ನವದೆಹಲಿ: ಹೊಸ ಹಣಕಾಸು ವರ್ಷದ ಆರಂಭದ ದಿನವಾದ ಇಂದು (ಏಪ್ರಿಲ್ 1, 2026) ದೇಶದ ಲಕ್ಷಾಂತರ ಖಾಸಗಿ ವಲಯದ ನೌಕರರಿಗೆ ಕೇಂದ್ರ ಸರ್ಕಾರವು ಭರ್ಜರಿ ಸಿಹಿಸುದ್ದಿ ನೀಡಿದೆ. ಕಾರ್ಮಿಕ ಕಾಯ್ದೆಯಲ್ಲಿ ಮಹತ್ವದ ತಿದ್ದುಪಡಿಗಳನ್ನು ತರುವ ಮೂಲಕ ನೌಕರರ ವೇತನ ಶ್ರೇಣಿ, ಕೆಲಸದ ಅವಧಿ ಮತ್ತು ನಿವೃತ್ತಿ ಸೌಲಭ್ಯಗಳಲ್ಲಿ ಐತಿಹಾಸಿಕ ಬದಲಾವಣೆಗಳನ್ನು ಜಾರಿಗೆ ತರಲಾಗಿದೆ.
1. ಮೂಲ ವೇತನ (Basic Pay) ಮತ್ತು ಪಿಎಫ್ ಹೆಚ್ಚಳ
ಹೊಸ ನಿಯಮದ ಪ್ರಕಾರ, ಯಾವುದೇ ನೌಕರನ ಒಟ್ಟು ವೇತನದ (CTC) ಕನಿಷ್ಠ ಶೇ. 50 ರಷ್ಟು ಭಾಗ ಕಡ್ಡಾಯವಾಗಿ ‘ಮೂಲ ವೇತನ’ (Basic Salary) ಆಗಿರಬೇಕು. ಈ ಹಿಂದೆ ಇದು ಶೇ. 30 ರಷ್ಟಿತ್ತು. ಇದರಿಂದಾಗಿ ನೌಕರರ ಕೈಗೆ ಸಿಗುವ ಸಂಬಳ (Take Home Salary) ತುಸು ಕಡಿಮೆಯಾದರೂ, ಪಿಎಫ್ (PF) ಮತ್ತು ಗ್ರಾಚ್ಯುಯಿಟಿ ಮೊತ್ತ ಗಣನೀಯವಾಗಿ ಹೆಚ್ಚಾಗಲಿದ್ದು, ಭವಿಷ್ಯದ ಉಳಿತಾಯಕ್ಕೆ ಸಹಾಯವಾಗಲಿದೆ.
2. ಗ್ರಾಚ್ಯುಟಿ ಅವಧಿ 5 ವರ್ಷದಿಂದ 1 ವರ್ಷಕ್ಕೆ ಇಳಿಕೆ !
ನೌಕರರಿಗೆ ಸಿಕ್ಕಿರುವ ಅತ್ಯಂತ ದೊಡ್ಡ ರಿಲೀಫ್ ಎಂದರೆ ಅದು ಗ್ರಾಚ್ಯುಯಿಟಿ ನಿಯಮದ ಬದಲಾವಣೆ. ಈ ಹಿಂದೆ ಒಬ್ಬ ನೌಕರ ಗ್ರಾಚ್ಯುಟಿ ಪಡೆಯಲು ಒಂದೇ ಸಂಸ್ಥೆಯಲ್ಲಿ ಸತತ 5 ವರ್ಷ ಕೆಲಸ ಮಾಡುವುದು ಕಡ್ಡಾಯವಾಗಿತ್ತು. ಆದರೆ ಈಗ ಈ ಅವಧಿಯನ್ನು ಕೇವಲ 1 ವರ್ಷಕ್ಕೆ ಇಳಿಸಲಾಗಿದೆ. ಅಂದರೆ, ನೀವು ಒಂದು ಕಂಪನಿಯಲ್ಲಿ ಕೇವಲ ಒಂದು ವರ್ಷ ಕೆಲಸ ಮಾಡಿ ಹೊರಬಂದರೂ ಆ ಸಂಸ್ಥೆಯಿಂದ ಗ್ರಾಚ್ಯುಟಿ ಪಡೆಯಲು ಅರ್ಹರಾಗಿರುತ್ತೀರಿ.
3. 7ನೇ ತಾರೀಕಿನೊಳಗೆ ಸಂಬಳ ಕಡ್ಡಾಯ
ಇನ್ನು ಮುಂದೆ ಖಾಸಗಿ ಕಂಪನಿಗಳು ತಮ್ಮ ನೌಕರರಿಗೆ ಪ್ರತಿ ತಿಂಗಳ 7ನೇ ತಾರೀಕಿನೊಳಗೆ ಸಂಬಳ ನೀಡುವುದನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿದೆ. ಈ ಮೊದಲು 10ನೇ ತಾರೀಕಿನವರೆಗೆ ಕಾಲಾವಕಾಶವಿತ್ತು. ಇದರಿಂದಾಗಿ ಮಧ್ಯಮ ವರ್ಗದ ನೌಕರರು ತಮ್ಮ ಇಎಂಐ (EMI) ಮತ್ತು ಮನೆ ಬಾಡಿಗೆಗಳನ್ನು ಸಮಯಕ್ಕೆ ಸರಿಯಾಗಿ ಪಾವತಿಸಲು ಅನುಕೂಲವಾಗಲಿದೆ.
4. ಓವರ್‌ಟೈಮ್‌ಗೆ ಡಬಲ್ ಸಂಬಳ !
ದಿನಕ್ಕೆ 8 ಗಂಟೆಗಿಂತ ಹೆಚ್ಚು ಕಾಲ ಕೆಲಸ ಮಾಡಿಸಿದರೆ, ಹೆಚ್ಚುವರಿ ಅವಧಿಗೆ ಕಂಪನಿಗಳು ನೌಕರರಿಗೆ ಡಬಲ್ ಸಂಬಳ ನೀಡಬೇಕು. ಈ ಹಿಂದೆ ಇದು ರಾಜ್ಯ ಸರ್ಕಾರಗಳ ವಿವೇಚನೆಗೆ ಬಿಟ್ಟಿದ್ದರಿಂದ ಸರಿಯಾಗಿ ಜಾರಿಯಾಗುತ್ತಿರಲಿಲ್ಲ. ಈಗ ಕೇಂದ್ರವೇ ಇದನ್ನು ಕಡ್ಡಾಯಗೊಳಿಸಿದೆ.
5. ಕೆಲಸದ ಅವಧಿ ಮತ್ತು ವಾರದ ರಜೆ
ಹೊಸ ನಿಯಮದಂತೆ ವಾರಕ್ಕೆ ಗರಿಷ್ಠ 48 ಗಂಟೆ ಹಾಗೂ ದಿನಕ್ಕೆ ಗರಿಷ್ಠ 12 ಗಂಟೆಗಳ ಕಾಲ ಮಾತ್ರ (ವಿಶೇಷ ಸಂದರ್ಭಗಳಲ್ಲಿ) ಕೆಲಸ ಮಾಡಿಸಬಹುದು. ಈ ಹಿಂದೆ ವಾರಕ್ಕೆ 60 ಗಂಟೆಗಳವರೆಗೆ ಕೆಲಸ ಮಾಡಿಸುವ ಅವಕಾಶವಿತ್ತು. ಇದು ನೌಕರರ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಕಾಪಾಡಲು ಸಹಕಾರಿಯಾಗಲಿದೆ.
6. ಕೇವಲ 2 ದಿನದಲ್ಲಿ ಫುಲ್ ಸೆಟಲ್‌ಮೆಂಟ್
ಕೆಲಸ ಬಿಟ್ಟ ನೌಕರರಿಗೆ ಬಾಕಿ ಇರುವ ಸಂಬಳ ಮತ್ತು ಇತರೆ ಸೌಲಭ್ಯಗಳ ವಿಲೇವಾರಿಗೆ (Full & Final Settlement) ಕಂಪನಿಗಳು ಈ ಹಿಂದೆ 30 ರಿಂದ 60 ದಿನಗಳನ್ನು ತೆಗೆದುಕೊಳ್ಳುತ್ತಿದ್ದವು. ಈಗ ಈ ಗಡುವನ್ನು ಕೇವಲ 2 ಕೆಲಸದ ದಿನಗಳಿಗೆ ಇಳಿಸಲಾಗಿದೆ. ಅಂದರೆ ಕೆಲಸ ಬಿಟ್ಟ ಎರಡೇ ದಿನದಲ್ಲಿ ನಿಮ್ಮ ಎಲ್ಲಾ ಬಾಕಿ ಹಣ ನಿಮ್ಮ ಖಾತೆಗೆ ಬರಲಿದೆ.
