ಚೆನ್ನೈ: ರಾಜಕೀಯ ಟೀಕೆಗಳ ಭರದಲ್ಲಿ ಸಂಸದೀಯ ಘನತೆಯನ್ನು ಮರೆತ ಎಐಎಡಿಎಂಕೆ ಸಂಸದ ಸಿ.ವಿ. ಷಣ್ಮುಗಂ ಅವರ ಅಸಭ್ಯ ಮಾತುಗಳು ಈಗ ದಕ್ಷಿಣ ಭಾರತ ಚಿತ್ರರಂಗದಲ್ಲಿ ಸಂಚಲನ ಮೂಡಿಸಿವೆ. ಲೇಡಿ ಸೂಪರ್‌ಸ್ಟಾರ್ ನಯನತಾರಾ ಅವರ ಹೆಸರನ್ನು ಬಳಸಿ ನೀಡಿದ ಅವಹೇಳನಕಾರಿ ಹೇಳಿಕೆಯ ವಿರುದ್ಧ ದಕ್ಷಿಣ ಭಾರತ ಚಲನಚಿತ್ರ ಕಲಾವಿದರ ಸಂಘ (ನಡಿಗರ್ ಸಂಗಂ) ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಬೇಷರತ್ ಕ್ಷಮೆಯಾಚನೆಗೆ ಆಗ್ರಹಿಸಿದೆ.
ವಿವಾದದ ಕಿಡಿ ಹಚ್ಚಿದ ಆ ಒಂದು ಹೇಳಿಕೆ
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ಕನಸುಗಳನ್ನು ಹಂಚಿಕೊಳ್ಳಿ ಎಂಬ ಆಶ್ವಾಸನೆಯನ್ನು ಟೀಕಿಸುವ ಭರದಲ್ಲಿ ಸಂಸದ ಷಣ್ಮುಗಂ ವಿವೇಚನೆ ಕಳೆದುಕೊಂಡು ಮಾತನಾಡಿದ್ದಾರೆ.
ಸಂಸದ ಷಣ್ಮುಗಂ ಮಾತನಾಡುತ್ತಾ.. ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರು ಕನಸು ಕಾಣಲು ಹೇಳಿದರು. ಈಗ ಸ್ಟಾಲಿನ್ ಅವರು ನಿಮ್ಮ ಕನಸುಗಳನ್ನು ನಾವು ಈಡೇರಿಸುತ್ತೇವೆ ಎನ್ನುತ್ತಿದ್ದಾರೆ. ಒಂದು ವೇಳೆ ನನಗೆ ನಟಿ ನಯನತಾರಾ ಜೊತೆ ಮದುವೆಯಾಗಬೇಕೆಂಬ ಕನಸಿದ್ದರೆ, ಸ್ಟಾಲಿನ್ ಅವರು ಅದನ್ನು ಈಡೇರಿಸುತ್ತಾರಾ ? ಯಾರಾದರೂ ಹೋಗಿ ನನಗೆ ನಯನತಾರಾ ಜೊತೆ ಮದುವೆ ಮಾಡಿಸಿ ಎಂದರೆ ಅವರು ಮಾಡಿಸುತ್ತಾರಾ ? ಎಂದು ಷಣ್ಮುಗಂ ವ್ಯಂಗ್ಯವಾಗಿ ಮಾತಾಡಿದ್ದಾರೆ. ಈ ವೇಳೆ ವೇದಿಕೆಯಲ್ಲಿದ್ದ ಇತರ ನಾಯಕರು ನಗುತ್ತಾ ಇದನ್ನು ಸಂಭ್ರಮಿಸಿದ್ದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.
@thenewsminute : when are you going to report against CV Shanmugam, ADMK? pic.twitter.com/1QFwpWYBIL
— Vetri S M (@Vetrism29) March 17, 2026
ಕಲಾವಿದರ ಸಂಘದ ತೀವ್ರ ಖಂಡನೆ
ನಯನತಾರಾ ಅವರಂತಹ ಹಿರಿಯ ಮತ್ತು ಗೌರವಾನ್ವಿತ ನಟಿಯ ಹೆಸರನ್ನು ಇಂತಹ ಕೀಳುಮಟ್ಟದ ಉದಾಹರಣೆಗೆ ಬಳಸಿದ್ದನ್ನು ಕಲಾವಿದರ ಸಂಘವು ಬಲವಾಗಿ ಖಂಡಿಸಿದೆ. ಸಂಸದರಿಗೆ ಅಧಿಕೃತ ಪತ್ರ ಬರೆದಿರುವ ಸಂಘವು, ಒಬ್ಬ ಜವಾಬ್ದಾರಿಯುತ ಜನಪ್ರತಿನಿಧಿಯಾಗಿ ನೀವು ಮಹಿಳೆಯರ ಬಗ್ಗೆ ಮಾತನಾಡುವ ರೀತಿ ಅತ್ಯಂತ ನಾಚಿಕೆಗೇಡಿನ ಸಂಗತಿ. ಸಂಸದರು ಎಂಬುದನ್ನ ಮರೆತು ನಮ್ಮ ಸಹೋದ್ಯೋಗಿಯ ಬಗ್ಗೆ ಅಶ್ಲೀಲವಾಗಿ ಮಾತನಾಡಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡಿದೆ.
ಚಿತ್ರರಂಗದ ಮಹಿಳೆಯರನ್ನು ಕೇವಲ ಹಾಸ್ಯದ ವಸ್ತುವಿನಂತೆ ಬಿಂಬಿಸುವುದು ಖಂಡನೀಯ ಎಂದು ಹೇಳಿರುವ ಸಂಘವು, ಸಿ.ವಿ. ಷಣ್ಮುಗಂ ಅವರು ಕೂಡಲೇ ಬಹಿರಂಗವಾಗಿ ಬೇಷರತ್ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದೆ. ಅಲ್ಲದೆ, ಭವಿಷ್ಯದಲ್ಲಿ ಯಾವುದೇ ಕಲಾವಿದರ ಬಗ್ಗೆ ಅಥವಾ ಮಹಿಳೆಯರ ಬಗ್ಗೆ ಇಂತಹ ಹಗುರವಾದ ಹೇಳಿಕೆಗಳನ್ನು ನೀಡಬಾರದು ಎಂದು ಎಚ್ಚರಿಕೆ ನೀಡಿದೆ.
ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ನಯನತಾರಾ ಅಭಿಮಾನಿಗಳು ಸಂಸದರ ವಿರುದ್ಧ ಅಭಿಯಾನ ಆರಂಭಿಸಿದ್ದು, ರಾಜಕೀಯ ಲಾಭಕ್ಕಾಗಿ ಮಹಿಳೆಯರ ಘನತೆಗೆ ಧಕ್ಕೆ ತರುವ ವರ್ತನೆಯನ್ನು ನಿಲ್ಲಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ.





