ಬಿಗ್ ಬಾಸ್ ತಮಿಳು ನಿರೂಪಕ ವಿಜಯ್ ಸೇತುಪತಿ ಅವರು ಕಳೆದ ವಾರ ವೇದಿಕೆಯ ಮೇಲೆ ಆಡಿದ್ದ ಕೆಲ ಮಾತುಗಳನ್ನು ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರ ವಿರುದ್ಧ ಆಡಲಾದ ಮಾತುಗಳು ಎಂದು ಬಿಂಬಿಸಲಾಗಿತ್ತು. ಇದೀಗ ಈ ವಿವಾದದ ಕುರಿತು ವಿಜಯ್ ಸೇತುಪತಿ ಅವರು ಸ್ಪಷ್ಟನೆ ನೀಡಿದ್ದಾರೆ. ತಮ್ಮ ಹೇಳಿಕೆ ಕೇವಲ ಬಿಗ್ ಬಾಸ್ ಸ್ಪರ್ಧಿಗಳ ಕುರಿತಾಗಿತ್ತೇ ಹೊರತು, ಹೊರಗಿನವರ ಬಗ್ಗೆ ಅಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಕಳೆದ ವಾರ ಬಿಗ್ ಬಾಸ್ ನಿರೂಪಣೆ ಮಾಡುವಾಗ ವಿಜಯ್ ಸೇತುಪತಿ ಅವರು ಮನೆಯ ಸದಸ್ಯರ ಬಗ್ಗೆ ಮಾತನಾಡಿದ್ದರು. ‘ನಾಯಕತ್ವ ಎಂದರೇನು ಎಂದು ತಿಳಿಯದೆ, ನಾಯಕತ್ವ ಎಂದರೇನು ಎಂದು ಅರ್ಥಮಾಡಿಕೊಳ್ಳದೆ ಭರವಸೆಗಳನ್ನು ನೀಡಿ, ನಂತರ ಸಮಸ್ಯೆಗಳು ಮತ್ತು ಜವಾಬ್ದಾರಿಗಳು ಬಂದಾಗ ಎದುರಾಳಿಯನ್ನು ದೂಷಿಸಿ ಓಡಿಹೋಗುವುದು ನಾಯಕನ ಗುಣವಲ್ಲ. ಅದು ವಂಚನೆ’ ಎಂದು ಸೇತುಪತಿ ಹೇಳಿದ್ದರು. ಈ ಹೇಳಿಕೆಯನ್ನು ಎಲ್ಲರೂ ಸಿಎಂ ವಿಜಯ್‌ಗೆ ಲಿಂಕ್ ಮಾಡಿದ್ದರು. ಸಿಎಂ ವಿಜಯ್ ಕುರಿತಾಗಿ ವಿಜಯ್ ಸೇತುಪತಿ ಅವರು ಪರೋಕ್ಷವಾಗಿ ಈ ಮಾತುಗಳನ್ನು ಹೇಳಿದ್ದಾರೆ ಎನ್ನಲಾಗಿತ್ತು.
ವಿಜಯ್ ಸೇತುಪತಿ ಅವರ ಆ ಹೇಳಿಕೆ ಬಳಿಕ ಸಿಎಂ ವಿಜಯ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ತೀವ್ರ ಟ್ರೋಲಿಂಗ್ ನಡೆಸಿದ್ದರು. ಕೆಲ ಸಿನಿಮಾ ಸೆಲೆಬ್ರಿಟಿಗಳು ಸಹ ವಿಜಯ್ ಸೇತುಪತಿ ಅವರ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ್ದರು. ಈ ವಿವಾದವು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿತ್ತು.
ಆದರೆ ಈ ವಾರ ವಿಜಯ್ ಸೇತುಪತಿ ಅವರು ತಮ್ಮ ಹಿಂದಿನ ಹೇಳಿಕೆ ಕುರಿತಾಗಿ ಸ್ಪಷ್ಟನೆ ನೀಡಿದ್ದಾರೆ. ‘ಈ ವೇದಿಕೆಯ ಮೇಲೆ (ಬಿಗ್ ಬಾಸ್ ವೇದಿಕೆಯ ಮೇಲೆ) ಆಡುವ ಪ್ರತಿಯೊಂದು ಮಾತು, ಮಾಡುವ ಟೀಕೆ, ವಿಮರ್ಶೆಗಳೆಲ್ಲವೂ ಕೇವಲ ಬಿಗ್ ಬಾಸ್ ಸ್ಪರ್ಧಿಗಳ ಕುರಿತಾಗಿ ಆಗಿರುತ್ತದೆಯೇ ಹೊರತು, ಹೊರಗಿನವರ ಬಗ್ಗೆ ಆಗಿರುವುದಿಲ್ಲ ಎಂಬುದನ್ನು ನಾನು ಸ್ಪಷ್ಟಪಡಿಸುತ್ತಿದ್ದೇನೆ. ಇದನ್ನು ನಾನು ಹೇಳಿಯೇ ತಿಳಿಯಬೇಕು ಎಂದಿಲ್ಲ, ಜನರೇ ಅರ್ಥ ಮಾಡಿಕೊಳ್ಳುತ್ತಾರೆ ಎಂದೆನಿಸಿದ್ದೆ ಆದರೆ, ಹೇಳುವ ಪರಿಸ್ಥಿತಿ ಬಂದಿದೆ ಹಾಗಾಗಿ ಈಗ ಹೇಳುತ್ತಿದ್ದೇನೆ’ ಎಂದಿದ್ದಾರೆ ವಿಜಯ್ ಸೇತುಪತಿ.
ವಿಜಯ್ ಸೇತುಪತಿ ಅವರು ಬಿಗ್ ಬಾಸ್ ತಮಿಳು ನಿರೂಪಣೆ ಮಾಡುತ್ತಿದ್ದಾರೆ. ಕಳೆದ ಕೆಲ ವರ್ಷಗಳಿಂದಲೂ ಅವರೇ ಬಿಗ್ ಬಾಸ್‌ನ ನಿರೂಪಕರಾಗಿದ್ದು, ಅವರ ನಿರೂಪಣೆ ಪ್ರೇಕ್ಷಕರಿಗೆ ಸಹ ಹಿಡಿಸಿದೆ. ತಮಿಳು ಬಿಗ್ ಬಾಸ್‌ನ 10ನೇ ಸೀಸನ್ ಚಾಲ್ತಿಯಲ್ಲಿದ್ದು, ಈ ಬಾರಿ ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಬಿಗ್ ಬಾಸ್ ಸೀಸನ್ ಒಟ್ಟಿಗೆ ಶುರುವಾಗಿದೆ. ಈ ಹಿನ್ನೆಲೆ ವಿಜಯ್ ಸೇತುಪತಿ ಅವರ ಹೇಳಿಕೆಗಳು ಹೆಚ್ಚು ಗಮನ ಸೆಳೆದಿದ್ದವು.
ಸಿಎಂ ವಿಜಯ್ ಕುರಿತಾಗಿ ಬಿಗ್ ಬಾಸ್ ವೇದಿಕೆ ಮೇಲೆ ವಿಮರ್ಶೆ ಮಾಡಿದ್ದಾರೆ ಎಂಬ ಮಾತುಗಳು ಗಟ್ಟಿಯಾಗಿಯೇ ಕೇಳಿ ಬಂದಿದ್ದವು. ಕೆಲವರು ಈ ಬಗ್ಗೆ ವಿಜಯ್ ಸೇತುಪತಿ ಅವರನ್ನು ನಿಂದನೆ ಸಹ ಮಾಡಿದ್ದರು. ಆದರೆ ಈಗ ವಿಜಯ್ ಸೇತುಪತಿ ಸ್ಪಷ್ಟನೆ ನೀಡಿದ್ದಾರೆ. ತಮ್ಮ ಮಾತುಗಳನ್ನು ತಪ್ಪಾಗಿ ಅರ್ಥೈಸಿಕೊಳ್ಳಬಾರದು ಎಂದು ಅವರು ಮನವಿ ಮಾಡಿದ್ದಾರೆ.
