ಮುಂಬೈ: ಕಳೆದ 25 ವರ್ಷಗಳ ಹೂಡಿಕೆ ಟ್ರೆಂಡ್‌ಗಳನ್ನು ಗಮನಿಸಿದರೆ, ಷೇರು ಮಾರುಕಟ್ಟೆ ಸೇರಿದಂತೆ ಇತರೆ ಎಲ್ಲಾ ಪ್ರಮುಖ ಆಸ್ತಿಗಳಿಗಿಂತ ಚಿನ್ನ ಮತ್ತು ಬೆಳ್ಳಿ ಮೇಲಿನ ಹೂಡಿಕೆ ಹೂಡಿಕೆದಾರರಿಗೆ ಹೆಚ್ಚು ಲಾಭ ತಂದುಕೊಟ್ಟಿದೆ ಎಂಬ ಅಚ್ಚರಿಯ ಸಂಗತಿ ಬಹಿರಂಗವಾಗಿದೆ. ಇತ್ತೀಚೆಗೆ ಚಿನ್ನ ಮತ್ತು ಬೆಳ್ಳಿ ದರ ಗಗನಕ್ಕೇರಿರುವ ನಡುವೆಯೇ ಇದು ಗೊತ್ತಾಗಿದೆ.
1999ರಲ್ಲಿ ಕೇವಲ 10 ಗ್ರಾಂ ಚಿನ್ನದ ಬೆಲೆ 4,400 ರೂ. ಇತ್ತು. ಆದರೆ 2024ರ ವೇಳೆಗೆ ಅದೇ ಚಿನ್ನದ ಬೆಲೆ 1.4 ಲಕ್ಷ ರೂ. ಮಟ್ಟ ತಲುಪಿದೆ. ಇದು ವರ್ಷಕ್ಕೆ ಸರಾಸರಿ ಶೇ.14.3ರಷ್ಟು ಕ್ರೋಡೀಕೃತ ವಾರ್ಷಿಕ ಬೆಳವಣಿಗೆ ದರ (CAGR) ದಾಖಲಿಸಿದೆ. ಇದೇ ರೀತಿ, 1999ರಲ್ಲಿ ಪ್ರತಿ ಕೆ.ಜಿ.ಗೆ 8,100 ರೂ. ಇದ್ದ ಬೆಳ್ಳಿ ಬೆಲೆ ಇಂದು 2.5 ಲಕ್ಷ ರೂ. ಸಮೀಪಕ್ಕೆ ಏರಿಕೆಯಾಗಿದೆ. ಬೆಳ್ಳಿಯು ಸಹ ಶೇ.14.1ರಷ್ಟು CAGR ದಾಖಲಿಸಿದೆ.
ಇದೇ ಅವಧಿಯಲ್ಲಿ ಭಾರತೀಯ ಷೇರು ಮಾರುಕಟ್ಟೆಯ ಪ್ರಮುಖ ಸೂಚ್ಯಂಕಗಳಾದ ನಿಫ್ಟಿ ಮತ್ತು ಸೆನ್ಸೆಕ್ಸ್ ಕೂಡ ಉತ್ತಮ ಬೆಳವಣಿಗೆ ಕಂಡಿದ್ದರೂ, ಚಿನ್ನ–ಬೆಳ್ಳಿಯ ಲಾಭಕ್ಕೆ ಸಮೀಪಿಸಲು ಸಾಧ್ಯವಾಗಿಲ್ಲ. ಕಳೆದ 25 ವರ್ಷಗಳಲ್ಲಿ ನಿಫ್ಟಿ ಸೂಚ್ಯಂಕವು ಶೇ.11.7 CAGR, ಸೆನ್ಸೆಕ್ಸ್ ಸೂಚ್ಯಂಕವು ಶೇ.11.5 CAGR ದಾಖಲಿಸಿದೆ. ಅಂದರೆ, ಷೇರು ಮಾರುಕಟ್ಟೆಗಿಂತ ಚಿನ್ನ ಮತ್ತು ಬೆಳ್ಳಿ ಹೂಡಿಕೆಯೇ ಹೆಚ್ಚು ಲಾಭದಾಯಕವೆಂದು ಈ ಅಂಕಿ-ಅಂಶಗಳು ಸ್ಪಷ್ಟಪಡಿಸುತ್ತವೆ.
ಆರ್ಥಿಕ ತಜ್ಞರ ಲೆಕ್ಕಾಚಾರ ಪ್ರಕಾರ, ಚಿನ್ನ–ಬೆಳ್ಳಿಯಷ್ಟೇ ಲಾಭ ಷೇರು ಮಾರುಕಟ್ಟೆಯಿಂದ ದೊರಕಬೇಕಾಗಿದ್ದರೆ, ಇಂದಿನ ಸುಮಾರು 80 ಸಾವಿರದ ಸೆನ್ಸೆಕ್ಸ್ ಸೂಚ್ಯಂಕ 1.6 ಲಕ್ಷದ ಮಟ್ಟದಲ್ಲಿರಬೇಕಿತ್ತು.
ಹೂಡಿಕೆಗೆ ಚಿನ್ನ–ಬೆಳ್ಳಿ ಏಕೆ ಮಹತ್ವ?
ನಿಪ್ಪಾನ್ ಇಂಡಿಯಾ ಮ್ಯೂಚುವಲ್ ಫಂಡ್‌ನ ಹಿರಿಯ ಅಧಿಕಾರಿಯಾಗಿರುವ ವಿಕ್ರಂ ಧವನ್ ಅವರ ಪ್ರಕಾರ, ಅಲ್ಪಾವಧಿಯಲ್ಲಿ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಏರಿಳಿತಗಳು ಸಹಜವಾಗಿದ್ದರೂ, ದೀರ್ಘಾವಧಿಯಲ್ಲಿ ಹೂಡಿಕೆ ವೈವಿಧ್ಯೀಕರಣ (Diversification) ಮಾಡುವವರಿಗೆ ಈ ಲೋಹಗಳು ಅತ್ಯುತ್ತಮ ಆಯ್ಕೆಯಾಗಿಯೇ ಮುಂದುವರಿಯುತ್ತವೆ. ಷೇರು, ಬಾಂಡ್, ರಿಯಲ್ ಎಸ್ಟೇಟ್ ಜೊತೆಗೆ ಚಿನ್ನ-ಬೆಳ್ಳಿ ಸೇರಿಸುವುದರಿಂದ ಹೂಡಿಕೆಯ ಅಪಾಯವನ್ನು ಕಡಿಮೆ ಮಾಡಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಭಾರತದಲ್ಲಿ ಸಾಂಪ್ರದಾಯಿಕವಾಗಿ ಚಿನ್ನ ಮತ್ತು ಬೆಳ್ಳಿ ಮೇಲಿನ ಬೇಡಿಕೆ ಆಭರಣಗಳ ಬಳಕೆಯಿಂದಲೇ ಹೆಚ್ಚಾಗಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಹೂಡಿಕೆದಾರರ ಮನಸ್ಥಿತಿಯಲ್ಲಿ ಬದಲಾವಣೆ ಕಂಡುಬಂದಿದ್ದು, ಚಿನ್ನ ಮತ್ತು ಬೆಳ್ಳಿ ಇಟಿಎಫ್‌ಗಳು (Exchange Traded Funds) ಹಾಗೂ ಡಿಜಿಟಲ್ ಚಿನ್ನದ ಮೂಲಕವೂ ಹೂಡಿಕೆ ವೇಗವಾಗಿ ಹೆಚ್ಚುತ್ತಿದೆ. ಇದರಿಂದ ಭೌತಿಕ ಚಿನ್ನ ಸಂಗ್ರಹಿಸುವ ತೊಂದರೆ ಇಲ್ಲದೆ, ಸುರಕ್ಷಿತ ಹಾಗೂ ಪಾರದರ್ಶಕ ಹೂಡಿಕೆ ಸಾಧ್ಯವಾಗಿದೆ.
