ನವದೆಹಲಿ: ದೇಶದ ತೆರಿಗೆ ವ್ಯವಸ್ಥೆಯಲ್ಲಿ ನಾಳೆಯಿಂದ (ಏಪ್ರಿಲ್ 1, 2026) ಐತಿಹಾಸಿಕ ಬದಲಾವಣೆ ಆಗಲಿದೆ. ದಶಕಗಳ ಕಾಲ ಅಸ್ತಿತ್ವದಲ್ಲಿದ್ದ 1961ರ ಆದಾಯ ತೆರಿಗೆ ಕಾಯ್ದೆಯ ಬದಲಿಗೆ, ಸುಧಾರಿತ ‘ಆದಾಯ ತೆರಿಗೆ ಕಾಯ್ದೆ 2025’ (Income Tax Act, 2025) ಜಾರಿಗೆ ಬರುತ್ತಿದೆ. ಈ ಹೊಸ ಕಾಯ್ದೆಯು ಸಾಮಾನ್ಯ ತೆರಿಗೆದಾರರಿಗೆ, ವಿಶೇಷವಾಗಿ ಸಂಬಳ ಪಡೆಯುವ ಉದ್ಯೋಗಿಗಳಿಗೆ ಮತ್ತು ಪಿಂಚಣಿದಾರರಿಗೆ ದೊಡ್ಡ ಮಟ್ಟದ ವಿನಾಯಿತಿಗಳನ್ನು ಹೊತ್ತು ತಂದಿದೆ.
12.75 ಲಕ್ಷದವರೆಗೆ ತೆರಿಗೆ ಮುಕ್ತ ಆದಾಯ!
ಹೊಸ ತೆರಿಗೆ ಪದ್ಧತಿಯನ್ನು (New Tax Regime) ಆರಿಸಿಕೊಳ್ಳುವವರಿಗೆ ಸರ್ಕಾರ ಸಿಹಿ ಸುದ್ದಿ ನೀಡಿದೆ. ಇನ್ಮುಂದೆ ವಾರ್ಷಿಕ 12 ಲಕ್ಷ ರೂಪಾಯಿ ವರೆಗಿನ ಆದಾಯಕ್ಕೆ ಯಾವುದೇ ತೆರಿಗೆ ಪಾವತಿಸುವ ಅಗತ್ಯವಿಲ್ಲ. ಇದರ ಜೊತೆಗೆ, ಸಂಬಳದಾರರಿಗೆ ಸಿಗುವ ‘ಸ್ಟ್ಯಾಂಡರ್ಡ್ ಡಿಡಕ್ಷನ್’ ಮಿತಿಯನ್ನು 50 ಸಾವಿರದಿಂದ 75 ಸಾವಿರ ರೂಪಾಯಿಗೆ ಹೆಚ್ಚಿಸಲಾಗಿದೆ. ಹೀಗಾಗಿ, ಸೆಕ್ಷನ್ 87A ಅಡಿಯ ರಿಯಾಯಿತಿಯೂ ಸೇರಿ ಒಟ್ಟು 12.75 ಲಕ್ಷ ರೂಪಾಯಿ ವರೆಗೆ ವಾರ್ಷಿಕ ಆದಾಯ ಹೊಂದಿರುವ ಸಂಬಳದಾರರು ‘ಶೂನ್ಯ ತೆರಿಗೆ’ (Zero Tax) ವ್ಯಾಪ್ತಿಗೆ ಬರಲಿದ್ದಾರೆ.
ಏನಿದು ಸ್ಟ್ಯಾಂಡರ್ಡ್ ಡಿಡಕ್ಷನ್ ?
ಸ್ಟ್ಯಾಂಡರ್ಡ್ ಡಿಡಕ್ಷನ್ ಎನ್ನುವುದು ಸಂಬಳ ಪಡೆಯುವ ವರ್ಗಕ್ಕೆ ಸರ್ಕಾರ ನೀಡುವ ಒಂದು ಸುಲಭ ಫ್ಲಾಟ್ ಡಿಸ್ಕೌಂಟ್. ಸಾಮಾನ್ಯವಾಗಿ ತೆರಿಗೆ ಉಳಿಸಲು ವಿಮೆ ಅಥವಾ ಹೂಡಿಕೆಯ ದಾಖಲೆಗಳನ್ನು ನೀಡಬೇಕಾಗುತ್ತದೆ. ಆದರೆ ಈ 75,000 ರೂ. ಕಡಿತ ಪಡೆಯಲು ನೀವು ಯಾವುದೇ ಬಿಲ್ ಅಥವಾ ದಾಖಲೆ ನೀಡುವ ಅಗತ್ಯವಿಲ್ಲ. ನಿಮ್ಮ ಒಟ್ಟು ವಾರ್ಷಿಕ ಸಂಬಳದಿಂದ ಈ ಮೊತ್ತವನ್ನು ನೇರವಾಗಿ ಕಳೆಯಲಾಗುತ್ತದೆ, ಉಳಿದ ಹಣದ ಮೇಲೆ ಮಾತ್ರ ತೆರಿಗೆ ಲೆಕ್ಕ ಹಾಕಲಾಗುತ್ತದೆ. ಇದು ಕೇವಲ ಉದ್ಯೋಗಿಗಳು ಮತ್ತು ಪಿಂಚಣಿದಾರರಿಗೆ ಮಾತ್ರ ಸೀಮಿತವಾಗಿದ್ದು, ವ್ಯಾಪಾರಸ್ಥರಿಗೆ ಅನ್ವಯಿಸುವುದಿಲ್ಲ.
ತೆರಿಗೆ ಪಾವತಿದಾರರಿಗೆ ಅತಿ ಮುಖ್ಯವಾದ ಬದಲಾವಣೆಯೆಂದರೆ ‘ಫಾರ್ಮ್-16’ ರದ್ದತಿ. ಅದರ ಜಾಗದಲ್ಲಿ ಈಗ ‘ಫಾರ್ಮ್ 130’ (Form 130) ಪರಿಚಯಿಸಲಾಗಿದೆ. ಇದು ಸಂಪೂರ್ಣವಾಗಿ ಆನ್ಲೈನ್ ಆಧಾರಿತವಾಗಿದ್ದು, TRACES ಪೋರ್ಟಲ್ ಮೂಲಕವೇ ಲಭ್ಯವಿರುತ್ತದೆ.
-
ಭಾಗ A: ಉದ್ಯೋಗದಾತ ಮತ್ತು ಉದ್ಯೋಗಿಯ ವಿವರ.
-
ಭಾಗ B: ಪಾವತಿಸಿದ ಸಂಬಳ ಮತ್ತು ಕಡಿತಗೊಳಿಸಲಾದ ಟಿಡಿಎಸ್ (TDS) ಸಾರಾಂಶ.
-
ಭಾಗ C: ತೆರಿಗೆ ವಿನಾಯಿತಿಗಳು ಮತ್ತು ಆದಾಯದ ವಿವರವಾದ ಲೆಕ್ಕಾಚಾರ.
2026ರ ಜೂನ್ ವರೆಗೆ ಹಳೆಯ ಫಾರ್ಮ್-16 ಚಾಲ್ತಿಯಲ್ಲಿದ್ದರೂ, 2027ರ ಜೂನ್ ವೇಳೆಗೆ ಮೊದಲ ‘ಫಾರ್ಮ್ 130’ ವಿತರಿಸಲಾಗುವುದು.
ಐಟಿಆರ್ ಸಲ್ಲಿಕೆಗೆ ಇಂದೇ ಕೊನೆಯ ದಿನ
ನೀವು ಇನ್ನೂ ಕಳೆದ ಸಾಲಿನ ಆದಾಯ ತೆರಿಗೆ ರಿಟರ್ನ್ಸ್ (ITR) ಸಲ್ಲಿಸದಿದ್ದರೆ, ಇಂದು (ಮಾರ್ಚ್ 31) ಕೊನೆಯ ಅವಕಾಶ. ನಿಗದಿತ ಸಮಯದೊಳಗೆ ಸಲ್ಲಿಸಲು ವಿಫಲರಾದವರು ದಂಡದೊಂದಿಗೆ ಸಲ್ಲಿಸಲು ಇದು ಅಂತಿಮ ಗಡುವು. ಇದರ ನಂತರ ಅಪ್ಡೇಟೆಡ್ ಐಟಿಆರ್ ಸಲ್ಲಿಸಬಹುದಾದರೂ, ಅದಕ್ಕೆ ಭಾರಿ ಪ್ರಮಾಣದ ದಂಡ ಮತ್ತು ಹೆಚ್ಚಿನ ತೆರಿಗೆಯನ್ನು ಭರಿಸಬೇಕಾಗುತ್ತದೆ.





