ಮುಂಬೈ: ಮಧ್ಯಪ್ರಾಚ್ಯದಲ್ಲಿ ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ತಾರಕಕ್ಕೇರಿರುವುದು ಜಾಗತಿಕ ಇಂಧನ ಪೂರೈಕೆಯ ಮೇಲೆ ಆತಂಕ ಮೂಡಿಸಿದೆ. ಇದರ ನೇರ ಪರಿಣಾಮವಾಗಿ ಮುಂಬೈ ಷೇರು ಮಾರುಕಟ್ಟೆಯ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 2,496 ಅಂಕಗಳಷ್ಟು ಪಾತಾಳಕ್ಕೆ ಕುಸಿದಿದೆ. ಈ ಒಂದೇ ದಿನದ ವಹಿವಾಟಿನಲ್ಲಿ ಹೂಡಿಕೆದಾರರು ಬರೋಬ್ಬರಿ 12.49 ಲಕ್ಷ ಕೋಟಿ ರೂ. (12 ಟ್ರಿಲಿಯನ್) ಸಂಪತ್ತನ್ನು ಕಳೆದುಕೊಂಡಿದ್ದಾರೆ.
ಕೆಲವು ದಿನಗಳ ಕಾಲ ಸ್ಥಿರವಾಗಿದ್ದ ಮಾರುಕಟ್ಟೆ, ಗುರುವಾರ ವಹಿವಾಟು ಆರಂಭವಾಗುತ್ತಿದ್ದಂತೆಯೇ ಮಾರಾಟದ ಒತ್ತಡಕ್ಕೆ ಸಿಲುಕಿತು. ವಹಿವಾಟಿನ ಅಂತ್ಯಕ್ಕೆ ಬಿಎಸ್‌ಇ ಸೆನ್ಸೆಕ್ಸ್ 2,496.89 ಅಂಕಗಳ ಕುಸಿತ ಕಂಡು 74,207.24 ಕ್ಕೆ ಸ್ಥಿರವಾಯಿತು. ಇತ್ತ ಎನ್‌ಎಸ್‌ಇ ನಿಫ್ಟಿ ಕೂಡ 775.65 ಅಂಕಗಳಷ್ಟು ಕುಸಿದು 23,002.15 ರ ಮಟ್ಟಕ್ಕೆ ತಲುಪಿದೆ. ಬ್ಯಾಂಕಿಂಗ್ ವಲಯವೂ ಇದಕ್ಕೆ ಹೊರತಾಗಿಲ್ಲ. ನಿಫ್ಟಿ ಬ್ಯಾಂಕ್ 1,875 ಅಂಕಗಳ ಕುಸಿತ ದಾಖಲಿಸಿದೆ.
ಕುಸಿತಕ್ಕೆ ಪ್ರಮುಖ ಕಾರಣಗಳೇನು ?
-
ಯುದ್ಧದ ತೀವ್ರತೆ: ಇರಾನ್ ತನ್ನ ನೆರೆಹೊರೆಯ ರಾಷ್ಟ್ರಗಳಾದ ಸೌದಿ ಅರೇಬಿಯಾ, ಕತಾರ್ ಮತ್ತು ಕುವೈತ್‌ನಲ್ಲಿರುವ ತೈಲ ಹಾಗೂ ಎಲ್‌ಎನ್‌ಜಿ ಘಟಕಗಳ ಮೇಲೆ ದಾಳಿ ನಡೆಸಿರುವುದು ಜಾಗತಿಕ ಮಾರುಕಟ್ಟೆಯನ್ನು ನಡುಗಿಸಿದೆ.
-
ತೈಲ ಬೆಲೆ ಏರಿಕೆ: ಇರಾನ್‌ನ ಈ ದಾಳಿಯಿಂದಾಗಿ ಬ್ರೆಂಟ್ ಕಚ್ಚಾ ತೈಲ ಬೆಲೆ ಶೇ. 6.75 ರಷ್ಟು ಏರಿಕೆಯಾಗಿ ಬ್ಯಾರೆಲ್‌ಗೆ 114.8 ಡಾಲರ್ ತಲುಪಿದೆ. ಇದು ಭಾರತದಂತಹ ಆಮದು ಅವಲಂಬಿತ ದೇಶದ ಆರ್ಥಿಕತೆಗೆ ದೊಡ್ಡ ಹೊಡೆತ.
-
ಹೆಚ್‌ಡಿಎಫ್‌ಸಿ ಬ್ಯಾಂಕ್ ಆಘಾತ: ನೈತಿಕ ಕಾರಣಗಳನ್ನು ನೀಡಿ ಹೆಚ್‌ಡಿಎಫ್‌ಸಿ ಬ್ಯಾಂಕ್ ಅಧ್ಯಕ್ಷ ಅತನು ಚಕ್ರವರ್ತಿ ರಾಜೀನಾಮೆ ನೀಡಿದ ಬೆನ್ನಲ್ಲೇ ಬ್ಯಾಂಕ್ ಷೇರುಗಳು ಶೇ. 5.13 ರಷ್ಟು ಕುಸಿದವು.
-
ಜಾಗತಿಕ ಮಾರುಕಟ್ಟೆ ಪ್ರಭಾವ: ಜಪಾನ್‌ನ ನಿಕ್ಕಿ ಮತ್ತು ದಕ್ಷಿಣ ಕೊರಿಯಾದ ಕೋಸ್ಪಿ ಸೇರಿದಂತೆ ಏಷ್ಯಾದ ಬಹುತೇಕ ಮಾರುಕಟ್ಟೆಗಳು ಕೆಂಪು ಬಣ್ಣಕ್ಕೆ ತಿರುಗಿದ್ದು ಭಾರತೀಯ ಮಾರುಕಟ್ಟೆಯ ಮೇಲೆ ಒತ್ತಡ ಹೇರಿತು.
ಹೂಡಿಕೆದಾರರಲ್ಲಿ ಹೆಚ್ಚಿದ ಆತಂಕ
ಮಾರುಕಟ್ಟೆಯ ಏರಿಳಿತವನ್ನು ಅಳೆಯುವ ಇಂಡಿಯಾ VIX ಸೂಚ್ಯಂಕವು ಶೇ. 3 ಕ್ಕಿಂತ ಹೆಚ್ಚು ಏರಿಕೆಯಾಗಿದೆ. ಬಜಾಜ್ ಫೈನಾನ್ಸ್, ಮಹೀಂದ್ರಾ & ಮಹೀಂದ್ರಾ, ಮತ್ತು ಲಾರ್ಸೆನ್ & ಟೂಬೊ ಕಂಪನಿಗಳ ಷೇರುಗಳು ಅತಿ ಹೆಚ್ಚು ನಷ್ಟ ಅನುಭವಿಸಿದವು.
