ಅಲ್ಲು ಅರ್ಜುನ್ ಮನೆಗೆ ಭೇಟಿ ನೀಡಿದ RCB ಸ್ಟಾರ್ ವೆಂಕಟೇಶ್ ಅಯ್ಯರ್: ಪುತ್ರನಿಗೆ ಸಿಕ್ತು ವಿಶೇಷ ಜೆರ್ಸಿ

Untitled design 2026 05 24T170900.856

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಸ್ಟಾರ್ ಆಟಗಾರ ವೆಂಕಟೇಶ್ ಅಯ್ಯರ್ ಅವರು ಟಾಲಿವುಡ್‌ನ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ನಿವಾಸಕ್ಕೆ ಭೇಟಿ ನೀಡಿದ್ದು, ಈ ವಿಶೇಷ ಕ್ಷಣಗಳ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿವೆ.

ಇತ್ತೀಚೆಗೆ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಆರ್‌ಸಿಬಿ ಸೋಲು ಕಂಡಿದ್ದರೂ, ವೆಂಕಟೇಶ್ ಅಯ್ಯರ್ ಅವರ ಸ್ಫೋಟಕ ಬ್ಯಾಟಿಂಗ್ ಅಭಿಮಾನಿಗಳ ಮನಗೆದ್ದಿತ್ತು. ಕೇವಲ 19 ಎಸೆತಗಳಲ್ಲಿ 44 ರನ್ ಸಿಡಿಸಿ ಆರ್‌ಸಿಬಿಗೆ ಭರ್ಜರಿ ಆರಂಭ ನೀಡಿದ್ದ ಅಯ್ಯರ್, ತಮ್ಮ ಆಕ್ರಮಣಕಾರಿ ಆಟದಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು.

ಪಂದ್ಯ ಮುಗಿದ ಕೆಲವೇ ಗಂಟೆಗಳಲ್ಲೇ ವೆಂಕಟೇಶ್ ಅಯ್ಯರ್ ಅವರು ಅಲ್ಲು ಅರ್ಜುನ್ ನಿವಾಸಕ್ಕೆ ಭೇಟಿ ನೀಡಿದ್ದು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿತು. ಈ ಭೇಟಿಯು, ಒಂದು ಪುಟ್ಟ ಅಭಿಮಾನಿಯ ಕನಸನ್ನು ನನಸಾಗಿಸಿದ ಕ್ಷಣವಾಗಿಯೂ ಉಳಿದಿದೆ.

ಅಲ್ಲು ಅರ್ಜುನ್ ಪುತ್ರ ಅಲ್ಲು ಆಯಾನ್ ಕ್ರಿಕೆಟ್ ಹಾಗೂ ವಿಶೇಷವಾಗಿ ಆರ್‌ಸಿಬಿ ತಂಡದ ದೊಡ್ಡ ಅಭಿಮಾನಿ ಎನ್ನಲಾಗುತ್ತಿದೆ. ಈ ವಿಚಾರ ತಿಳಿದಿದ್ದ ವೆಂಕಟೇಶ್ ಅಯ್ಯರ್, ಆರ್‌ಸಿಬಿ ತಂಡದ ಆಟಗಾರರ ಸಹಿ ಇರುವ ವಿಶೇಷ ಜರ್ಸಿಯನ್ನು ಆಯಾನ್‌ಗೆ ಉಡುಗೊರೆಯಾಗಿ ನೀಡಿದ್ದಾರೆ.

ಮಗನ ಮುಖದಲ್ಲಿದ್ದ ಆ ಸಂತೋಷವನ್ನು ಕಂಡು ನಟ ಅಲ್ಲು ಅರ್ಜುನ್ ಕೂಡ ಭಾವುಕರಾಗಿದ್ದಾರೆ. ಬಳಿಕ ಸಾಮಾಜಿಕ ಜಾಲತಾಣದ ಮೂಲಕ ವೆಂಕಟೇಶ್ ಅಯ್ಯರ್ ಅವರಿಗೆ ಧನ್ಯವಾದ ತಿಳಿಸಿದ ಅವರು, “ಆಯಾನ್‌ಗೆ ಇದು ತುಂಬಾ ವಿಶೇಷ ಕ್ಷಣ. ನಿಮ್ಮ ಪ್ರೀತಿಗೆ ಧನ್ಯವಾದಗಳು” ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಮುಂದಿನ ಪಂದ್ಯಗಳಲ್ಲಿ ಆರ್‌ಸಿಬಿ ತಂಡ ಹಾಗೂ ವೆಂಕಟೇಶ್ ಅಯ್ಯರ್ ಅವರಿಗೆ ಶುಭಾಶಯ ಕೋರಿದ್ದಾರೆ.

ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ಸಿನಿ ಮತ್ತು ಕ್ರಿಕೆಟ್ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. “ಪುಷ್ಪ ಮತ್ತು RCB ಒಂದೇ ಫ್ರೇಮ್‌ನಲ್ಲಿ”, “ಆಯಾನ್ ಲಕ್ಕಿ ಬಾಯ್” ಎಂಬ ಕಾಮೆಂಟ್‌ಗಳು ಹರಿದುಬರುತ್ತಿವೆ.

ಇನ್ನೊಂದೆಡೆ, ಸನ್‌ರೈಸರ್ಸ್ ವಿರುದ್ಧದ ಸೋಲಿನ ನಡುವೆಯೂ ಆರ್‌ಸಿಬಿ ತಂಡ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ಆವೃತ್ತಿಯಲ್ಲಿ ಸಮತೋಲನದ ತಂಡ ಹಾಗೂ ಬಲಿಷ್ಠ ಆಟಗಾರರ ನೆರವಿನಿಂದ ಅದ್ಭುತ ಪ್ರದರ್ಶನ ನೀಡುತ್ತಿರುವ ಬೆಂಗಳೂರು ತಂಡ ಈಗ ಪ್ಲೇಆಫ್ ಹಂತಕ್ಕೆ ಭರ್ಜರಿಯಾಗಿ ಎಂಟ್ರಿ ಕೊಟ್ಟಿದೆ.

Exit mobile version