ರಾಮನಗರ: ಕನ್ನಡದ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್’ ಸೀಸನ್ 12ರ ಚಿತ್ರೀಕರಣ ಅಚಾನಕ್ ಸ್ಥಗಿತಗೊಳಿಸಲಾಗಿದೆ. ಮಾಲಿನ್ಯ ನಿಯಂತ್ರಣ ನಿಯಮ ಉಲ್ಲಂಘನೆಯ ಕಾರಣಕ್ಕೆ ಶೋ ನಡೆಯುತ್ತಿದ್ದ ಬೆಂಗಳೂರು ದಕ್ಷಿಣದ ಬಿಡದಿ ಕೈಗಾರಿಕಾ ಪ್ರದೇಶದಲ್ಲಿನ ಜಾಲಿವುಡ್ ಸ್ಟುಡಿಯೋ ಗೇಟ್‌ಗೆ ಬೇಗ ಜಡಿಯಲಾಗಿದ್ದು, ‘ಬಿಗ್ ಬಾಸ್’ ಮನೆಗೂ ಅಧಿಕಾರಿಗಳು ಬೀಗ ಹಾಕಿದ್ದಾರೆ.
ಸಂಜೆ 6.30ಕ್ಕೆ ಶೋ ಚಿತ್ರೀಕರಣ ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ‘ಬಿಗ್ ಬಾಸ್’ ಮನೆಯಿಂದ ಎಲ್ಲಾ ಸ್ಪರ್ಧಿಗಳನ್ನು ಹೊರಗೆ ಕರೆತರಲಾಗಿದ್ದು, ಅವರನ್ನು ಮೊದಲು ಸ್ಟುಡಿಯೋ ಆವರಣದಲ್ಲಿದ್ದ ಥಿಯೇಟರ್‌ಗೆ ಕರೆದುಕೊಂಡು ಹೋಗಲಾಗಿತ್ತು. ನಂತರ ಎಲ್ಲಾ ಸ್ಪರ್ಧಿಗಳನ್ನು ವಾಹನಗಳಲ್ಲಿ ಬೇರೆ ಕಡೆಗೆ ಕರೆದೊಯ್ಯಲಾಗಿದೆ.
ಪ್ರಸ್ತುತ ಎಲ್ಲಾ ಸ್ಪರ್ಧಿಗಳನ್ನು ಹೋಟೆಲ್‌ನಲ್ಲಿ ತಾತ್ಕಾಲಿಕವಾಗಿ ಇರಿಸಲಾಗುವುದು. ಅವರನ್ನು ಒಂದೆರಡು ದಿನ ಹೋಟೆಲ್‌ನಲ್ಲಿ ಇರಿಸಿ ನಂತರ ಬೇರೆ ಸ್ಟುಡಿಯೋಗೆ ಸ್ಥಳಾಂತರಿಸಲಾಗುವುದು ಎಂದು ನಿರ್ಮಾಣ ಸಂಸ್ಥೆ ತಿಳಿಸಿದೆ. ಬೇರೆ ಸ್ಟುಡಿಯೋದಲ್ಲಿ ‘ಬಿಗ್ ಬಾಸ್’ ಶೋ ಮತ್ತೆ ನಡೆಯಲಿದ್ದು, ಚಿತ್ರೀಕರಣ ಪುನಃ ಶುರುವಾಗಲಿದೆ ಎನ್ನಲಾಗಿದೆ.
ಈ ಸಂಕಷ್ಟದ ನಡುವೆಯೂ ನಿರ್ಮಾಣ ತಂಡವು ಪುನಃ ಶೋವನ್ನು ಪ್ರಾರಂಭಿಸಲು ಸಜ್ಜಾಗಿದೆ. ಹೊಸ ಸ್ಟುಡಿಯೋದಲ್ಲಿ ಮತ್ತೆ ‘ಬಿಗ್ ಬಾಸ್’ ಮನೆಯನ್ನು ಸಜ್ಜುಗೊಳಿಸಲು ತಂಡವು ಕೆಲಸ ಪ್ರಾರಂಭಿಸಿದೆ. ಸ್ಪರ್ಧಿಗಳು ಮತ್ತು ಕ್ರೂ ಸದಸ್ಯರ ಸುರಕ್ಷತೆ ಮತ್ತು ಸೌಕರ್ಯವನ್ನು ಖಾತ್ರಿಪಡಿಸಿಕೊಂಡು ಶೋವನ್ನು ಪುನಃ ಪ್ರಾರಂಭಿಸಲು ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗುವುದು.