ಕನ್ನಡ ಚಿತ್ರರಂಗದ ಮೂವರು ದೈತ್ಯ ಪ್ರತಿಭೆಗಳಾದ ಶಿವರಾಜ್‌ಕುಮಾರ್, ಉಪೇಂದ್ರ ಮತ್ತು ರಾಜ್ ಬಿ ಶೆಟ್ಟಿ, ಮೊದಲ ಬಾರಿಗೆ ಒಂದೇ ಪರದೆಯ ಮೇಲೆ ಅಬ್ಬರಿಸಿದ ಸಿನಿಮಾ 45. ಕಳೆದ ಕ್ರಿಸ್‌ಮಸ್ ಹಬ್ಬದ ಪ್ರಯೋಗವಾಗಿ ಬಿಡುಗಡೆಯಾಗಿ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಓಪನಿಂಗ್ ಪಡೆದಿದ್ದ ಈ ಚಿತ್ರ, ಈಗ ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಕಿರುತೆರೆಯ ವೀಕ್ಷಕರಿಗೆ ಸಿಹಿ ಸುದ್ದಿ ನೀಡಿದೆ. ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸಿದ್ದ ಈ ಫ್ಯಾಂಟಸಿ ಆಕ್ಷನ್ ಸಿನಿಮಾ ಈಗ ಡಿಜಿಟಲ್ ಪ್ಲಾಟ್‌ಫಾರ್ಮ್‌ಗೆ ಬರಲು ಸಜ್ಜಾಗಿದೆ.
ಜೀ5 ನಲ್ಲಿ ಸ್ಟ್ರೀಮಿಂಗ್ ಆರಂಭ
ಹೆಸರಾಂತ ನಿರ್ಮಾಪಕ ರಮೇಶ್ ರೆಡ್ಡಿ ಅವರು ಅತ್ಯಂತ ದುಬಾರಿ ವೆಚ್ಚದಲ್ಲಿ ನಿರ್ಮಿಸಿರುವ 45 ಚಿತ್ರದ ಡಿಜಿಟಲ್ ಮತ್ತು ಸ್ಯಾಟಲೈಟ್ ಹಕ್ಕುಗಳನ್ನು ಜೀ ಸಂಸ್ಥೆಯು ಭಾರಿ ಮೊತ್ತಕ್ಕೆ ಖರೀದಿಸಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಹಂಚಿಕೊಂಡಿರುವ ಜೀ5 ಕನ್ನಡ, ಜನವರಿ 23 ರಿಂದ ಸಿನಿಮಾ ಸ್ಟ್ರೀಮಿಂಗ್ ಆಗಲಿದೆ ಎಂದು ಘೋಷಿಸಿದೆ. ಸಂಕ್ರಾಂತಿ ಹಬ್ಬಕ್ಕೆ ವಿಶೇಷ ಉಡುಗೊರೆ ಎಂದು ಜೀ5 ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಚಿತ್ರದ ಟ್ರೇಲರ್ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ.
ಅರ್ಜುನ್ ಜನ್ಯ ಸೃಷ್ಟಿಸಿದ ಹೊಸ ಲೋಕ
ಇಷ್ಟು ದಿನ ಕೇವಲ ಸಂಗೀತ ನಿರ್ದೇಶಕರಾಗಿ ಮೋಡಿ ಮಾಡಿದ್ದ ಅರ್ಜುನ್ ಜನ್ಯ, ಈ ಚಿತ್ರದ ಮೂಲಕ ಮೊದಲ ಬಾರಿಗೆ ನಿರ್ದೇಶಕನ ಕ್ಯಾಪ್ ತೊಟ್ಟಿದ್ದಾರೆ. 45 ಒಂದು ವಿಶಿಷ್ಟ ಫ್ಯಾಂಟಸಿ ಲೋಕದ ಕಥೆ. ಮನುಷ್ಯನ ಸಾವು, ಸಾವಿನ ನಂತರದ ಆತ್ಮದ ಪ್ರಯಾಣ, ಗರುಡ ಪುರಾಣದ ನಂಬಿಕೆಗಳು, ವಿಧಿ ಮತ್ತು ಪಾಪ-ಕರ್ಮಗಳ ಸುತ್ತ ಈ ಸಿನಿಮಾದ ಕಥೆ ಸಾಗುತ್ತದೆ. ಒಬ್ಬ ಸಾಮಾನ್ಯ ಮನುಷ್ಯ ಮತ್ತು ಸಾವು-ಬದುಕಿನ ನಡುವಿನ ಸಂಘರ್ಷವನ್ನು ಅರ್ಜುನ್ ಜನ್ಯ ಅತ್ಯಂತ ಕುತೂಹಲಕಾರಿಯಾಗಿ ತೆರೆಗೆ ತಂದಿದ್ದಾರೆ.
ಚಿತ್ರದ ಪ್ರಮುಖ ಆಕರ್ಷಣೆ ಎಂದರೆ ಅದು ಕ್ಲೈಮ್ಯಾಕ್ಸ್. ಶಿವರಾಜ್‌ಕುಮಾರ್ ಅವರು ಇಲ್ಲಿ ನಾನಾ ಅವತಾರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಪ್ರತಿಯೊಂದು ಎಂಟ್ರಿ ಮತ್ತು ಶಿವ ತಾಂಡವ ಅಭಿಮಾನಿಗಳಿಗೆ ರೋಮಾಂಚನ ನೀಡುವುದು ಖಚಿತ. ಇನ್ನು ರಿಯಲ್ ಸ್ಟಾರ್ ಉಪೇಂದ್ರ ಅವರು ಎಂದಿನಂತೆ ತಮ್ಮ ವಿಭಿನ್ನ ಗೆಟಪ್ ಮತ್ತು ಮ್ಯಾನರಿಸಂ ಮೂಲಕ ಗಮನ ಸೆಳೆದರೆ, ರಾಜ್ ಬಿ ಶೆಟ್ಟಿ ಅವರ ನಟನೆ ಚಿತ್ರದ ತೂಕ ಹೆಚ್ಚಿಸಿದೆ. ರಾಜ್ ಬಿ ಶೆಟ್ಟಿ ತಾಯಿಯ ಪಾತ್ರದಲ್ಲಿ ಮಾನಸಿ ಸುಧೀರ್ ಕಾಣಿಸಿಕೊಂಡಿದ್ದಾರೆ.
ಚಿತ್ರದಲ್ಲಿ ಕೌಸ್ತುಭ ಮಣಿ ನಾಯಕಿಯಾಗಿ ನಟಿಸಿದ್ದರೆ, ಜಿಶು ಸೆಂಗುಪ್ತ ಪ್ರಮುಖ ಪಾತ್ರದಲ್ಲಿದ್ದಾರೆ. ಸತ್ಯ ಹೆಗಡೆ ಅವರ ಛಾಯಾಗ್ರಹಣದೊಂದಿಗೆ ಚಿತ್ರ ಮೂಡಿಬಂದಿದೆ. ಇನ್ನು ಚಿತ್ರಕ್ಕೆ ಅರ್ಜುನ್ ಜನ್ಯ ಅವರೇ ಸಂಗೀತ ನೀಡಿದ್ದು, ಅನಿಲ್ ಕುಮಾರ್ ಸಂಭಾಷಣೆ ಬರೆದಿದ್ದಾರೆ. ಸಂಕ್ರಾಂತಿ ಹಬ್ಬದ ಬೋನಸ್ ಆಗಿ ಈ ಚಿತ್ರ ಜೀ5 ನಲ್ಲಿ ಬಿಡುಗಡೆಯಾಗುತ್ತಿದ್ದು, ಥಿಯೇಟರ್‌ನಲ್ಲಿ ಮಿಸ್ ಮಾಡಿಕೊಂಡವರಿಗೆ ಇದು ಸುವರ್ಣಾವಕಾಶ.





