ಶಿವಣ್ಣ-ಉಪ್ಪಿ-ರಾಜ್ ಟ್ರಯೋ ಕಾಂಬೋ 45 ಚಿತ್ರದ ಮೂಲಕ ಹೊಚ್ಚ ಹೊಸ ದಾಖಲೆ ಸೃಷ್ಠಿಸೋಕೆ ಸಜ್ಜಾಗಿದೆ. ಯೆಸ್.. ಟ್ರೈಲರ್ ಲಾಂಚ್‌ಗೆ ಕೌಂಟ್‌ಡೌನ್ ಶುರುವಾಗಿದ್ದು, ಬೆಂಗಳೂರು ಸೇರಿದಂತೆ ರಾಜ್ಯದ ಏಳು ಕಡೆ ಒಂದೇ ಸಮಯದಲ್ಲಿ ಇವೆಂಟ್ಸ್ ಮಾಡಲು ಮುಂದಾಗಿದೆ ಟೀಂ. ಅದಕ್ಕಾಗಿ ಅರ್ಜುನ್ ಜನ್ಯ-ರಮೇಶ್ ರೆಡ್ಡಿ ಮಾಡಿರೋ ಮಾಸ್ಟರ್‌ಪ್ಲ್ಯಾನ್ ಎಂಥದ್ದು..? ಎಲ್ಲೆಲ್ಲಿ ಇವೆಂಟ್ಸ್ ನಡೆಯುತ್ತೆ..? ಹೇಗೆ ಅನ್ನೋದ್ರ ಧಮಾಕೇದಾರ್ ಸ್ಟೋರಿ ಇಲ್ಲಿದೆ.
ಡಿಸೆಂಬರ್ ನಲ್ಲಿ ಸಾಲು ಸಾಲು ಕನ್ನಡ ಸಿನಿಮಾಗಳು ರಿಲೀಸ್ ಗೆ ರೆಡಿಯಾಗಿವೆ. ಅದ್ರಲ್ಲೂ ಸೂಪರ್ ಸ್ಟಾರ್ಸ್ ಸಿನಿಮಾಗಳೇ ಲೈನ್ ನಲ್ಲಿವೆ. ಈ ನಡುವೆ 45 ಸಿನಿಮಾ ಹಲವು ಕಾರಣಕ್ಕೆ ಸದ್ದು ಮಾಡಿ ಸುದ್ದಿ ಆಗ್ತಿದೆ. ಎಸ್, ಈಗಾಗಲೇ 45 ಚಿತ್ರದ ಆಫ್ರೋ ಸಾಂಗ್ ಸಕತ್ ಹಿಟ್ ಆಗಿದೆ. ಶಿವಣ್ಣ.. ಉಪೇಂದ್ರ.. ರಾಜ್ ಬಿ ಕುಣಿತಕ್ಕೆ ಫ್ಯಾನ್ಸ್ ಕೂಡ ಸ್ಟೆಪ್ ಹಾಕಿ ಸಿನಿಮಾ ಬರುವಿಕೆಗಾಗಿ ಕಾಯ್ತಿದ್ದಾರೆ. ಸಿನಿಮಾ ಬಿಡುಗಡೆಗೂ ಮೊದಲು ನಿರ್ದೇಶಕ ಅರ್ಜುನ್ ಜನ್ಯ ಟ್ರೈಲರ್ ರಿಲೀಸ್ ಮಾಡೋಕೆ ಡೇಟ್ ಫಿಕ್ಸ್ ಮಾಡಿದ್ದಾರೆ.
ಹೊಸ ದಾಖಲೆಗೆ ಶಿವಣ್ಣ-ಉಪ್ಪಿ-ರಾಜ್ ಟ್ರಯೋ ಜೋಡಿ ರೆಡಿ
ಡಿ-15ಕ್ಕೆ 45 ಟ್ರೈಲರ್..7ಕಡೆ ಒಂದೇ ಸಮಯಕ್ಕೆ ಇವೆಂಟ್ಸ್..!
ಕರುನಾಡ ಚಕ್ರವರ್ತಿ ಶಿವರಾಜಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ನಟಿಸಿರುವ 45ಚಿತ್ರದ ಟ್ರೈಲರ್ ಇದೆ ಡಿಸೆಂಬರ್ 15ರಂದು ಬಿಡುಗಡೆ ಆಗಲಿದೆ. ಸದ್ಯ ಈ ಟ್ರೈಲರ್ ಲಾಂಚ್ ಇವೆಂಟ್ ಅನ್ನು ಅದ್ದೂರಿಯಾಗಿ ಮಾಡಲು ಚಿತ್ರತಂಡ ನಿರ್ಧರಿಸಿದೆ. ಈ ಕುರಿತು ಮಾಹಿತಿ ನೀಡಲು ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ನಿರ್ಮಾಪಕ ರಮೇಶ್ ರೆಡ್ಡಿ, ನಿರ್ದೇಶಕ ಅರ್ಜುನ್ ಜನ್ಯ ಹಾಗು ನವರಸನ್ ಉಪಸ್ಥಿತರಿದ್ದರು.
ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮೊದಲ ನಿರ್ದೇಶನದ ಹಾಗೂ ಸೂರಜ್ ಪ್ರೊಡಕ್ಷನ್ ಲಾಂಛನದಲ್ಲಿ ರಮೇಶ್ ರೆಡ್ಡಿ ನಿರ್ಮಾಣದ 45 ಚಿತ್ರದ ಟ್ರೈಲರ್ ರಿಲೀಸ್ ಇವೆಂಟ್ ಡಿಸೆಂಬರ್ 15 ರಂದು ಬೆಂಗಳೂರಿನ ವಿದ್ಯಾಪೀಠದ ಬಳಿಯಿರುವ ಕೆಂಪೇಗೌಡ ಮೈದಾನ ಶಂಕರ್ ನಾಗ್ ಸರ್ಕಲ್, ಶ್ರೀನಿವಾಸನಗರದಲ್ಲಿ ಅದ್ದೂರಿಯಾಗಿ ನಡೆಯಲಿದೆ. ಇದೇ ಸಂದರ್ಭದಲ್ಲಿ ಈವರೆಗೂ ಯಾರು ಮಾಡಿರದ ವಿಭಿನ್ನ ಪ್ರಯತ್ನವನ್ನು 45 ಚಿತ್ರತಂಡ ಮಾಡಲು ಮುಂದಾಗಿದ್ದು, ಬೆಂಗಳೂರಿನಲ್ಲಿ ನಡೆಯುವ ಇವೆಂಟ್ ಅನ್ನು ಕರ್ನಾಟಕದ ಏಳು ಪ್ರಮುಖ ಜಿಲ್ಲೆಗಳ ಚಿತ್ರಮಂದಿರದಲ್ಲಿ ಕ್ಯೂಬ್ ಮೂಲಕ ನೇರ ಪ್ರಸಾರ ಮಾಡಲಾಗುತ್ತೆ ಎಂದು ಅರ್ಜುನ್ ಜನ್ಯ ತಿಳಿಸಿದ್ದಾರೆ.
ಜನ್ಯ-ರಮೇಶ್ ರೆಡ್ಡಿ ಮಾಸ್ಟರ್‌ಪ್ಲ್ಯಾನ್.. ಫ್ಯಾನ್ಸ್‌ಗೆ ಹಬ್ಬದೂಟ
ನೆವರ್ ಬಿಫೋರ್.. ಎವರ್ ಆಫ್ಟರ್.. 45 ಟ್ರೈಲರ್ ಇವೆಂಟ್
ಮೈಸೂರು, ಮಂಗಳೂರು, ತುಮಕೂರು, ದಾವಣಗೆರೆ, ಶಿವಮೊಗ್ಗ, ಹೊಸಪೇಟೆ, ಹುಬ್ಬಳ್ಳಿ ಈ ಏಳು ಊರುಗಳ ಚಿತ್ರಮಂದಿರಗಳಲ್ಲಿ ಈ ವ್ಯವಸ್ಥೆ ಮಾಡಲಾಗಿದೆ. ಅಭಿಮಾನಿಗಳಿಗೆ ಆಯಾ ಜಿಲ್ಲೆಗಳಲ್ಲಿ ಪಾಸ್ ವ್ಯವಸ್ಥೆ ಮಾಡಲಾಗಿದ್ದು, ಉಚಿತ ಪ್ರವೇಶವಿರುತ್ತದೆ. ಏಕಕಾಲಕ್ಕೆ ಏಳು ಊರುಗಳಲ್ಲೂ ಟ್ರೇಲರ್ ಅನಾವರಣವಾಗಲಿದೆ. ಟ್ರೇಲರ್ ವೀಕ್ಷಣೆಯ ನಂತರ ಅಭಿಮಾನಿಗಳನ್ನು ಉದ್ದೇಶಿಸಿ ಶಿವರಾಜ್ ಕುಮಾರ್, ಉಪೇಂದ್ರ ಹಾಗು ರಾಜ್ ಬಿ ಶೆಟ್ಟಿ ಮಾತನಾಡಲಿದ್ದಾರೆ. ಇದೆ ವೇಳೆ ಭಾರತದ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಚಿತ್ರವನ್ನು ನಿರ್ಮಿಸಿರುವ ಹೆಮ್ಮೆ ಇದೆ. ಅದನ್ನು ಜನರು ಮೆಚ್ಚಿಕೊಳ್ಳುತ್ತಾರೆ ಎಂಬ ಭರವಸೆಯೂ ಇದೆ ಎಂದರು ರಮೇಶ್ ರೆಡ್ಡಿ .
ಕನ್ನಡ ಸಿನಿರಂಗದಲ್ಲಿ ಇದೇ ಮೊದಲ ಬಾರಿಗೆ, ಏಳು ಜಿಲ್ಲೆಗಳಲ್ಲಿ ಏಕಕಾಲಕ್ಕೆ ಟ್ರೈಲರ್ ಬಿಡುಗಡೆ ಮಾಡುವ ವಿಭಿನ್ನ ಪ್ರಯವನ್ನ 45 ಚಿತ್ರತಂಡ ಮಾಡಲು ಮುಂದಾಗಿದೆ. ಸದ್ಯ ತ್ರಿಮೂರ್ತಿಗಳ ಫ್ಯಾನ್ಸ್ ಈ ಇವೆಂಟ್ ಕಣ್ತುಂಬಿಕೊಳ್ಳೋಕೆ ತುದಿಗಾಲಿನಲ್ಲಿ ಕಾಯ್ತಿದ್ದು ಸಿನಿಮಾ ಡಿಸೆಂಬರ್ 25ಕ್ಕೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗ್ತಿದೆ.
ಕೀರ್ತಿ ಪಾಟೀಲ್, ಫಿಲ್ಮ್ ಬ್ಯೂರೋ, ಗ್ಯಾರಂಟಿ ನ್ಯೂಸ್
| Reported by: ಕೀರ್ತಿ ಪಾಟೀಲ್, ಫಿಲ್ಮ್ ಬ್ಯೂರೋ, ಗ್ಯಾರಂಟಿ ನ್ಯೂಸ್