ಸಿದ್ದಗಂಗಾ ಮಠದಲ್ಲಿ ಶಿವಕುಮಾರ ಶ್ರೀಗಳ 119ನೇ ಜಯಂತ್ಯುತ್ಸವದ ಸಂಭ್ರಮ

Untitled design 2026 04 01T103022.995

ತುಮಕೂರು: ಅಕ್ಷರ ದಾಸೋಹ ಮತ್ತು ಅನ್ನ ದಾಸೋಹದ ಮೂಲಕ ಕೋಟ್ಯಂತರ ಜನರ ಬಾಳಿನಲ್ಲಿ ಬೆಳಕಾದ ನಡೆದಾಡುವ ದೇವರು ಶಿವೈಕ್ಯ ಡಾ. ಶ್ರೀ ಶಿವಕುಮಾರ ಮಹಾಸ್ವಾಮಿಗಳವರ 119ನೇ ಜಯಂತ್ಯುತ್ಸವದ ಅಂಗವಾಗಿ ಇಂದು ತುಮಕೂರಿನ ಸಿದ್ದಗಂಗಾ ಮಠದಲ್ಲಿ ಹಬ್ಬದ ವಾತಾವರಣ ಸೃಷ್ಠಿಯಾಗಿದೆ. ಪ್ರಾತಃಕಾಲದಿಂದಲೇ ಮಠದ ಆವರಣದಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನಗಳು ಆರಂಭವಾಗಿದ್ದು, ಇಡೀ ಮಠವು ಹಬ್ಬದ ವಾತಾವರಣದಿಂದ ಕಳೆಗಟ್ಟಿದೆ.

ಶಿವೈಕ್ಯ ಶ್ರೀಗಳ ಜನ್ಮದಿನೋತ್ಸವದ ಪ್ರಯುಕ್ತ ಮಠದ ಗದ್ದುಗೆಯನ್ನು ವಿವಿಧ ಬಗೆಯ ಫಲ-ಪುಷ್ಪಗಳಿಂದ ಅತ್ಯಂತ ಆಕರ್ಷಕವಾಗಿ ಅಲಂಕರಿಸಲಾಗಿದೆ. ಸಿದ್ದಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳವರ ನೇತೃತ್ವದಲ್ಲಿ ಗದ್ದುಗೆಗೆ ವಿಶೇಷ ಅಭಿಷೇಕ ಮತ್ತು ಮಹಾಪೂಜೆ ನೆರವೇರಿತು. ಮಂತ್ರಘೋಷಗಳ ನಡುವೆ ನಡೆದ ಈ ಪೂಜಾ ಕೈಂಕರ್ಯಗಳನ್ನು ಕಣ್ತುಂಬಿಕೊಳ್ಳಲು ಸಾವಿರಾರು ಭಕ್ತರು ಮಠದತ್ತ ಧಾವಿಸುತ್ತಿದ್ದಾರೆ.

ರುದ್ರಾಕ್ಷಿ ಮಂಟಪದ ಮೆರವಣಿಗೆ

ಜಯಂತ್ಯುತ್ಸವದ ಪ್ರಮುಖ ಆಕರ್ಷಣೆಯಾಗಿ ಶಿವಕುಮಾರ ಶ್ರೀಗಳ ಪುತ್ಥಳಿಯನ್ನು ಹೊತ್ತ ರುದ್ರಾಕ್ಷಿ ಮಂಟಪದ ಮೆರವಣಿಗೆಯನ್ನು ಅದ್ದೂರಿಯಾಗಿ ಹಮ್ಮಿಕೊಳ್ಳಲಾಗಿತ್ತು. ಶ್ರೀಗಳ ಗದ್ದುಗೆಯಿಂದ ಆರಂಭವಾದ ಈ ಮೆರವಣಿಗೆಯು ಹೊಸ ಮಠದ ಬಸವಣ್ಣರ ಪುತ್ಥಳಿಯವರೆಗೂ ಸಾಗಿತು. ಕಲಶ ಹೊತ್ತ ನೂರಾರು ಸುಮಂಗಲೆಯರು ಮಂಟಪಕ್ಕೆ ಪೂರ್ಣಕುಂಭ ಸ್ವಾಗತ ಕೋರಿದರು. ಭಜನಾ ತಂಡಗಳು ಮತ್ತು ಜಾನಪದ ಕಲಾತಂಡಗಳು ಮೆರವಣಿಗೆಯ ಮೆರುಗನ್ನು ಹೆಚ್ಚಿಸಿದವು.

ಈ ಬಾರಿಯ ಜಯಂತ್ಯುತ್ಸವ ವಿಶೇಷವಾಗಿ ಭಾರತದ ಗೌರವಾನ್ವಿತ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಠಕ್ಕೆ ಆಗಮಿಸುತ್ತಿದ್ದಾರೆ. ಬೆಳಗ್ಗೆ 10:30ಕ್ಕೆ ಮಠಕ್ಕೆ ತಲುಪಲಿರುವ ರಾಷ್ಟ್ರಪತಿಗಳು, ಶಿವಕುಮಾರ ಶ್ರೀಗಳ ಗದ್ದುಗೆಗೆ ನಮನ ಸಲ್ಲಿಸಲಿದ್ದಾರೆ. ನಂತರ ಮಧ್ಯಾಹ್ನ 12:30ರವರೆಗೆ ಮಠದ ವಿವಿಧ ಶೈಕ್ಷಣಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ರಾಷ್ಟ್ರಪತಿಗಳ ಭೇಟಿಯ ಹಿನ್ನೆಲೆಯಲ್ಲಿ ಮಠದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.

Exit mobile version