ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ (RBI) ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಗಳನ್ನು ಜಾರಿಗೆ ತರಲು ಮುಂದಾಗಿದೆ. ಗ್ರಾಹಕರ ಹಿತಾಸಕ್ತಿಯನ್ನು ಕಾಪಾಡುವ ಉದ್ದೇಶದಿಂದ ಹಲವು ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಇತ್ತೀಚಿನ ವರ್ಷಗಳಲ್ಲಿ ಬ್ಯಾಂಕುಗಳ ಮೂಲಕ ವಿಮೆ, ಎನ್‌ಪಿಎಸ್ (NPS) ಸೇರಿದಂತೆ ವಿವಿಧ ಹಣಕಾಸು ಉತ್ಪನ್ನಗಳ ತಪ್ಪು ಮಾರಾಟ (Mis-selling) ಕುರಿತಾಗಿ ಅನೇಕ ದೂರುಗಳು ಕೇಳಿಬಂದ ಹಿನ್ನೆಲೆ, ಆರ್‌ಬಿಐ ಈ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ.
ಮಿಸ್‌ಸೆಲ್ಲಿಂಗ್‌ಗೆ ಸಂಪೂರ್ಣ ತಡೆ
ಇನ್ನು ಮುಂದೆ ಬ್ಯಾಂಕುಗಳು ಅಥವಾ ಅವರ ಏಜೆಂಟ್‌ಗಳು ಗ್ರಾಹಕರಿಗೆ ತಪ್ಪು ಮಾಹಿತಿ ನೀಡಿ ಉತ್ಪನ್ನಗಳನ್ನು ಮಾರಾಟ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಯಾವುದೇ ಹಣಕಾಸು ಉತ್ಪನ್ನವನ್ನು ಮಾರಾಟ ಮಾಡುವ ಮೊದಲು ಗ್ರಾಹಕರ ವಯಸ್ಸು, ಆದಾಯ, ಹಣಕಾಸಿನ ಸ್ಥಿತಿ ಹಾಗೂ ರಿಸ್ಕ್ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಪರಿಶೀಲಿಸಿ ಮಾತ್ರ ಮಾರಾಟ ಮಾಡಬೇಕು.
ಏಜೆಂಟ್‌ಗಳ ಪ್ರತ್ಯೇಕ ವ್ಯವಸ್ಥೆ
ಉತ್ಪನ್ನಗಳನ್ನು ಮಾರಾಟ ಮಾಡುವ ಏಜೆಂಟ್‌ಗಳನ್ನು ಬ್ಯಾಂಕ್‌ನ ನಿಯಮಿತ ಸಿಬ್ಬಂದಿಯಿಂದ ಪ್ರತ್ಯೇಕವಾಗಿರಿಸಬೇಕು ಎಂದು ಆರ್‌ಬಿಐ ಸೂಚಿಸಿದೆ. ಇದರಿಂದ ಗ್ರಾಹಕರು ಯಾರು ಬ್ಯಾಂಕ್ ಸಿಬ್ಬಂದಿ ಮತ್ತು ಯಾರು ಥರ್ಡ್ ಪಾರ್ಟಿ ಏಜೆಂಟ್ ಎಂಬುದನ್ನು ಸ್ಪಷ್ಟವಾಗಿ ಗುರುತಿಸಬಹುದು. ಜೊತೆಗೆ, ಮಾರಾಟದ ನಡವಳಿಕೆ ನಿಯಮಾವಳಿಯನ್ನು (Code of Conduct) ಪ್ರತಿಯೊಂದು ಬ್ಯಾಂಕ್ ರೂಪಿಸಬೇಕು.
ಪ್ರತ್ಯೇಕ ಅನುಮತಿ ಕಡ್ಡಾಯ
ಒಂದೇ ಫಾರ್ಮ್‌ನಲ್ಲಿ ಹಲವಾರು ಸೇವೆಗಳಿಗೆ ಒಟ್ಟಾಗಿ ಅನುಮತಿ ಪಡೆಯುವ ಪದ್ಧತಿಗೆ ಈಗ ಬ್ರೇಕ್ ಹಾಕಲಾಗಿದೆ. ಪ್ರತಿ ಉತ್ಪನ್ನ ಅಥವಾ ಸೇವೆಗೆ ಗ್ರಾಹಕರಿಂದ ಪ್ರತ್ಯೇಕವಾಗಿ ಅನುಮತಿ ಪಡೆಯಬೇಕು. ಬ್ಯಾಂಕಿಂಗ್ ಆ್ಯಪ್ ಅಥವಾ ವೆಬ್‌ಸೈಟ್‌ನಲ್ಲಿ ಗ್ರಾಹಕರು ನಿಯಮಗಳನ್ನು ಓದದೇ ಅನುಮೋದನೆ ನೀಡಲು ಸಾಧ್ಯವಾಗದಂತೆ ಇಂಟರ್‌ಫೇಸ್ ಬದಲಾವಣೆ ಮಾಡಬೇಕು.
ಥರ್ಡ್ ಪಾರ್ಟಿ ಉತ್ಪನ್ನಗಳ ಪ್ರಚಾರಕ್ಕೆ ಮಿತಿ
ಬ್ಯಾಂಕುಗಳು ಥರ್ಡ್ ಪಾರ್ಟಿ ಉತ್ಪನ್ನಗಳನ್ನು ನೇರವಾಗಿ ಪ್ರಚಾರ ಮಾಡುವುದಕ್ಕೆ ನಿರ್ಬಂಧ ಹೇರಲಾಗಿದೆ. ಗ್ರಾಹಕರಿಗೆ ಮುಂಚಿತ ಅನುಮತಿಯಿಲ್ಲದೆ ಕರೆ ಮಾಡುವುದು ಅಥವಾ ಭೇಟಿ ನೀಡುವುದು ಕೂಡ ನಿಷೇಧಿಸಲಾಗಿದೆ. ‘ಒತ್ತಾಯದ ಮಾರಾಟ’ ಪದ್ಧತಿಗೆ ಸಂಪೂರ್ಣ ತಡೆ ನೀಡಲಾಗಿದೆ.
ತಪ್ಪು ಮಾಹಿತಿ ನೀಡಿದರೆ ಕಠಿಣ ಕ್ರಮ
ಯಾವುದೇ ತಪ್ಪು ಮಾಹಿತಿ ನೀಡುವುದು, ಅಥವಾ ಗ್ರಾಹಕರ ಅನುಮತಿಯಿಲ್ಲದೆ ಉತ್ಪನ್ನಗಳನ್ನು ಮಾರಾಟ ಮಾಡುವುದು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ನಿಯಮ ಉಲ್ಲಂಘಿಸಿದ ಏಜೆಂಟ್‌ಗಳಿಗೆ ಬ್ಯಾಂಕುಗಳು ದಂಡ ವಿಧಿಸಬಹುದು. ಜೊತೆಗೆ ಆರ್‌ಬಿಐ ಕೂಡ ಕಠಿಣ ಕ್ರಮ ಕೈಗೊಳ್ಳಲಿದೆ.
ಮಿಸ್‌ಸೆಲ್ಲಿಂಗ್ ಮಾಡಿದರೆ ಏನಾಗುತ್ತದೆ?
ಒಂದು ವೇಳೆ ಬ್ಯಾಂಕುಗಳು ತಪ್ಪಾಗಿ ಉತ್ಪನ್ನಗಳನ್ನು ಮಾರಾಟ ಮಾಡಿದರೆ, ಆ ವಹಿವಾಟನ್ನು ರದ್ದುಗೊಳಿಸಿ ಗ್ರಾಹಕರಿಗೆ ಸಂಪೂರ್ಣ ಹಣ ಮರುಪಾವತಿ (Refund) ಮಾಡಬೇಕು. ಇದರ ಜೊತೆಗೆ ಉಂಟಾದ ಹಣಕಾಸಿನ ನಷ್ಟಕ್ಕೆ ಸೂಕ್ತ ಪರಿಹಾರ (Compensation) ನೀಡಬೇಕು.
ಉತ್ಪನ್ನ ಮಾರಾಟ ಮಾಡಿದ 30 ದಿನಗಳ ನಂತರ ಗ್ರಾಹಕರಿಗೆ ಕರೆ ಮಾಡಿ ಅವರ ಅಭಿಪ್ರಾಯ ತಿಳಿದುಕೊಳ್ಳುವುದು ಕಡ್ಡಾಯವಾಗಿದೆ. ಪ್ರತಿ ಆರು ತಿಂಗಳಿಗೊಮ್ಮೆ ಬ್ಯಾಂಕುಗಳು ಇದರ ವರದಿ ಸಿದ್ಧಪಡಿಸಬೇಕು.
ದೂರು ನೀಡಲು 30 ದಿನ ಗಡುವು
ಗ್ರಾಹಕರು ತಪ್ಪು ಮಾರಾಟದ ಬಗ್ಗೆ 30 ದಿನಗಳ ಒಳಗೆ ದೂರು ನೀಡಬೇಕು ಎಂದು ಆರ್‌ಬಿಐ ಸ್ಪಷ್ಟಪಡಿಸಿದೆ. ಈ ನಿಯಮಗಳು ಜುಲೈ 1ರಿಂದ ಜಾರಿಗೆ ಬರಲಿವೆ.
