ಭಾರತದಲ್ಲಿ ಡಿಜಿಟಲ್ ಪಾವತಿಯು ರಾಜನಂತೆ ಬೆಳೆದಿರುವ ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (ಯುಪಿಐ) ತನ್ನ ಸೇವೆಯನ್ನು ಮತ್ತಷ್ಟು ಸುಧಾರಿಸಲು ಹೊಸ ನಿಯಮಗಳನ್ನು ಜಾರಿಗೆ ತರಲು ಸಿದ್ಧವಾಗಿದೆ. ಗೂಗಲ್ ಪೇ, ಫೋನ್ ಪೇ, ಪೇಟಿಎಂನಂತಹ ಆ್ಯಪ್‌ಗಳ ಮೂಲಕ ಸಣ್ಣ ತರಕಾರಿಯಿಂದ ದೊಡ್ಡ ಖರೀದಿಗಳವರೆಗೆ ಎಲ್ಲವನ್ನೂ ಆನ್‌ಲೈನ್‌ನಲ್ಲಿ ಪಾವತಿಸುವವರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿದೆ. ಆದರೆ, ಆಗಸ್ಟ್ 1, 2025ರಿಂದ ಯುಪಿಐ ನಿಯಮಗಳಲ್ಲಿ ಕೆಲವು ಪ್ರಮುಖ ಬದಲಾವಣೆಗಳು ಜಾರಿಗೆ ಬರಲಿವೆ ಎಂದು ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (NPCI) ಘೋಷಿಸಿದೆ.
ಯುಪಿಐನಲ್ಲಿ ಯಾವೆಲ್ಲ ಬದಲಾವಣೆಗಳು?
-
ಬ್ಯಾಲೆನ್ಸ್ ಚೆಕ್‌ಗೆ ಮಿತಿ: ಇನ್ಮೇಲೆ ಯುಪಿಐ ಬಳಕೆದಾರರು ದಿನಕ್ಕೆ 50 ಬಾರಿ ಮಾತ್ರ ಬ್ಯಾಲೆನ್ಸ್ ಚೆಕ್ ಮಾಡಬಹುದು. ಈ ನಿರ್ಧಾರವನ್ನು ವ್ಯವಸ್ಥೆಯ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ತೆಗೆದುಕೊಳ್ಳಲಾಗಿದೆ. ಆಗಾಗ ಬ್ಯಾಲೆನ್ಸ್ ಚೆಕ್ ಮಾಡುವ ಅಭ್ಯಾಸವಿರುವವರಿಗೆ ಇದು ಸ್ವಲ್ಪ ತೊಂದರೆಯಾಗಬಹುದು.
-
ಆಟೋಪೇ ನಿಯಮದಲ್ಲಿ ಬದಲಾವಣೆ: ಆಟೋಪೇ ವಹಿವಾಟುಗಳಿಗೆ ಇನ್ಮೇಲೆ ಕೇವಲ ಒಂದು ಪ್ರಯತ್ನ ಮತ್ತು ಮೂರು ಮರುಪ್ರಯತ್ನಗಳಿಗೆ ಮಾತ್ರ ಅವಕಾಶವಿರುತ್ತದೆ. ಜೊತೆಗೆ, ಕಡಿಮೆ ಜನದಟ್ಟಣೆಯ ಸಮಯದಲ್ಲಿ ಮಾತ್ರ ಆಟೋಪೇ ಮಾಡಲು ಸಾಧ್ಯವಾಗುತ್ತದೆ. ಅಂದರೆ, ಬೆಳಿಗ್ಗೆ 10 ಗಂಟೆಗಿಂತ ಮೊದಲು, ಮಧ್ಯಾಹ್ನ 1ರಿಂದ ಸಂಜೆ 5ರವರೆಗೆ, ಅಥವಾ ರಾತ್ರಿ 9:30ರ ನಂತರ. ಈ ಬದಲಾವಣೆಯಿಂದ ಸಬ್‌ಸ್ಕ್ರಿಪ್ಷನ್ ಪಾವತಿಗಳ ಸಮಯದಲ್ಲಿ ಗೊಂದಲ ಉಂಟಾಗಬಹುದು.
-
ಲಿಂಕ್ ಮಾಡಲಾದ ಖಾತೆ ಪರಿಶೀಲನೆ: ಮೊಬೈಲ್ ಸಂಖ್ಯೆಗೆ ಲಿಂಕ್ ಆಗಿರುವ ಬ್ಯಾಂಕ್ ಖಾತೆಗಳ ಪಟ್ಟಿಯನ್ನು ದಿನಕ್ಕೆ 25 ಬಾರಿ ಮಾತ್ರ ಪರಿಶೀಲಿಸಬಹುದು. ಇದು ಖಾತೆ ನಿರ್ವಹಣೆಯನ್ನು ಸೀಮಿತಗೊಳಿಸಬಹುದು.
-
ವಹಿವಾಟಿನ ಸ್ಥಿತಿ ಚೆಕ್: ವಹಿವಾಟಿನ ಸ್ಥಿತಿಯನ್ನು ಪರಿಶೀಲಿಸಲು API ಕರೆಗಳನ್ನು ಒಂದೊಂದಾಗಿ ಮಾಡಬೇಕು. ಒಂದು ವಹಿವಾಟಿನ ಸ್ಥಿತಿಯನ್ನು 3 ಬಾರಿಗಿಂತ ಹೆಚ್ಚು ಚೆಕ್ ಮಾಡಲಾಗದು, ಮತ್ತು ಪ್ರತಿ ಕರೆಯ ನಡುವೆ 90 ಸೆಕೆಂಡುಗಳ ಅಂತರ ಬೇಕು. ಇದರಿಂದ ವಹಿವಾಟಿನ ಮಾಹಿತಿಯನ್ನು ತಕ್ಷಣ ಪಡೆಯುವುದು ಕಷ್ಟವಾಗಬಹುದು.
ಈ ಬದಲಾವಣೆಗೆ ಕಾರಣವೇನು?
ಯುಪಿಐ ಭಾರತದ ಡಿಜಿಟಲ್ ಪಾವತಿಯ ಜನಪ್ರಿಯ ಸಾಧನವಾಗಿದ್ದು, ಮೇ 2025ರಲ್ಲಿ 25.14 ಲಕ್ಷ ಕೋಟಿ ಮೌಲ್ಯದ 18 ಶತಕೋಟಿ ವಹಿವಾಟುಗಳನ್ನು ನಿರ್ವಹಿಸಿದೆ. ಆದರೆ, ಮಾರ್ಚ್ 26 ಮತ್ತು ಏಪ್ರಿಲ್ 12, 2025ರ ನಡುವೆ ಯುಪಿಐ ವ್ಯವಸ್ಥೆ 18 ದಿನಗಳಲ್ಲಿ 4 ಬಾರಿ ಕ್ರ್ಯಾಶ್ ಆಗಿದೆ. ಏಪ್ರಿಲ್ 12ರಂದು 5 ಗಂಟೆಗಳ ಕಾಲ ಸೇವೆ ಸ್ಥಗಿತಗೊಂಡಿತ್ತು. ಅತಿಯಾದ ಒತ್ತಡ, API ದುರುಪಯೋಗ, ಮತ್ತು ಕೆಲವು ಪಾವತಿ ಸೇವಾ ಪೂರೈಕೆದಾರರು (PSP) ಹಳೆಯ ವಹಿವಾಟುಗಳ ಸ್ಥಿತಿಯನ್ನು ಪದೇಪದೇ ಚೆಕ್ ಮಾಡುವುದು ಇದಕ್ಕೆ ಕಾರಣ. ಈ ಸಮಸ್ಯೆಗಳನ್ನು ತಡೆಗಟ್ಟಲು NPCI ಈ ಹೊಸ ನಿಯಮಗಳನ್ನು ಜಾರಿಗೆ ತಂದಿದೆ.
ಯಾರಿಗೆ ತೊಂದರೆ?
ಈ ಬದಲಾವಣೆಗಳಿಂದ ಸಾಮಾನ್ಯ ಬಳಕೆದಾರರಿಗೆ ದೊಡ್ಡ ಸಮಸ್ಯೆಯಾಗದಿದ್ದರೂ, ಆಗಾಗ ಬ್ಯಾಲೆನ್ಸ್ ಚೆಕ್ ಮಾಡುವವರಿಗೆ ತಮ್ಮ ಅಭ್ಯಾಸವನ್ನು ಬದಲಾಯಿಸಬೇಕಾಗುತ್ತದೆ. ಆಟೋಪೇ ಸಮಯದ ಬದಲಾವಣೆಯಿಂದ ಸಬ್‌ಸ್ಕ್ರಿಪ್ಷನ್ ಪಾವತಿಗಳ ಶೆಡ್ಯೂಲ್‌ನಲ್ಲಿ ಗೊಂದಲ ಉಂಟಾಗಬಹುದು. ಒಟ್ಟಾರೆ, ಈ ನಿಯಮಗಳು ಯುಪಿಐ ವ್ಯವಸ್ಥೆಯನ್ನು ಸುಗಮಗೊಳಿಸಿದರೂ, ಬಳಕೆದಾರರು ಹೊಸ ನಿರ್ಬಂಧಗಳಿಗೆ ಹೊಂದಿಕೊಳ್ಳಬೇಕು.