್ಯಾ ಥಿಯೇಟರ್‌ನಲ್ಲಿ ‘ಪುಷ್ಪ 2’ ಚಿತ್ರದ ಪ್ರೀಮಿಯರ್ ಭರ್ಜರಿಯಾಗಿ ಆಯೋಜಿಸಲಾಗಿತ್ತು. ಈ ವೇಳೆ ಅಲ್ಲು ಅರ್ಜುನ್ ಆಗಮನದ ಸುದ್ದಿ ತಿಳಿದ ಅಭಿಮಾನಿಗಳು ಸಾವಿರಾರು ಸಂಖ್ಯೆಯಲ್ಲಿ ಥಿಯೇಟರ್ ಬಳಿ ಜಮಾಯಿಸಿದ್ದರು. ಜನಸಂದಣಿ ಹೆಚ್ಚಾದ ಪರಿಣಾಮ ಅಲ್ಲಿ ಕಾಲ್ತುಳಿತ ಉಂಟಾಗಿ ಅನೇಕರು ಗಾಯಗೊಂಡಿದ್ದರು. ಈ ದುರ್ಘಟನೆಯಲ್ಲಿ ಶ್ರೀತೇಜ್ ತೀವ್ರವಾಗಿ ಗಾಯಗೊಂಡಿದ್ದು, ಆತನ ತಾಯಿ ದುರ್ಘಟನೆಯಲ್ಲಿ ಮೃತಪಟ್ಟಿದ್ದರು.

ಮೆದುಳಿಗೆ ಗಂಭೀರ ಪೆಟ್ಟು ಬಿದ್ದಿದ್ದರಿಂದ ಶ್ರೀತೇಜ್ ಹಲವು ತಿಂಗಳುಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದನು. ಕೆಲಕಾಲ ವೆಂಟಿಲೇಟರ್ ಸಹಾಯದಲ್ಲೂ ಇರಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ವೈದ್ಯರ ನಿರಂತರ ಪ್ರಯತ್ನದಿಂದ ಇದೀಗ ಆತ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾನೆ. ಆದರೂ ಸಂಪೂರ್ಣ ಗುಣಮುಖನಾಗಲು ಇನ್ನೂ ಹೆಚ್ಚಿನ ಸಮಯ ಮತ್ತು ಚಿಕಿತ್ಸೆ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಘಟನೆ ನಡೆದ ದಿನದಿಂದಲೂ ಅಲ್ಲು ಅರ್ಜುನ್ ಕುಟುಂಬ ಮತ್ತು ‘ಪುಷ್ಪ 2’ ಚಿತ್ರದ ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್ ಶ್ರೀತೇಜ್ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಭರಿಸುತ್ತಿವೆ. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕವೂ ಪುನರ್ವಸತಿ ಕೇಂದ್ರದಲ್ಲಿ ವಿಶೇಷ ಚಿಕಿತ್ಸೆ ನೀಡಲಾಗುತ್ತಿದೆ.

ಶ್ರೀತೇಜ್ ಮನೆಗೆ ಭೇಟಿ ನೀಡಿದ ಸ್ನೇಹಾ ರೆಡ್ಡಿ ಹಾಗೂ ಅಲ್ಲು ಅರವಿಂದ್ ಕುಟುಂಬಕ್ಕೆ ಧೈರ್ಯ ತುಂಬಿದ್ದಾರೆ. ಈ ವೇಳೆ ಮಾತನಾಡಿದ ಅಲ್ಲು ಅರವಿಂದ್, “ಶ್ರೀತೇಜ್ ಸಂಪೂರ್ಣ ಚೇತರಿಸಿಕೊಳ್ಳುವವರೆಗೂ ನಾವು ನಿಮ್ಮೊಂದಿಗಿದ್ದೇವೆ. ಕುಟುಂಬ ಯಾವುದೇ ರೀತಿ ಚಿಂತೆ ಮಾಡಿಕೊಳ್ಳಬೇಡಿ” ಎಂದು ಭರವಸೆ ನೀಡಿದ್ದಾರೆ.

ಅಲ್ಲದೇ, ಶ್ರೀತೇಜ್ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಆತನ ಹೆಸರಿನಲ್ಲಿ 2 ಕೋಟಿ ರೂಪಾಯಿ ಠೇವಣಿ ಇಡಲಾಗಿದೆ. ಈ ಹಣದಿಂದ ಪ್ರತಿ ತಿಂಗಳು ಸುಮಾರು ₹1.5 ಲಕ್ಷ ಬಡ್ಡಿ ದೊರೆಯುವಂತೆ ವ್ಯವಸ್ಥೆ ಮಾಡಲಾಗಿದೆ.

ಶ್ರೀತೇಜ್ ತಂಗಿಯ ವಿದ್ಯಾಭ್ಯಾಸದ ಸಂಪೂರ್ಣ ಜವಾಬ್ದಾರಿಯನ್ನು ಅಲ್ಲು ಅರವಿಂದ್ ವಹಿಸಿಕೊಂಡಿದ್ದಾರೆ. “ಚೆನ್ನಾಗಿ ಓದು ಮಗಳೇ, ನಿನ್ನ ಶಿಕ್ಷಣದ ಸಂಪೂರ್ಣ ವೆಚ್ಚವನ್ನು ನಾನೇ ನೋಡಿಕೊಳ್ಳುತ್ತೇನೆ” ಎಂದು ಅವರು ಹೇಳಿದ್ದು, ಅವರ ಕುಟುಂಬಕ್ಕೆ ಹೊಸ ಭರವಸೆ ಮೂಡಿಸಿದೆ.

Exit mobile version