ಭಾರತವು ಜಪಾನ್‌ನ್ನು ಹಿಂದಿಕ್ಕಿ ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ ಎಂದು ನೀತಿ ಆಯೋಗದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಬಿ.ವಿ.ಆರ್. ಸುಬ್ರಹ್ಮಣ್ಯಂ ಘೋಷಿಸಿದ್ದಾರೆ. ಅಂತಾರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್) ಇತ್ತೀಚಿನ ದತ್ತಾಂಶವನ್ನು ಉಲ್ಲೇಖಿಸಿ, ಭಾರತದ ಆರ್ಥಿಕತೆಯು 4 ಟ್ರಿಲಿಯನ್ ಯುಎಸ್ ಡಾಲರ್‌ಗಳ ಮೈಲಿಗಲ್ಲನ್ನು ತಲುಪಿದೆ ಎಂದು ಅವರು ತಿಳಿಸಿದ್ದಾರೆ.
‘ವಿಕಸಿತ ಭಾರತ 2047’ ಕುರಿತು 10ನೇ ನೀತಿ ಆಯೋಗದ ಆಡಳಿತ ಮಂಡಳಿ ಸಭೆಯ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸುಬ್ರಹ್ಮಣ್ಯಂ, “ನಾವು ಇಂದು ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಿದ್ದೇವೆ. ಇದು ಐಎಂಎಫ್‌ನ ದತ್ತಾಂಶದ ಆಧಾರದ ಮೇಲೆ ಹೇಳುತ್ತಿರುವೆ. ಅಮೆರಿಕ, ಚೀನಾ ಮತ್ತು ಜರ್ಮನಿಯ ನಂತರ ಭಾರತವು ಜಪಾನ್‌ಗಿಂತ ಮುಂದಿದೆ. ನಾವು ಪ್ರಸ್ತುತ ಯೋಜನೆಗಳು ಮತ್ತು ಕಾರ್ಯತಂತ್ರಗಳೊಂದಿಗೆ ಮುಂದುವರಿದರೆ, ಒಂದೆರಡು ವರ್ಷಗಳಲ್ಲಿ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವ ಸಾಧ್ಯತೆಯಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಐಎಂಎಫ್‌ನ ಏಪ್ರಿಲ್ 2025 ವರ್ಲ್ಡ್ ಎಕನಾಮಿಕ್ ಔಟ್‌ಲುಕ್ ವರದಿಯ ಪ್ರಕಾರ, 2026ರ ಆರ್ಥಿಕ ವರ್ಷದಲ್ಲಿ ಭಾರತದ ನಾಮಿನಲ್ ಜಿಡಿಪಿ 4,187.017 ಬಿಲಿಯನ್ ಯುಎಸ್ ಡಾಲರ್‌ಗಳಿಗೆ ತಲುಪುವ ನಿರೀಕ್ಷೆಯಿದೆ. ಇದು ಜಪಾನ್‌ನ ಅಂದಾಜು ಜಿಡಿಪಿಯಾದ 4,186.431 ಬಿಲಿಯನ್ ಯುಎಸ್ ಡಾಲರ್‌ಗಿಂತ ಸ್ವಲ್ಪ ಹೆಚ್ಚಾಗಿದೆ. 2024ರವರೆಗೆ ಭಾರತವು ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿತ್ತು, ಆದರೆ ಈಗ ಈ ಮೈಲಿಗಲ್ಲನ್ನು ದಾಟಿದೆ.