ಮಾರುಕಟ್ಟೆ ಏರಿಳಿತ, ಚೀನಾದ ಸುಳ್ಳು ಸುದ್ದಿ ತಂತ್ರ ವಿಫಲ!

Web 2025 05 13t173244.939

ಭಾರತ-ಪಾಕಿಸ್ತಾನ ಸಂಘರ್ಷದ ಸಂದರ್ಭದಲ್ಲಿ ಪಾಕಿಸ್ತಾನದ ಚೀನೀ ನಿರ್ಮಿತ ಜೆ-10 ಯುದ್ಧವಿಮಾನಗಳು ಭಾರತದ ಫ್ರಾನ್ಸ್ ನಿರ್ಮಿತ ರಫೇಲ್ ಜೆಟ್‌ಗಳನ್ನು ಹೊಡೆದುರುಳಿಸಿವೆ ಎಂಬ ಸುಳ್ಳು ಸುದ್ದಿಯು ಷೇರು ಮಾರುಕಟ್ಟೆಯಲ್ಲಿ ಗೊಂದಲ ಸೃಷ್ಟಿಸಿತು. ಈ ಸುದ್ದಿಯಿಂದ ಫ್ರಾನ್ಸ್‌ನ ಡಸೋ ಏವಿಯೇಶನ್ ಷೇರುಗಳು ಕುಸಿದರೆ, ಚೀನೀ ಡಿಫೆನ್ಸ್ ಕಂಪನಿಗಳ ಷೇರುಗಳು ಏರಿಕೆ ಕಂಡವು. ಆದರೆ, ಆಪರೇಷನ್ ಸಿಂದೂರ್‌ನ ವಾಸ್ತವಿಕ ಸತ್ಯ ಬೆಳಕಿಗೆ ಬಂದ ಬಳಿಕ, ಮಾರುಕಟ್ಟೆಯಲ್ಲಿ ತಿರುವು ಕಂಡುಬಂದಿದೆ.

ಭಾರತವು ಪಾಕಿಸ್ತಾನದ ವಿರುದ್ಧ ಆಪರೇಷನ್ ಸಿಂದೂರ್ ನಡೆಸಿದ ನಂತರ, ನಾನಾ ರೀತಿಯ ಊಹಾಪೋಹದ ಸುದ್ದಿಗಳು ಹರಡಿದವು. ಕೆಲವು ಜಾಗತಿಕ ಮಾಧ್ಯಮಗಳು ಪಾಕಿಸ್ತಾನದ ಪರವಾದ ಸುದ್ದಿಗಳನ್ನು ಎತ್ತಿತೋರಿಸಿದವು, ವಿಶೇಷವಾಗಿ ಚೀನೀ ನಿರ್ಮಿತ ಜೆ-10 ಜೆಟ್‌ಗಳು ಭಾರತದ ಮೂರು ರಫೇಲ್ ಜೆಟ್‌ಗಳನ್ನು ಧ್ವಂಸಗೊಳಿಸಿವೆ ಎಂಬ ಸುದ್ದಿಯನ್ನು ಪ್ರಕಟಿಸಿದವು. ಈ ಸುಳ್ಳು ನೆರೇಟಿವ್ ಭಾರತದ ಕೆಲವು ಮಾಧ್ಯಮಗಳಲ್ಲಿಯೂ ಪ್ರತಿಧ್ವನಿಸಿತು, ಚೀನೀ ಜೆಟ್‌ಗಳನ್ನು ರಫೇಲ್‌ಗಿಂತ ಉತ್ತಮವೆಂದು ಬಿಂಬಿಸಿತು.

ಷೇರು ಮಾರುಕಟ್ಟೆಯ ಏರಿಳಿತ

ಈ ಸುದ್ದಿಯ ಪರಿಣಾಮವಾಗಿ, ರಫೇಲ್ ಯುದ್ಧವಿಮಾನ ತಯಾರಿಸುವ ಡಸೋ ಏವಿಯೇಶನ್‌ನ ಷೇರುಗಳು ಮೇ 9ರಿಂದ ಕುಸಿತ ಕಂಡವು. ಇದಕ್ಕೆ ವಿರುದ್ಧವಾಗಿ, ಜೆ-10 ಜೆಟ್ ತಯಾರಿಸುವ ಚೀನಾದ ಚೆಂಗ್ಡು ಏರ್‌ಕ್ರಾಫ್ಟ್ ಕಂಪನಿ ಮತ್ತು ಪಿಎಲ್-15 ಕ್ಷಿಪಣಿ ತಯಾರಕ ಝುಝೋ ಹೊಂಗ್ಡಾ ಎಲೆಕ್ಟ್ರಾನಿಕ್ಸ್‌ನ ಷೇರುಗಳು ಏರಿಕೆಯಾದವು. ಆದರೆ, ಭಾರತದ ಸೇನಾಧಿಕಾರಿಗಳು ಚೀನೀ ಶಸ್ತ್ರಾಸ್ತ್ರಗಳ ದೌರ್ಬಲ್ಯವನ್ನು ಸಾಕ್ಷ್ಯ ಸಮೇತ ತೋರಿಸಿದ ಬಳಿಕ, ಮಾರುಕಟ್ಟೆಯಲ್ಲಿ ತಿದ್ದುಪಡಿ ಕಂಡುಬಂದಿದೆ. ಡಸೋ ಏವಿಯೇಶನ್ ಷೇರುಗಳು ಏರಿಕೆ ಕಂಡಿದ್ದರೆ, ಚೀನೀ ಡಿಫೆನ್ಸ್ ಕಂಪನಿಗಳ ಷೇರುಗಳು ಕುಸಿದಿವೆ. ಭಾರತದ ಬಿಇಎಲ್, ಎಚ್‌ಎಎಲ್‌ನಂತಹ ಡಿಫೆನ್ಸ್ ಕಂಪನಿಗಳ ಷೇರುಗಳಿಗೂ ಬೇಡಿಕೆ ಹೆಚ್ಚಿದೆ.

ಆಪರೇಷನ್ ಸಿಂದೂರ್‌ನಲ್ಲಿ ಭಾರತವು ಪಾಕಿಸ್ತಾನದ ಚೀನೀ ನಿರ್ಮಿತ ವಾಯು ರಕ್ಷಣಾ ವ್ಯವಸ್ಥೆಯ ದೌರ್ಬಲ್ಯವನ್ನು ಬಯಲಿಗೆಳೆಯಿತು. ಪಾಕಿಸ್ತಾನದ ವಾಯು ರಕ್ಷಣಾ ಕೋಟೆಯನ್ನು ವಿಶ್ವದ ಅತ್ಯುತ್ತಮವೆಂದು ಪರಿಗಣಿಸಲಾಗಿತ್ತಾದರೂ, ಭಾರತದ ರಫೇಲ್ ಜೆಟ್‌ಗಳು ಮತ್ತು ರಷ್ಯಾ, ಇಸ್ರೇಲ್, ದೇಶೀಯ ರಕ್ಷಣಾ ವ್ಯವಸ್ಥೆಗಳು ಇದನ್ನು ಭೇದಿಸಿತು. ಭಾರತವು ಪಾಕಿಸ್ತಾನದಿಂದ ಹಾರಿಬಂದ ನೂರಾರು ಡ್ರೋನ್‌ಗಳನ್ನು ಯಶಸ್ವಿಯಾಗಿ ತಡೆಯಿತು, ಚೀನೀ ಶಸ್ತ್ರಾಸ್ತ್ರಗಳ ಕಾರ್ಯಕ್ಷಮತೆಯ ಕೊರತೆಯನ್ನು ತೋರಿಸಿತು.

ಸುಳ್ಳು ಸುದ್ದಿಗಳು ಷೇರು ಮಾರುಕಟ್ಟೆಯ ಮೇಲೆ ತಾತ್ಕಾಲಿಕ ಪರಿಣಾಮ ಬೀರಿದರೂ, ಸತ್ಯ ಬೆಳಕಿಗೆ ಬಂದಾಗ ಹೂಡಿಕೆದಾರರ ವಿಶ್ವಾಸವು ಭಾರತೀಯ ಮತ್ತು ಫ್ರಾನ್ಸ್‌ನ ಡಿಫೆನ್ಸ್ ಕಂಪನಿಗಳ ಕಡೆಗೆ ತಿರುಗಿತು. ಪಾಕಿಸ್ತಾನಕ್ಕೆ ಎಫ್-16 ಸರಬರಾಜು ಮಾಡುವ ಅಮೆರಿಕದ ಲಾಕ್‌ಹೀಡ್ ಮಾರ್ಟಿನ್‌ನ ಷೇರುಗಳೂ ಕುಸಿತ ಕಂಡಿವೆ, ಇದು ಚೀನೀ ಮತ್ತು ಅಮೆರಿಕನ್ ಶಸ್ತ್ರಾಸ್ತ್ರಗಳ ಮೇಲಿನ ಅವಿಶ್ವಾಸವನ್ನು ತೋರಿಸುತ್ತದೆ.

Exit mobile version