ನವದೆಹಲಿ: ಬಾಲಿವುಡ್ ನಟ ಗೋವಿಂದಾ ಮತ್ತು ಅವರ ಪತ್ನಿ ಸುನೀತಾ ಅಹುಜಾ ನಡುವಿನ ದಾಂಪತ್ಯ ಕಲಹ ಹಾಗೂ ವಿಚ್ಛೇದನದ ವದಂತಿಗಳಿಗೆ ಇದೀಗ ಹೊಸ ತಿರುವು ಸಿಕ್ಕಿದೆ. ಗೋವಿಂದಾ ವಿರುದ್ಧ ಸುನೀತಾ ಸಲ್ಲಿಸಿದ್ದ ವಿಚ್ಛೇದನ ಅರ್ಜಿಯನ್ನು ಹಿಂಪಡೆದಿದ್ದಾರೆ ಎಂದು ಗೋವಿಂದಾ ಅವರ ಮ್ಯಾನೇಜರ್ ಶಶಿ ಸಿನ್ಹಾ ಮಾಧ್ಯಮಗಳಿಗೆ ಖಚಿತಪಡಿಸಿದ್ದಾರೆ. ಈ ಬೆಳವಣಿಗೆಯಿಂದ ಹಲವು ದಿನಗಳಿಂದ ಚರ್ಚೆಯಲ್ಲಿದ್ದ ದಂಪತಿಯ ವಿಚ್ಛೇದನ ವಿಚಾರಕ್ಕೆ ಸದ್ಯ ಬ್ರೇಕ್ ಬಿದ್ದಂತಾಗಿದೆ.
ಇತ್ತೀಚೆಗೆ ಸುನೀತಾ ಅಹುಜಾ ಅವರು ತಮ್ಮ ವಕೀಲರು ಹಾಗೂ ಪುತ್ರ ಯಶವರ್ಧನ್ ಅಹುಜಾ ಅವರೊಂದಿಗೆ ಮುಂಬೈನ ಬಾಂದ್ರಾ ಕುಟುಂಬ ನ್ಯಾಯಾಲಯದ ಆವರಣದಲ್ಲಿ ಕಾಣಿಸಿಕೊಂಡಿದ್ದರು. ಸಾಮಾನ್ಯವಾಗಿ ಮಾಧ್ಯಮಗಳ ಮುಂದೆ ಆತ್ಮವಿಶ್ವಾಸದಿಂದ ಕಾಣಿಸಿಕೊಳ್ಳುತ್ತಿದ್ದ ಸುನೀತಾ, ಈ ಬಾರಿ ಕೊಂಚ ಭಾವುಕರಾಗಿ ಕಾರಿನತ್ತ ತೆರಳಿದ ದೃಶ್ಯ ಗಮನ ಸೆಳೆದಿತ್ತು. ಇದರ ಬೆನ್ನಲ್ಲೇ ಅವರು ವಿಚ್ಛೇದನ ಅರ್ಜಿಯನ್ನು ಹಿಂಪಡೆದಿರುವ ಮಾಹಿತಿ ಹೊರಬಂದಿದೆ.
ಕಳೆದ ಕೆಲವು ಸಮಯದಿಂದ ಗೋವಿಂದಾ ಮತ್ತು ಸುನೀತಾ ನಡುವೆ ಸಾರ್ವಜನಿಕವಾಗಿಯೇ ವಾಕ್ಸಮರ ನಡೆಯುತ್ತಿತ್ತು. ಇತ್ತೀಚೆಗೆ ಗೋವಿಂದಾ ಅವರು ತಮ್ಮ ಸಹನಟಿಯೊಂದಿಗೆ ಕಾಣಿಸಿಕೊಂಡಿದ್ದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದ್ದವು. ಈ ಕುರಿತು ಪ್ರತಿಕ್ರಿಯಿಸಿದ್ದ ಸುನೀತಾ, ಗೋವಿಂದಾ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ತಮ್ಮ ಮಗಳ ವಯಸ್ಸಿನ ಯುವತಿಯೊಂದಿಗೆ ಓಡಾಡುತ್ತಿರುವುದಾಗಿ ಆರೋಪಿಸಿ, ಕಟುವಾದ ಪದಗಳಲ್ಲಿ ಪತಿಯನ್ನು ಟೀಕಿಸಿದ್ದರು.
ಸುನೀತಾ ಅವರ ಹೇಳಿಕೆಗಳಿಗೆ ಗೋವಿಂದಾ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದರು. ಸಾರ್ವಜನಿಕವಾಗಿ ಕೀಳುಮಟ್ಟದ ಭಾಷೆ ಬಳಸುವುದು ಇಬ್ಬರ ಗೌರವಕ್ಕೂ ಧಕ್ಕೆ ತರುತ್ತದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದರು. ಅಲ್ಲದೆ, ತಮ್ಮ ವೃತ್ತಿಜೀವನದಲ್ಲಿ ಪತ್ನಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂಬ ಆರೋಪವನ್ನೂ ಮಾಡಿದ್ದರು.
ಗೋವಿಂದಾ ಮತ್ತು ಅವರ ಸಹನಟಿ ಕೋಮಲ್ ರಾಣಿ ನಡುವಿನ ಆಪ್ತತೆಯ ಕುರಿತ ವದಂತಿಗಳೂ ದಂಪತಿಯ ನಡುವಿನ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿದ್ದವು ಎನ್ನಲಾಗಿದೆ. ಆದರೆ ಇದೀಗ ಸುನೀತಾ ವಿಚ್ಛೇದನ ಅರ್ಜಿಯನ್ನು ಹಿಂಪಡೆದಿರುವುದು ದಂಪತಿ ಮತ್ತೆ ಒಟ್ಟಾಗಿ ಮುಂದುವರಿಯಲಿದ್ದಾರೆಯೇ ಎಂಬ ಕುತೂಹಲ ಮೂಡಿಸಿದೆ.
ಗೋವಿಂದಾ ಮತ್ತು ಸುನೀತಾ 1987ರಲ್ಲಿ ವಿವಾಹವಾಗಿದ್ದು, ಟೀನಾ ಹಾಗೂ ಯಶವರ್ಧನ್ ಎಂಬ ಇಬ್ಬರು ಮಕ್ಕಳಿದ್ದಾರೆ. ಹಲವು ವರ್ಷಗಳ ದಾಂಪತ್ಯದ ಬಳಿಕ ಎದುರಾಗಿದ್ದ ಕಲಹ ಮತ್ತು ವಿಚ್ಛೇದನದ ಚರ್ಚೆ ಇದೀಗ ಹೊಸ ಬೆಳವಣಿಗೆಯೊಂದಿಗೆ ತಾತ್ಕಾಲಿಕವಾಗಿ ಅಂತ್ಯಗೊಂಡಿದೆ.
