ಮುಂಬೈ, ನವೆಂಬರ್ 28: ಬಾಲಿವುಡ್‌ನ ಅತ್ಯಂತ ಸುಂದರ ಮತ್ತು ಪ್ರಭಾವಿ ನಟಿಯರಲ್ಲಿ ಒಬ್ಬರಾದ ಐಶ್ವರ್ಯಾ ರೈ ಬಚ್ಚನ್ ಮತ್ತೊಮ್ಮೆ ಸಾಮಾಜಿಕ ಜಾಗೃತಿಯ ಕೇಂದ್ರಬಿಂದುವಾಗಿದ್ದಾರೆ. ಮಹಿಳೆಯರ ಮೇಲೆ ನಡೆಯುತ್ತಿರುವ ಬೀದಿ ಕಿರುಕುಳದ ವಿರುದ್ಧ ಆಕೆ ಧೈರ್ಯವಾಗಿ ಧ್ವನಿ ಎತ್ತಿದ್ದು, ಅವರ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಲೋರಿಯಲ್ ಪ್ಯಾರಿಸ್ ಬ್ರ್ಯಾಂಡ್‌ನ ಜಾಗತಿಕ ಅಂಬಾಸಿಡರ್ ಆಗಿರುವ ಐಶ್ವರ್ಯಾ ಇತ್ತೀಚೆಗೆ ನಡೆದ Stand Up Against Street Harassment ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ್ದರು. ಈ ಸಂದರ್ಭದಲ್ಲಿ ಆಕೆ ಮಹಿಳೆಯರಿಗೆ ನೇರವಾಗಿ ಸಂದೇಶ ರವಾನಿಸಿದರು:
“ಯಾರಿಂದಲೂ ದೂರ ನೋಡಬೇಡಿ. ನೇರವಾಗಿ ನಿಂತುಕೊಳ್ಳಿ. ಆತ್ಮವಿಶ್ವಾಸದಿಂದ ನಿಂತುಕೊಳ್ಳಿ. ನಿಮ್ಮ ಘನತೆಯನ್ನು ಎಂದಿಗೂ ರಾಜಿ ಮಾಡಿಕೊಳ್ಳಬೇಡಿ. ನಿಮ್ಮನ್ನು ನೀವು ಅನುಮಾನಿಸಬೇಡಿ. ನಿಮ್ಮ ಉಡುಗೆಯನ್ನು ದೂಷಿಸಬೇಡಿ. ನಿಮ್ಮ ಲಿಪ್‌ಸ್ಟಿಕ್‌ನ್ನು ದೂಷಿಸಬೇಡಿ. ಬೀದಿ ಕಿರುಕುಳ ನಿಮ್ಮ ತಪ್ಪಲ್ಲ!”
ಈ ಮಾತುಗಳು ಕೇವಲ ಭಾಷಣದ ಭಾಗವಲ್ಲ, ಭಾರತದಲ್ಲಿ ಪ್ರತಿದಿನ ಲಕ್ಷಾಂತರ ಮಹಿಳೆಯರು ಎದುರಿಸುತ್ತಿರುವ ನೋವಿನ ಸತ್ಯವಾಗಿವೆ. ಸಾಮಾನ್ಯವಾಗಿ ಕಿರುಕುಳಕ್ಕೊಳಗಾದಾಗ “ನೀನು ಯಾವ ಬಟ್ಟೆ ಧರಿಸಿದ್ದೆ ?”, “ಯಾಕೆ ರಾತ್ರಿ ಹೊರಗಡೆ ಹೋದೆ?”, “ಲಿಪ್‌ಸ್ಟಿಕ್ ಹಚ್ಚಿಕೊಂಡಿದ್ದಕ್ಕೋ ?” ಎಂಬ ಪ್ರಶ್ನೆಗಳಿಂದ ಮಹಿಳೆಯನ್ನೇ ಅಪರಾಧಿಯನ್ನಾಗಿ ಮಾಡುವ ಸಂಸ್ಕೃತಿಯನ್ನು ಐಶ್ವರ್ಯಾ ನೇರವಾಗಿ ಪ್ರಶ್ನಿಸಿದ್ದಾರೆ.
ಲೋರಿಯಲ್ ಪ್ಯಾರಿಸ್ ಮತ್ತು NGO ‘Hollaback!’ ಸಂಯುಕ್ತವಾಗಿ ನಡೆಸುತ್ತಿರುವ ಈ ಅಭಿಯಾನದಲ್ಲಿ ಐಶ್ವರ್ಯಾ ಈಗಾಗಲೇ 25 ವರ್ಷಗಳಿಂದ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದಾರೆ. ಆದರೆ ಈ ಬಾರಿ ಅವರ ಸಂದೇಶ ಕೇವಲ ಸೌಂದರ್ಯ ಉತ್ಪನ್ನದ ಜಾಹೀರಾತಿಗೆ ಸೀಮಿತವಾಗದೆ, ಮಹಿಳಾ ಸಬಲೀಕರಣದ ಶಕ್ತಿಶಾಲಿ ಘೋಷಣೆಯಾಗಿ ಪರಿಣಮಿಸಿದೆ.
ಇನ್‌ಸ್ಟಾಗ್ರಾಮ್, X ಮತ್ತು ಇತರ ಪ್ಲಾಟ್‌ಫಾರ್ಮ್‌ಗಳಲ್ಲಿ ಈ ವೀಡಿಯೊ ಲಕ್ಷಾಂತರ ವೀಕ್ಷಣೆಗಳನ್ನು ಪಡೆದಿದೆ. ಅಭಿಮಾನಿಗಳು ಆಕೆಯನ್ನು ನಿಜವಾದ ಬುದ್ಧಿವಂತ ಮತ್ತು ಸುಂದರಿ ಎಂದು ಕಾಮೆಂಟ್ ಮೂಲಕ ಅವರಿಗೆ ಸಾಥ್ ನೀಡಿದ್ದಾರೆ.
ಭಾರತದಲ್ಲಿ 2023ರ NCRB ಅಂಕಿಅಂಶಗಳ ಪ್ರಕಾರ ಮಹಿಳೆಯರ ವಿರುದ್ಧದ ಅಪರಾಧಗಳಲ್ಲಿ ಬೀದಿ ಕಿರುಕುಳ ಮತ್ತು ಸ್ತ್ರೀ ದೌರ್ಜನ್ಯ ದಿನನಿತ್ಯದ ಸಮಸ್ಯೆಯಾಗಿ ಉಳಿದಿದೆ. ಆದರೆ ಇಂತಹ ಘಟನೆಗಳಲ್ಲಿ ಶಿಕ್ಷಾರ್ಹ ಶೇ.1ಕ್ಕಿಂತ ಕಡಿಮೆ ಜನರಿಗೆ ಶಿಕ್ಷೆಯಾಗುತ್ತಿದೆ. ಇದಕ್ಕೆ ಮುಖ್ಯ ಕಾರಣ ಸಮಾಜದಲ್ಲಿ “ತಾನೇ ತಪ್ಪು ಮಾಡಿಕೊಂಡಳು” ಎಂಬ ತಪ್ಪು ಕಲ್ಪನೆ. ಐಶ್ವರ್ಯಾ ರೈ ಅವರ ಈ ಸ್ಪಷ್ಟ ಹೇಳಿಕೆ ಆ ತಪ್ಪು ಕಲ್ಪನೆಯನ್ನು ಸರಿಪಡಿಸುವ ಶಕ್ತಿ ಹೊಂದಿದೆ.
ಐಶ್ವರ್ಯಾ ರೈ ಕೇವಲ ಸೌಂದರ್ಯದ ಸಂಕೇತವಲ್ಲ, ಧೈರ್ಯ ಮತ್ತು ಆತ್ಮವಿಶ್ವಾಸದ ಸಂಕೇತ ಕೂಡ. ಈ ವೀಡಿಯೊ ಪ್ರತಿ ಹುಡುಗಿ, ಪ್ರತಿ ಮಹಿಳೆ ತಪ್ಪದೇ ನೋಡಬೇಕಾದ ಸಂದೇಶವಾಗಿದೆ.
