ಬದಾಮಿಯಲ್ಲಿ ನಡೆದ ಘಟನೆ ನೆನೆದ ನಟ ನಾಗಾರ್ಜುನ; ಕನ್ನಡಿಗರ ಮಾನವೀಯತೆಗೆ ಸಲಾಂ

Image 2dbabde0

ತೆಲುಗು ಚಿತ್ರರಂಗದ ಖ್ಯಾತ ನಟ ಅಕ್ಕಿನೇನಿ ನಾಗಾರ್ಜುನ ಅವರು ತಮ್ಮ ಸಿನಿ ಬದುಕಿನ ಹಲವು ನೆನಪುಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿರುತ್ತಾರೆ. ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಅವರು ಕರ್ನಾಟಕದ ಜನರ ಪ್ರೀತಿ, ಆತಿಥ್ಯ ಮತ್ತು ಸಹಾಯ ಮನೋಭಾವವನ್ನು ಸ್ಮರಿಸಿದ್ದು, ಕನ್ನಡಿಗರ ಬಗ್ಗೆ ಮನಸಾರೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನಾಗಾರ್ಜುನ ಅವರು ಕೇವಲ ನಟರಷ್ಟೇ ಅಲ್ಲ, ನಿರ್ಮಾಪಕ ಹಾಗೂ ಯಶಸ್ವಿ ಉದ್ಯಮಿಯೂ ಹೌದು. ತೆಲುಗು ಚಿತ್ರರಂಗದಲ್ಲಿ ಹಲವು ದಶಕಗಳಿಂದ ತಮ್ಮದೇ ಆದ ಛಾಪು ಮೂಡಿಸಿರುವ ಅವರು, ಅನೇಕ ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ರೊಮ್ಯಾಂಟಿಕ್ ಪಾತ್ರಗಳಿಂದ ಹಿಡಿದು ಭಕ್ತಿಪ್ರಧಾನ ಸಿನಿಮಾಗಳವರೆಗೆ ವಿಭಿನ್ನ ಪಾತ್ರಗಳಲ್ಲಿ ನಟಿಸಿ ಪ್ರೇಕ್ಷಕರ ಮನ ಗೆದ್ದಿದ್ದಾರೆ.

2012ರಲ್ಲಿ ಬಿಡುಗಡೆಯಾದ ‘ಶ್ರೀ ಶಿರಡಿ ಸಾಯಿ’ ಚಿತ್ರದ ಚಿತ್ರೀಕರಣದ ವೇಳೆ ನಡೆದ ಘಟನೆಯನ್ನು ಅವರು ಈ ಸಂದರ್ಭದಲ್ಲಿ ನೆನಪಿಸಿಕೊಂಡಿದ್ದಾರೆ. ಈ ಸಿನಿಮಾದ ಕೆಲವು ಪ್ರಮುಖ ದೃಶ್ಯಗಳನ್ನು ಕರ್ನಾಟಕದ ಐತಿಹಾಸಿಕ ನಗರ ಬದಾಮಿಯಲ್ಲಿ ಚಿತ್ರೀಕರಿಸಲಾಗಿತ್ತು. ಶೂಟಿಂಗ್‌ಗಾಗಿ ಹೈದರಾಬಾದ್‌ನಿಂದ ಬದಾಮಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಅವರಿಗೆ ಅನಿರೀಕ್ಷಿತ ಅನುಭವವೊಂದು ಎದುರಾಗಿತ್ತು.

ಆ ಸಮಯದಲ್ಲಿ ಜಿಪಿಎಸ್ ಹಾಗೂ ಗೂಗಲ್ ಮ್ಯಾಪ್‌ಗಳು ಈಗಿನಷ್ಟು ನಿಖರವಾಗಿರಲಿಲ್ಲ. ದಾರಿ ತಪ್ಪಿದ ನಾಗಾರ್ಜುನ ಅವರ ಕಾರು ಒಂದು ಒಳನಾಡು ರಸ್ತೆಯ ಮೂಲಕ ಸಣ್ಣ ಹಳ್ಳಿಯೊಂದಕ್ಕೆ ತಲುಪಿತ್ತು. ಅಲ್ಲಿ ಅವರಿಗೆ ಸರಿಯಾದ ಮಾರ್ಗದ ಬಗ್ಗೆ ಗೊಂದಲ ಉಂಟಾಗಿತ್ತು. ಸಹಾಯಕ್ಕಾಗಿ ಹಳ್ಳಿಯ ಜನರನ್ನು ಸಂಪರ್ಕಿಸಿದಾಗ ಅವರು ತೋರಿದ ಆತ್ಮೀಯತೆ ಮತ್ತು ಪ್ರೀತಿಯನ್ನು ನಾಗಾರ್ಜುನ ಇಂದಿಗೂ ಮರೆಯಲಾಗದು.

ತಾವು ಯಾರು ಎಂಬುದು ಆ ಗ್ರಾಮಸ್ಥರಿಗೆ ಗೊತ್ತಿರಲಿಲ್ಲ. ಆದರೂ ಅವರು ಆತ್ಮೀಯವಾಗಿ ಸ್ವಾಗತಿಸಿ, ಊಟದ ವ್ಯವಸ್ಥೆ ಮಾಡಿ, ಆರೋಗ್ಯ ಹಾಗೂ ಯೋಗಕ್ಷೇಮ ವಿಚಾರಿಸಿದರು. ಬಳಿಕ ಒಬ್ಬ ಗ್ರಾಮಸ್ಥ ತನ್ನ ಬೈಕ್‌ನಲ್ಲಿ ಮುಂದೆ ಹೋಗಿ ಸರಿಯಾದ ದಾರಿಯನ್ನು ತೋರಿಸಿ ಸಹಾಯ ಮಾಡಿದನು ಎಂದು ನಾಗಾರ್ಜುನ ತಿಳಿಸಿದ್ದಾರೆ.

ಈ ಅನುಭವ ತಮ್ಮ ಬದುಕಿನ ಅತ್ಯಂತ ಅಮೂಲ್ಯ ನೆನಪುಗಳಲ್ಲಿ ಒಂದಾಗಿದೆ ಎಂದು ಅವರು ಹೇಳಿದ್ದಾರೆ. ಹಳ್ಳಿಗಳ ಜನರ ಸರಳತೆ, ಮಾನವೀಯತೆ ಮತ್ತು ಸಹಾಯ ಮಾಡುವ ಗುಣ ಇಂದಿಗೂ ತಮ್ಮ ಮನಸ್ಸಿನಲ್ಲಿ ಉಳಿದಿದೆ ಎಂದು ಅವರು ಭಾವುಕರಾಗಿ ನೆನಪಿಸಿಕೊಂಡಿದ್ದಾರೆ.

ನಗರ ಜೀವನದಲ್ಲಿ ಇಂತಹ ನಿಸ್ವಾರ್ಥ ಪ್ರೀತಿ ಮತ್ತು ಆತಿಥ್ಯ ವಿರಳವಾಗುತ್ತಿರುವ ಈ ಕಾಲದಲ್ಲಿ, ಕರ್ನಾಟಕದ ಹಳ್ಳಿಯ ಜನರು ತೋರಿದ ಮಾನವೀಯತೆ ತಮ್ಮ ಹೃದಯವನ್ನು ಸ್ಪರ್ಶಿಸಿತ್ತು ಎಂದು ನಾಗಾರ್ಜುನ ಹೇಳಿದ್ದಾರೆ. 

Exit mobile version