BBK 13: ಮಾಡರ್ನ್ ಮಹಾಕವಿ ಮಂಜ ಸೇರಿ ಮನೆಮಂದಿಗೆ ಕಿಚ್ಚನ ಕ್ಲಾಸ್!

Untitled design 2026 09 19T200610.610

ಬೆಂಗಳೂರು: ಬಿಗ್‌ಬಾಸ್ ಕನ್ನಡ ಮನೆಯೊಳಗೆ ಈ ವಾರ ನಡೆದ ಕಿತ್ತಾಟ, ವಾಗ್ವಾದ ಹಾಗೂ ಗೊಂದಲಗಳ ವಿಚಾರವಾಗಿ ‘ವಾರದ ಕಥೆ ಕಿಚ್ಚನ ಜೊತೆ’ ವೇದಿಕೆಯಲ್ಲಿ ನಿರೂಪಕ ಕಿಚ್ಚ ಸುದೀಪ್‌ ಸ್ಪರ್ಧಿಗಳಿಗೆ ಖಡಕ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಮಾಡರ್ನ್ ಮಹಾಕವಿ ಮಂಜ ಸೇರಿದಂತೆ ಹಲವು ಸ್ಪರ್ಧಿಗಳ ವರ್ತನೆ ಕುರಿತು ಸುದೀಪ್‌ ನೇರವಾಗಿ ಪ್ರಶ್ನೆ ಮಾಡಿರುವುದು ಪ್ರೋಮೊದಲ್ಲಿ ಗಮನ ಸೆಳೆದಿದೆ.

ಬಿಗ್‌ಬಾಸ್ ಮನೆಯೊಳಗೆ ಈ ವಾರ ಹಲವು ಕಾರಣಗಳಿಗೆ ಸ್ಪರ್ಧಿಗಳ ನಡುವೆ ಮಾತಿನ ಚಕಮಕಿ ನಡೆದಿತ್ತು. ಆಟದ ವಿಚಾರದಿಂದ ಹಿಡಿದು ಮನೆಯ ಸ್ವಚ್ಛತೆ, ಉಸ್ತುವಾರಿ, ಆಹಾರ ಸೇರಿದಂತೆ ಹಲವು ವಿಷಯಗಳು ಪರಸ್ಪರ ಮನಸ್ತಾಪಕ್ಕೆ ಕಾರಣವಾಗಿದ್ದವು. ಹೀಗಾಗಿ ಈ ಎಲ್ಲಾ ಬೆಳವಣಿಗೆಗಳ ಬಗ್ಗೆ ಸುದೀಪ್‌ ಸ್ಪರ್ಧಿಗಳೊಂದಿಗೆ ಚರ್ಚಿಸಿರುವುದು ಪ್ರೋಮೊದಲ್ಲಿ ಕಂಡುಬಂದಿದೆ.

ಮಾಡರ್ನ್ ಮಹಾಕವಿ ಮಂಜನ ವರ್ತನೆಯ ಬಗ್ಗೆ ಸುದೀಪ್‌ ಟಾಂಗ್ ನೀಡಿದ್ದಾರೆ. ಆಟದ ವೇಳೆ ಸೌಂದರ್ಯ ಶೆಟ್ಟಿ ಮಂಜನಿಗೆ ಹೊಡೆದಿರುವ ವಿಚಾರವೂ ಮನೆಯಲ್ಲಿ ಚರ್ಚೆಗೆ ಕಾರಣವಾಗಿತ್ತು. ಇದೇ ವಿಚಾರವಾಗಿ ಮಂಜ ಉಸ್ತುವಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಆಟದ ವೇಳೆ ನಡೆದ ಘಟನೆಗಳ ಬಗ್ಗೆ ಮಂಜ ಬಳಸಿದ ಪದಗಳು ಹಾಗೂ ಅವರ ವರ್ತನೆಯ ಬಗ್ಗೆಯೂ ಸುದೀಪ್‌ ಪ್ರಶ್ನೆ ಮಾಡಿರುವಂತೆ ಪ್ರೋಮೊದಲ್ಲಿ ಕಾಣಿಸಿದೆ.

ಇನ್ನು ಆಟದ ಉಸ್ತುವಾರಿ ವಿಚಾರದಲ್ಲೂ ಕಿರಣ್‌ ಶಾಸ್ತ್ರಿ ಪದೇಪದೆ ಗರಂ ಆಗಿರುವುದು ಮನೆಯ ವಾತಾವರಣವನ್ನು ಮತ್ತಷ್ಟು ಬಿಸಿಗೊಳಿಸಿತ್ತು. ಮತ್ತೊಂದೆಡೆ ಮೊಟ್ಟೆ ವಿಚಾರವಾಗಿ ಮಂಜ ಹಾಗೂ ಲಿಖಿತ್‌ ವಿರುದ್ಧ ಬೇಸರಗೊಂಡಿದ್ದ ಅವಿನಾಶ್‌, ಮನೆಯಿಂದಲೇ ಹೊರಹೋಗುವುದಾಗಿ ಹೇಳಿ ರಂಪಾಟ ಮಾಡಿದ್ದರು ಎನ್ನಲಾಗಿದೆ. ಈ ಎಲ್ಲಾ ಬೆಳವಣಿಗೆಗಳು ಮನೆಯ ವಾತಾವರಣದ ಮೇಲೆ ಪರಿಣಾಮ ಬೀರಿದ್ದವು.

ಈ ನಡುವೆ ಮಂಜನಿಗೆ ಸುದೀಪ್‌ ನೀಡಿರುವ ಟಾಂಗ್‌ ಕೂಡ ಪ್ರೋಮೊದ ಪ್ರಮುಖ ಹೈಲೈಟ್ ಆಗಿದೆ. ಸುದೀಪ್‌ ಅವರನ್ನು ‘ಅಣ್ಣ’ ಎಂದು ಮಂಜ ಕರೆದಾಗ, ಅದಕ್ಕೆ ಪ್ರತಿಕ್ರಿಯಿಸಿದ ಕಿಚ್ಚ, ‘ನಾನು ಅಣ್ಣ ಅಂತ ಎನಿಸಿಕೊಳ್ಳಬೇಕಾದರೆ ತಮ್ಮನಿಗೆ ಕೆಲವು ಬೆಲೆ ಇರಬೇಕು ಸರ್’ ಎಂದು ಹೇಳಿದ್ದಾರೆ. ಮಂಜನ ಮಾತಿನ ಶೈಲಿಯಲ್ಲೇ ಸುದೀಪ್‌ ನೀಡಿರುವ ಈ ಪ್ರತಿಕ್ರಿಯೆ ಗಮನ ಸೆಳೆದಿದೆ.

ಮನೆಯ ಸದಸ್ಯರ ಬಗ್ಗೆ ಮಾತನಾಡುವ ಸಂದರ್ಭದಲ್ಲಿ ಮಂಜ ಬಳಸುತ್ತಿದ್ದ ಕೆಲವು ಪದಗಳನ್ನೇ ಸುದೀಪ್‌ ಬಳಸಿಕೊಂಡು ಅವರಿಗೆ ತಿರುಗೇಟು ನೀಡಿರುವುದು ಪ್ರೋಮೊದಲ್ಲಿ ಕಂಡುಬಂದಿದೆ. ಈ ಮೂಲಕ ಸ್ಪರ್ಧಿಗಳು ತಮ್ಮ ಮಾತು ಹಾಗೂ ವರ್ತನೆಯ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂಬ ಸಂದೇಶವನ್ನು ಸುದೀಪ್‌ ನೀಡಿದ್ದಾರೆ.

ಇದರ ಜೊತೆಗೆ ಬಿಗ್‌ಬಾಸ್ ಕಾರ್ಯಕ್ರಮವನ್ನು ವೀಕ್ಷಿಸುತ್ತಿರುವ ಕೋಟ್ಯಂತರ ಕನ್ನಡಿಗರ ಬಗ್ಗೆಯೂ ಸುದೀಪ್‌ ಮಾತನಾಡಿದ್ದಾರೆ. ‘ಇಷ್ಟು ಜನ ಶೋ ನೋಡುತ್ತಿದ್ದಾರೆ ಅಂತ ತಾನೆ ನೀವು ಹಿಂಗೆಲ್ಲ ಆಡ್ತಿರೋದು. ಅಷ್ಟು ಜನ 12 ಸೀಸನ್‌ನಿಂದ ಸಂಪಾದಿಸಿರುವ ಆಸ್ತಿ’ ಎಂದು ಸುದೀಪ್‌ ಹೇಳಿದ್ದಾರೆ.

ಮುಂದುವರಿದು, ‘ಯಾರೋ ನಾಲ್ಕು ಜನರಿಗೋಸ್ಕರ, ಕೋಟಿ ಕೋಟಿ ಕನ್ನಡಿಗರನ್ನು ಕಳೆದುಕೊಳ್ಳಲು ನಾವ್ಯಾರು ತಯಾರಿಲ್ಲ’ ಎಂದು ಮನೆಯ ಸದಸ್ಯರ ವರ್ತನೆಯ ಬಗ್ಗೆ ಗರಂ ಆಗಿದ್ದಾರೆ. ಕಾರ್ಯಕ್ರಮವನ್ನು ವೀಕ್ಷಿಸುವ ಪ್ರೇಕ್ಷಕರ ವಿಶ್ವಾಸ ಹಾಗೂ ಕಾರ್ಯಕ್ರಮದ ಘನತೆಯನ್ನು ಉಳಿಸಿಕೊಳ್ಳುವ ಜವಾಬ್ದಾರಿ ಸ್ಪರ್ಧಿಗಳ ಮೇಲೂ ಇದೆ ಎಂಬ ರೀತಿಯಲ್ಲಿ ಸುದೀಪ್‌ ಮಾತುಗಳು ಮೂಡಿಬಂದಿವೆ.

ಸಾಮಾನ್ಯವಾಗಿ ವಾರದ ಕಥೆ ಕಿಚ್ಚನ ಜೊತೆ ಎಪಿಸೋಡ್‌ನಲ್ಲಿ ಮನೆಯೊಳಗಿನ ಪ್ರಮುಖ ಘಟನೆಗಳನ್ನು ಚರ್ಚಿಸುವ ಸುದೀಪ್‌, ತಪ್ಪು ಕಂಡುಬಂದಾಗ ಸ್ಪರ್ಧಿಗಳಿಗೆ ನೇರವಾಗಿ ಬುದ್ಧಿವಾದ ಹೇಳುತ್ತಾರೆ. ಈ ವಾರವೂ ಹಲವು ವಿಚಾರಗಳು ಚರ್ಚೆಗೆ ಬರುವ ಸಾಧ್ಯತೆ ಇದ್ದು, ಮಂಜ, ಅವಿನಾಶ್‌, ಲಿಖಿತ್‌, ಕಿರಣ್‌ ಶಾಸ್ತ್ರಿ ಸೇರಿದಂತೆ ಹಲವು ಸ್ಪರ್ಧಿಗಳ ವರ್ತನೆ ಕುರಿತು ಕಿಚ್ಚ ಏನು ಹೇಳಲಿದ್ದಾರೆ ಎಂಬ ಕುತೂಹಲ ಮೂಡಿದೆ.

Exit mobile version