125 ಕೋಟಿ ಲೂಟಿ ಮಾಡಿದ ಬಳಿಕವೂ ಸು ಫ್ರಮ್ ಸೋ ಹವಾ ಮಾತ್ರ ಕಿಂಚಿತ್ತೂ ಕಮ್ಮಿ ಆಗಿಲ್ಲ. ಯೆಸ್.. ಆ ಸಿನಿಮಾ ಥಿಯೇಟರ್‌ನಿಂದ ಓಟಿಟಿಗೂ ಬಂದಾಯ್ತು. ಆದ್ರೆ ಮೆಚ್ಚುವವರ ಸಂಖ್ಯೆ ಗಣನೀಯವಾಗಿ ಹೆಚ್ಚಳ ಆಗ್ತಿದೆ. ಸದ್ಯ ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ನಮ್ಮ ಸ್ಯಾಂಡಲ್‌ವುಡ್‌ನ ಸೆನ್ಸೇಷನ್ ರಾಜ್ ಬಿ ಶೆಟ್ಟಿಯನ್ನ ಮೀಟ್ ಮಾಡಿದ್ದಾರೆ. ಈ ಕುರಿತ ಸ್ಪೆಷಲ್ ಖಬರ್ ಇಲ್ಲಿದೆ ನೋಡಿ.
- ಬಾಲಿವುಡ್ ಕಿಲಾಡಿ ಮೀಟ್ಸ್ ಸ್ಯಾಂಡಲ್ವುಡ್ ಸೆನ್ಸೇಷನ್..!
- ಊಟಿಯಲ್ಲಿ ಅಕ್ಷಯ್-ರಾಜ್ ಶೆಟ್ಟಿ ಉಭಯ ಕುಶಲೋಪರಿ
- ಸು ಫ್ರಮ್ ಸೋ ಚಿತ್ರಕ್ಕೆ ಬಾಲಿವುಡ್ ಸ್ಟಾರ್ ಕ್ಲೀನ್ ಬೋಲ್ಡ್
- ಕಥೆ ಇದ್ರೆ ಹೇಳಿ.. ರಾಜ್ ಶೆಟ್ರಿಗೆ ಕರ್ಚೀಫ್ ಹಾಕಿದ ಅಕ್ಷಯ್
ಸು ಫ್ರಮ್ ಸೋ.. ಸೂಪರ್.. ಸುನಾಮಿ.. ಸಖತ್ ಸೆನ್ಸೇಷನ್ ಯೆಸ್.. ನಾಲ್ಕೂವರೆ ಐದು ಕೋಟಿ ಸಣ್ಣ ಬಜೆಟ್‌ನಲ್ಲಿ ತಯಾರಾದ ಈ ಕನ್ನಡ ಸಿನಿಮಾ, ವಿಶ್ವದಾದ್ಯಂತ ಸಂಚಲನ ಮೂಡಿಸಿತು. ಬಾಕ್ಸ್ ಆಫೀಸ್‌ನಲ್ಲಿ ಬರೋಬ್ಬರಿ 125 ಕೋಟಿ ರೂಪಾಯಿ ಲೂಟಿ ಮಾಡಿ, ಬಿಗ್ ಸ್ಟಾರ್ಸ್, ಬಿಗ್ ಪ್ರೊಡಕ್ಷನ್ ಹೌಸ್‌ಗಳ ಹುಬ್ಬೇರಿಸಿತು. ಅದರಲ್ಲೂ ಪರಭಾಷಿಗರಿಂದ ಮೆಚ್ಚುಗೆಗೆ ಪಾತ್ರವಾಯ್ತು.
ರಾಜ್ ಬಿ ಶೆಟ್ಟಿ ನಟಿಸಿ, ನಿರ್ಮಿಸಿದ ಈ ಸಿನಿಮಾ ಥಿಯೇಟರ್‌ನಲ್ಲಿ ಧೂಳೆಬ್ಬಿಸಿ ಓಟಿಟಿಗೆ ಬಂದ್ರೂ ಇಂದಿಗೂ ಸದ್ದು ಮಾಡ್ತಿದೆ. ಅದಕ್ಕೆ ಕಾರಣ ಚಿತ್ರದಲ್ಲಿರೋ ನಗುವಿನ ಟಾನಿಕ್. ಪಾತ್ರಗಳಲ್ಲಿರೋ ಜೀವಂತಿಕೆ. ಆ ಹಳ್ಳಿ ಸೊಗಡು. ಸ್ವಾಭಾವಿಕತೆಯ ಕೈಗನ್ನಡಿ. ಹೌದು.. ಇವೆಲ್ಲಾ ಕೂಡ ಸಿನಿಮಾದ ಬಹುದೊಡ್ಡ ಸಕ್ಸಸ್‌ಗೆ ಸಾಥ್ ನೀಡಿವೆ. ಪಕ್ಕದ ಟಾಲಿವುಡ್, ಮಾಲಿವುಡ್, ಕಾಲಿವುಡ್‌ನ ಸ್ಟಾರ್ಸ್, ಟೆಕ್ನಿಷಿಯನ್ಸ್ ಕೂಡ ಚಿತ್ರಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ರು. ಬಾಲಿವುಡ್ ಕೂಡ ಇದ್ರಿಂದ ಹೊರತಾಗಿಲ್ಲ.
ಅಜಯ್ ದೇವಗನ್ ಮನೆಯಲ್ಲೇ ಚಿತ್ರ ವೀಕ್ಷಿಸಿ, ಇಡೀ ಸು ಫ್ರಮ್ ಸೋ ಟೀಂನ ಶೂಟಿಂಗ್ ಸೆಟ್‌ಗೆ ಕರೆಸಿಕೊಂಡು, ಕೊಂಡಾಡಿದ್ರು. ಒಳ್ಳೆಯ ಕಥೆಗಳು ಇದ್ರೆ ದಯವಿಟ್ಟು ಹೇಳಿ, ನಾವು ನೀವು ಕೊಲ್ಯಾಬೊರೇಷನ್‌ನಲ್ಲಿ ಚಿತ್ರಗಳನ್ನ ಮಾಡೋಣ ಅಂತ ಓಪನ್ ಆಫರ್ ಕೂಡ ನೀಡಿದ್ರು. ಅದ್ರ ಬೆನ್ನಲ್ಲೀಗ ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ಕೂಡ ರಾಜ್ ಬಿ ಶೆಟ್ಟಿ ಹಾಗೂ ಅದ್ರ ಕಾರ್ಯಕಾರಿ ನಿರ್ಮಾಪಕ ಬಾಲು ಅವ್ರನ್ನ ಕರೆಸಿ, ಮನಸ್ಸಿನಿಂದ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಯೆಸ್.. ಊಟಿಯಲ್ಲಿ ನಮ್ಮ ಕನ್ನಡದ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ಸ್‌ನಲ್ಲಿ ಹೈವಾನ್ ಚಿತ್ರದ ಶೂಟಿಂಗ್ ನಡೆಯುತ್ತಿದ್ದು, ಈಗಾಗ್ಲೇ ಸು ಫ್ರಮ್ ಸೋ ಸಿನಿಮಾ ನೋಡಿರೋ ಅಕ್ಷಯ್ ಕುಮಾರ್, ರಾಜ್ ಬಿ ಶೆಟ್ಟಿಯನ್ನ ಅಲ್ಲಿಗೇ ಕರೆಸಿಕೊಂಡು ಕೊಂಡಾಡಿದ್ದಾರೆ. ಅಷ್ಟೇ ಅಲ್ಲ, ಒಳ್ಳೆಯ ಕಥೆಗಳು ಇದ್ರೆ ಹೇಳಿ ಶೆಟ್ರೇ.. ಸಿನ್ಮಾ ಮಾಡೋಣ ಅಂತಲೂ ಓಪನ್ ಆಫರ್ ನೀಡಿದ್ದಾರೆ.
ಕಥೆಯಲ್ಲಿ ಧಮ್ ಇದ್ರೆ ಚಿತ್ರ ಪ್ರೇಮಿಗಳು ಅಪ್ಪಿಕೊಳ್ತಾರೆ, ಒಪ್ಪಿಕೊಳ್ತಾರೆ ಅನ್ನೋದಕ್ಕೆ ಇದಕ್ಕಿಂತ ಜ್ವಲಂತ ನಿದರ್ಶನ ಮತ್ತೊಂದು ಬೇಕಿಲ್ಲ. ಬಾಲಿವುಡ್‌ನ ಸೂಪರ್ ಸ್ಟಾರ್‌ಗಳೇ ಕರಾವಳಿ ಕಲಾವಿದರ ಹಾಗೂ ತಂತ್ರಜ್ಞರ ಈ ಪ್ರಯೋಗಕ್ಕೆ ಈ ರೇಂಜ್‌ಗೆ ಬೋಲ್ಡ್ ಆಗಿರೋದು ನಿಜಕ್ಕೂ ಹೆಮ್ಮೆಯ ವಿಷಯ. ಚಿತ್ರ ಯಶಸ್ವಿ 50 ದಿನ ಕೂಡ ಪೂರೈಸಿದ್ದು, ಪಾರ್ಟ್-2 ಯಾವುದೇ ಕಾರಣಕ್ಕೂ ಬರಲ್ಲ ಅನ್ನೋದನ್ನ ಚಿತ್ರತಂಡ ಸ್ಪಷ್ಟ ಪಡಿಸಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್
