“ಒಂದು ವರ್ಷ ಕಣ್ಣೋಟದಲ್ಲೇ ಪ್ರೀತಿ”: ಬಿಗ್‌ ಬಾಸ್‌ ಮನೆಯಲ್ಲಿ ಕ್ರೇಜಿ ಸ್ಟಾರ್‌ ರಿಯಲ್‌ ಲವ್‌ ಸ್ಟೋರಿ!

Untitled design 2025 12 18T210331.239

ಬಿಗ್‌ ಬಾಸ್‌ ಕನ್ನಡ ಸೀಸನ್‌ 12ರ ಮನೆಯಲ್ಲಿ ಈ ಬಾರಿ ಪ್ರೇಕ್ಷಕರಿಗೆ ಸಿಕ್ಕಿದ್ದು ಕೇವಲ ಸಿನಿಮಾ ಪ್ರಚಾರವಲ್ಲ, ಬದಲಾಗಿ ಕ್ರೇಜಿ ಸ್ಟಾರ್‌ ವಿ. ರವಿಚಂದ್ರನ್‌ ಅವರ ಜೀವನದ ಅತ್ಯಂತ ರೋಮ್ಯಾಂಟಿಕ್‌ ಅಧ್ಯಾಯ. ಅತಿಥಿಯಾಗಿ ಮನೆಗೆ ಕಾಲಿಟ್ಟ ರವಿಚಂದ್ರನ್‌, ತಮ್ಮ ಕಾಲೇಜು ದಿನಗಳ ಪ್ರೀತಿಯ ನೆನಪುಗಳನ್ನು ಹಂಚಿಕೊಂಡು ಮನೆಮಂದಿಯನ್ನೂ, ವೀಕ್ಷಕರನ್ನೂ ಭಾವುಕರನ್ನಾಗಿಸಿದ್ದಾರೆ.

ರಾಶಿಕಾ ಶೆಟ್ಟಿ ಅಭಿನಯದ ‘ಪ್ಯಾರ್‌’ ಸಿನಿಮಾದಲ್ಲಿ ತಂದೆ ಪಾತ್ರದಲ್ಲಿ ನಟಿಸಿರುವ ರವಿಚಂದ್ರನ್‌, ಚಿತ್ರದ ಪ್ರಮೋಷನ್‌ಗಾಗಿ ಬಿಗ್‌ ಬಾಸ್‌ ಮನೆಗೆ ಆಗಮಿಸಿದ್ದರು. ಅವರೊಂದಿಗೆ ಚಿತ್ರದ ನಾಯಕ ಭರತ್‌ ಕೂಡ ಇದ್ದರು. ಆದರೆ, ಪ್ರೋಮೋ ಬಿಡುಗಡೆಯಾದ ತಕ್ಷಣವೇ ಎಲ್ಲರ ಗಮನ ಸೆಳೆದಿದ್ದು ರವಿಚಂದ್ರನ್‌ ಹೇಳಿದ ರಿಯಲ್‌ ಲವ್‌ ಸ್ಟೋರಿ.

ಮನೆಯ ಎಲ್ಲಾ ಸದಸ್ಯರ ಎದುರು ಮಾತನಾಡಿದ ಕ್ರೇಜಿ ಸ್ಟಾರ್‌, ತಮ್ಮ ಕಾಲೇಜು ದಿನಗಳ ಸಿಹಿ ನೆನಪುಗಳನ್ನು ತೆರೆದಿಟ್ಟರು.
“ನಾನು ಕಾಲೇಜಿಗೆ ಹೋಗುವಾಗ ‘ನಾ ನಿನ್ನ ಮರೆಯಲಾರೆ’ ಸಿನಿಮಾದಲ್ಲಿ ಡಾ. ರಾಜ್‌ಕುಮಾರ್‌ ಓಡಿಸಿದ್ದ ಅದೇ ಬೈಕ್‌ ಅನ್ನು ಬಳಸುತ್ತಿದ್ದೆ. ಕಾಲೇಜಿನ ಕಾಂಪೌಂಡ್‌ ದಾಟುತ್ತಿದ್ದಂತೆ ಹತ್ತು-ಹದಿನೈದು ಹುಡುಗಿಯರು ನಿಂತಿರುತ್ತಿದ್ದರು. ಆ ಬೈಕ್‌ ಸೌಂಡ್‌ಗೆ ಒಂದು ಹುಡುಗಿ ನನ್ನತ್ತ ತಿರುಗಿ ನೋಡಿದಳು. ಆ ಕ್ಷಣದ ಅವಳ ನಗು… ಅದೇ ನನ್ನ ಮೊದಲ ಪ್ರೀತಿ,” ಎಂದು ರವಿಚಂದ್ರನ್‌ ನೆನಪು ಹಂಚಿಕೊಂಡರು.

“ನಾನು ಅವಳಿಗೆ ‘ಐ ಲವ್‌ ಯು’ ಎಂದು ಹೇಳಲು ಒಂದು ವರ್ಷ ಸಮಯ ತೆಗೆದುಕೊಂಡೆ. ಆದರೆ ಆ ಒಂದು ವರ್ಷ ನಾವು ಇಬ್ಬರೂ ಕಣ್ಣುಗಳಲ್ಲೇ ಪ್ರೀತಿ ಮಾಡುತ್ತಿದ್ದೆವು. ಮಾತಾಡದೇ ಇದ್ದರೂ, ಕಣ್ಣಲ್ಲಿ ಎಲ್ಲವೂ ಹೇಳುತ್ತಿದ್ದೆವು,” ಎಂದು ಅವರು ಹೇಳಿದರು..

ಒಂದು ದಿನ ಧೈರ್ಯ ಮಾಡಿ ಅವಳೊಂದಿಗೆ ಮಾತನಾಡಬೇಕು ಎಂದು ನಿರ್ಧರಿಸಿದ ರವಿಚಂದ್ರನ್‌, ಬೈಕ್‌ ಬಿಟ್ಟು ಕಾರಿನಲ್ಲಿ ಕಾಲೇಜಿಗೆ ಹೋಗಿದ್ದರು. “ಅವಳು ಎದುರಿಗೆ ಬರುತ್ತಿದ್ದಾಗ ನಾನು ಕಾರಿನಿಂದ ಇಳಿದು, ‘ಎಕ್ಸ್‌ಕ್ಯೂಸ್‌ ಮೀ, ನಿಮ್ಮನ್ನು ಡ್ರಾಪ್‌ ಮಾಡಬಹುದಾ?’ ಎಂದು ಕೇಳಿದೆ. ಆದರೆ ಅವಳು ‘ನೋ ಥ್ಯಾಂಕ್ಸ್‌’ ಎಂದು ಹೇಳಿ ಹೋಗಿಬಿಟ್ಟಳು,” ಎಂದು ಅವರು ನೋವಿನೊಂದಿಗೆ ವಿವರಿಸಿದರು.

“ನಾನು ಒಂದು ವಾರ ಕಾಲೀಜ್‌ಗೇ ಹೋಗಲಿಲ್ಲ,” ಎಂದು ಹೇಳಿದಾಗ ಮನೆಮಂದಿಗೆ ಅಚ್ಚರಿಯಾಗಿದೆ. ಆದರೆ, ಅದಾದ ನಂತರ ನಡೆದ ಘಟನೆ ಅವರ ಪ್ರೇಮಕಥೆಗೆ ಹೊಸ ತಿರುವು ನೀಡಿತ್ತು.

“ಒಂದು ದಿನ ನಮ್ಮ ಮನೆಗೆ ಫೋನ್‌ ಕಾಲ್‌ ಬಂತು. ಅದು ಅವಳೇ. ಹೇಗೋ ಮಾಡಿ ನನ್ನ ಮನೆ ಫೋನ್‌ ನಂಬರ್‌ ಹುಡುಕಿ ಕರೆ ಮಾಡಿದ್ದಳು. ಅಲ್ಲಿಂದ ನಮ್ಮ ಮಾತುಕತೆ ಶುರು ಆಯಿತು,” ಎಂದು ರವಿಚಂದ್ರನ್‌ ಮನದಾಳದ ಮಾತು ಹಂಚಿಕೊಂಡರು. ಈ ಮಾತು ಕೇಳುತ್ತಿದ್ದಂತೆ ಬಿಗ್‌ ಬಾಸ್‌ ಮನೆಯೊಳಗೆ ಕುತೂಹಲ ಹೆಚ್ಚಾಯಿತು.

ಆದರೆ ಈ ಪ್ರೀತಿ ಮುಂದೇನು ಆಯಿತು? ಅದು ಮದುವೆಯವರೆಗೂ ಹೋದಿತೇ ಅಥವಾ ಬ್ರೇಕಪ್‌ನೊಂದಿಗೆ ಅಂತ್ಯವಾಯಿತೇ? ಆ ಹುಡುಗಿ ಇಂದಿಗೆ ಏನಾದಳು? ಈ ಎಲ್ಲ ಪ್ರಶ್ನೆಗಳಿಗೂ ಉತ್ತರವನ್ನು ರವಿಚಂದ್ರನ್‌ ಇಂದಿನ (ಡಿ.18) ಸಂಚಿಕೆಯಲ್ಲಿ ಬಹಿರಂಗಪಡಿಸುವುದಾಗಿ ತಿಳಿಸಿದ್ದಾರೆ.

Exit mobile version